ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಚಾಂಗ್‌‘ ಚಂಡಮಾರುತದ: ಮೃತರ ಸಂಖ್ಯೆ 12ಕ್ಕೆ ಏರಿಕೆ

Published 5 ಡಿಸೆಂಬರ್ 2023, 19:30 IST
Last Updated 5 ಡಿಸೆಂಬರ್ 2023, 19:30 IST
ಅಕ್ಷರ ಗಾತ್ರ

ಚೆನ್ನೈ: ‘ಮಿಚಾಂಗ್‌‘ ಚಂಡಮಾರುತದ ಪರಿಣಾಮ ಚೆನ್ನೈನಲ್ಲಿ ಮಂಗಳವಾರವು ಮುಂದುವರಿದಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿದ್ದು, ಇತರೆ 11 ಮಂದಿ ಗಾಯಗೊಂಡಿದ್ದಾರೆ. ಮಳೆ ಬಾಧಿತ ವಸತಿ ಪ್ರದೇಶಗಳಿಂದ 54 ಕುಟುಂಬಗಳನ್ನು ರಕ್ಷಿಸಲಾಗಿದೆ.

ಮೃತರಲ್ಲಿ 60 ವರ್ಷ ಮಹಿಳೆ, 48 ವರ್ಷದ ಕಾನ್‌ಸ್ಟೆಬಲ್ ಸೇರಿದ್ದಾರೆ. ತಾತ್ಕಾಲಿಕ ಜನರೇಟರ್‌ ಕೊಠಡಿ ಕುಸಿದು ಅದರಲ್ಲಿ ಸಿಲುಕಿದ್ದ ಮೂವರು ಹಾಗೂ ಅದ್ಯಾರ್‌ ನದಿ ಪ್ರವಾಹದಿಂದ ಬಹುತೇಕ ಮುಳುಗಡೆಯಾಗಿದ್ದ ಮನೆಯೊಂದರಿಂದ ಮೂವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ, ಇತರೆ ನಾಲ್ಕು ಜಿಲ್ಲೆಗಳಲ್ಲಿ ಜನಜೀವನ ಮಂಗಳವಾರವೂ ಅಸ್ತವ್ಯಸ್ತಗೊಂಡಿತ್ತು. ಚೆನ್ನೈನ ಬಹುತೇಕ ಪ್ರದೇಶಗಳಲ್ಲಿ ನೀರು ನಿಂತಿದೆ. ಎರಡು ದಿನ ಸತತ ಸುರಿದ ಮಳೆ ಮಂಗಳವಾರ ಭಾಗಶಃ ಬಿಡುವು ನೀಡಿತ್ತು. ಇದು, ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲು ತಂಡಗಳಿಗೆ ನೆರವಾಯಿತು.  

ಅಧಿಕಾರಿಗಳ ಪ್ರಕಾರ, ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ತಗ್ಗು ಭಾಗದ ಮುತಿಯಾಲ್‌ಪೇಟ್‌ನಲ್ಲಿ 54 ಕುಟುಂಬ ರಕ್ಷಿಸಿದ್ದು ಇವರಲ್ಲಿ ನವಜಾತ ಶಿಶು, ಬಾಣಂತಿ ಸೇರಿದ್ದಾರೆ. ಕೊತ್ತೂರುಪುರಂನ ಶಿಬಿರದಲ್ಲಿ 250 ಜನ ಆಶ್ರಯ ಪಡೆದಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಬಸ್‌ನಿಂದ 22 ಪ್ರಯಾಣಿಕರನ್ನು ರಕ್ಷಿಸಲಾಗಿದೆ.  

ಮಳೆ ಪರಿಣಾಮ ಕುರಿತಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು, ‘ಸಮರೋಪಾದಿಯಲ್ಲಿ ರಕ್ಷಣಾ ಚಟುವಟಿಕೆಗಳು ನಡೆದಿವೆ. ಚೆನ್ನೈ ಸೇರಿದಂತೆ ಬಾಧಿತ ಜಿಲ್ಲೆಗಳಲ್ಲಿ ಸಂತ್ರಸ್ತರಿಗಾಗಿ ಅಗತ್ಯ ಶಿಬಿರಗಳನ್ನು ಸ್ಥಾಪಿಸಲಾಗಿದೆ’ ಎಂದರು.

ಈ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರೂ ಸೇರಿ ಬಾಧಿತ ಪ್ರದೇಶಗಳಲ್ಲಿ ಜನರಿಗೆ 11 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿಸಲು ಇತರೆ ಜಿಲ್ಲೆಗಳಿಂದ ಸುಮಾರು 5,000 ಜನರನ್ನು ಕರೆಯಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

2015ರಲ್ಲಿ ಎದುರಾಗಿದ್ದ ಪರಿಸ್ಥಿತಿಗೆ ಹೋಲಿಸಿದರೆ ಈ ಬಾರಿ ಪರಿಹಾರ ಕ್ರಮಗಳು ಸುಧಾರಿಸಿವೆ. ಚೆಂಬಾರಂಬಕ್ಕಂ ಜಲಾಶಯದಿಂದ ಅದ್ಯಾರ್‌ ನದಿಗೆ ಏಕಾಏಕಿ 1 ಲಕ್ಷ ಕ್ಯೂಸೆಕ್‌ ನೀರು ಹರಿಸಿದ್ದು, ಸಮಸ್ಯೆ ಉಲ್ಬಣವಾಗಲು ಕಾರಣ ಎಂದು ಮುಖ್ಯಮಂತ್ರಿ ಹೇಳಿದರು.

ಬಾಧಿತ ಪ್ರದೇಶ ಕೊಯಂಬೇಡುವಿನ ನಿವಾಸಿ, ಪಿಟಿಐ ಸುದ್ದಿ ಸಂಪಾದಕ ಆ್ಯನಿ ಥಾಮಸ್‌ ಅವರು, ‘2005ರಲ್ಲೂ ಇಂಥದೇ ಸಮಸ್ಯೆ ಎದುರಾಗಿತ್ತು. ಆಗ ಮೂರು ದಿನ ಸಿಕ್ಕಿಬಿದ್ದಿದ್ದೆವು. ಈಗ ಮತ್ತೆ ಅದೇ ಸ್ಥಿತಿ ಬಂದಿದೆ. ವಿದ್ಯುತ್, ನೀರಿನ ಸಮಸ್ಯೆ ಈಗಾಗಲೇ ಬಾಧಿಸುತ್ತಿದೆ’ ಎಂದು ಹೇಳಿದರು.

ಚೆನ್ನೈನಲ್ಲಿ ಜಲಾವೃತ ರಸ್ತೆಯಲ್ಲಿಯೇ ನಿಂತು ಮಂಗಳವಾರ ಜನರು ಹಾಲು ಖರೀದಿಸಿದರು –ಪಿಟಿಐ ಚಿತ್ರ
ಚೆನ್ನೈನಲ್ಲಿ ಜಲಾವೃತ ರಸ್ತೆಯಲ್ಲಿಯೇ ನಿಂತು ಮಂಗಳವಾರ ಜನರು ಹಾಲು ಖರೀದಿಸಿದರು –ಪಿಟಿಐ ಚಿತ್ರ

ನಟ ಅಮಿರ್‌ಖಾನ್‌ ಸಹನಟನ ರಕ್ಷಣೆ

ಚೆನ್ನೈ: ಮಳೆ ಬಾಧಿತ ಪ್ರದೇಶ ಇಲ್ಲಿನ ಕರ‍್ಪಕಂನ ಮನೆಯೊಂದಲ್ಲಿ ವಾಸವಿದ್ದ ನಟ ಅಮೀರ್‌ಖಾನ್‌ ಸಹನಟ ಕೂಡಾ ಮಳೆ ಸಮಸ್ಯೆಗೆ ಸಿಲುಕಿದವರಲ್ಲಿ ಸೇರಿದ್ದಾರೆ. ಇವರು ಸುಮಾರು 24 ಗಂಟೆ ನೀರು ವಿದ್ಯುತ್‌ ಸಂಪರ್ಕವಿಲ್ಲದೆ ಮೊಬೈಲ್‌ ಫೋನ್‌ ಸಂಪರ್ಕವೂ ಇಲ್ಲದೆ ಪಡಿಪಾಟಲು ಪಟ್ಟಿದ್ದಾರೆ. ಮಾಹಿತಿ ತಿಳಿದ ಹಿಂದೆಯೇ ರಕ್ಷಣಾ ಸಿಬ್ಬಂದಿ 24 ಗಂಟೆಗಳ ಬಳಿಕ ಅಮಿರ್ ಖಾನ್‌ ನಟ ವಿಷ್ಣು ವಿಶಾಲ್‌ ಹಾಗೂ ವಸತಿ ಪ್ರದೇಶದ ಇತರೆ ನಿವಾಸಿಗಳನ್ನು ದೋಣಿಗಳ ನೆರವಿನಲ್ಲಿ ಸುರಕ್ಷಿತ ಸ್ಥಳಗಳತ್ತ ಕರೆದೊಯ್ದಿದ್ದಾರೆ ಸಹನಟ ವಿಷ್ಣು ವಿಶಾಲ್‌ ಅವರು ಈ ಸಂಬಂಧ ಛಾಯಾಚಿತ್ರ ಮತ್ತು ಇತರೆ ಮಾಹಿತಿಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮಿರ್‌ ಖಾನ್‌ ಅವರು ಇತರೆ ನಿವಾಸಿಗಳ ಜೊತೆಗೆ ದೋಣಿಯಲ್ಲಿ ಕುಳಿತು ಸುರಕ್ಷಿತ ಪ್ರದೇಶದತ್ತ ತೆರಳುತ್ತಿರುವುದು ಚಿತ್ರದಲ್ಲಿದೆ. ಅನಾರೋಗ್ಯದ ಪರಿಣಾಮ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿಯ ಜೊತೆಗಿರಲು ಅಮಿರ್‌ ಖಾನ್‌ ಕೆಲ ತಿಂಗಳ ಹಿಂದೆ ಚೆನ್ನೈಗೆ ಸ್ಥಳಾಂತರಗೊಂಡಿದ್ದರು. 

ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಜನರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು –ಪಿಟಿಐ ಚಿತ್ರ
ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಜನರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು –ಪಿಟಿಐ ಚಿತ್ರ

ಆಂಧ್ರ ಕರಾವಳಿಯತ್ತ ‘ಮಿಚಾಂಗ್’

ಅಮರಾವತಿ: ಮಿಚಾಂಗ್‌ ಚಂಡಮಾರುತ ಮಂಗಳವಾರ ಸಂಜೆಯ ವೇಳೆಗೆ ಕರಾವಳಿ ಭಾಗದಲ್ಲಿ ಅಪ್ಪಳಿಸಬಹುದು ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಆಂಧ್ರದ ಬಾಪಟ್ಲಾ ಮತ್ತು ಇತರೆ ಭಾಗಗಳಿಂದ ಸುಮಾರು 9450 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.  ಹವಾಮಾನ ಇಲಾಖೆಯ ಪ್ರಕಾರ ಆಂಧ್ರದ ಕರಾವಳಿ ಜಿಲ್ಲೆಗಳು ಮತ್ತು ಯನಂನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ನೆಲ್ಲೂರು ಮಚಿಲಿಪಟ್ಟಣಂ ಬಾಪಟ್ಲ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಬಹುದು. ಈ ಭಾಗದಲ್ಲಿ ಚಂಡಮಾರುತದ ವೇಗವು ಗಂಟೆಗೆ ಗರಿಷ್ಠ 90–100 ಕಿ.ಮೀ ವೇಗದಲ್ಲಿ ಇರಲಿದೆ. ಕ್ರಮೇಣ 110 ಕಿ.ಮೀ.ವರೆಗೂ ಹೆಚ್ಚುವ ಸಂಭವವು ಇದೆ ಎಂದು ಇಲಾಖೆಯು ಮುನ್ಸೂಚನೆ ನೀಡಿದೆ. ಒಡಿಶಾದ ವಿವಿಧೆಡೆ ಮಳೆ : ಮಿಚಾಂಗ್ ಚಂಡಮಾರುತದ ಪರಿಣಾಮ ಒಡಿಶಾದ ಮಲ್ಕಂಗಿರಿ ಕೊರಪುಟ್ ರಾಯಗಢ ಗಂಜಾಂ ಗಜಪತಿ ಜಿಲ್ಲೆಗಳಲ್ಲಿ ಸೋಮವಾರ ಸಂಜೆಯೇ ಮಳೆ ಶುರುವಾಗಿದೆ. ಮಂಗಳವಾರ ಬೆಳಿಗ್ಗೆ ದಾಖಲಾದಂತೆ 24 ಗಂಟೆಗಳಲ್ಲಿ ವಿವಿಧೆಡೆ 1.5 ಮಿ.ಮೀ ಯಿಂದ 8.5 ಮಿ.ಮೀ ವರೆಗೆ ಮಳೆಯಾಗಿದೆ.

ಜಲಾವೃತ ವಸತಿ ಪ್ರದೇಶಗಳಲ್ಲಿ ಸಿಲುಕಿದ್ದ ಜನರನ್ನು ಸೇನಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು –ಪಿಟಿಐ ಚಿತ್ರ 
ಜಲಾವೃತ ವಸತಿ ಪ್ರದೇಶಗಳಲ್ಲಿ ಸಿಲುಕಿದ್ದ ಜನರನ್ನು ಸೇನಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು –ಪಿಟಿಐ ಚಿತ್ರ 

ಆವಿನ್‌ ಡೈರಿ ಘಟಕಗಳು ಮುಳುಗಡೆ  

ರಾಜ್ಯದ ಹೈನುಗಾರಿಕೆ ಸಚಿವ ಟಿ.ಮನೊ ತ್ಯಾಗರಾಜ್‌ ಅವರು ‘ಶೋಲಿಂಗಾನಲ್ಲೂರು ಮತ್ತು ಮಾದಾವರಂನಲ್ಲಿ ಇರುವ ರಾಜ್ಯದ ‘ಆವಿನ್‌’ ಹಾಲು ಒಕ್ಕೂಟದ ಘಟಕಗಳು ಪೂರ್ಣವಾಗಿ ಮುಳುಗಿವೆ’ ಎಂದು ತಿಳಿಸಿದ್ದಾರೆ.  ಆದರೆ ಅಗತ್ಯ ಪ್ರಮಾಣದ ಹಾಲು ಮತ್ತು ಹಾಲು ಉತ್ಪನ್ನಗಳು ಲಭ್ಯವಿವೆ. ಹಾಲು ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಬಿಡಿ ಮಾರಾಟಗಾರರು ಅಗತ್ಯ ಸಹಕಾರವನ್ನು ನೀಡಬೇಕು ಎಂದೂ ಕೋರಿದ್ದಾರೆ. 

‘₹ 5000 ಕೋಟಿ ಮಧ್ಯಂತರ ಪರಿಹಾರಕ್ಕೆ ಮನವಿ’

ನವದೆಹಲಿ: ಚೆನ್ನೈ ಇತರ ಮಳೆ ಬಾಧಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳು ಹಾಗೂ ಮೂಲಸೌಕರ್ಯಗಳ ಮರುಸ್ಥಾಪನೆಗಾಗಿ ₹ 5000 ಕೋಟಿ ಮಧ್ಯಂತರ ಪರಿಹಾರ ನೀಡುವಂತೆ ನೀಡುವಂತೆ ತಮಿಳುನಾಡು ಸರ್ಕಾರ ಕೇಂದ್ರವನ್ನು ಕೋರಿದೆ. ರಾಜ್ಯಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಡಿಎಂಕೆ ನಾಯಕ ತಿರುಚಿ ಶಿವ ಅವರು ಧಾರಾಕಾರ ಮಳೆಯಿಂದಾಗಿ ಚೆನ್ನೈ ಹಾಗೂ ನಾಲ್ಕು ಜಿಲ್ಲೆಗಳು ಬಹುತೇಕ ಬಹುತೇಕ ಮುಳುಗಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT