ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸೆಗಳ್ಳ ಆರೋಪ: ನಿರ್ಧರಿಸಲು ಚುನಾವಣಾ ಆಯೋಗಕ್ಕೆ 8 ವಾರ ಗಡುವು

Published 21 ಡಿಸೆಂಬರ್ 2023, 16:09 IST
Last Updated 21 ಡಿಸೆಂಬರ್ 2023, 16:09 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಕಿಸೆಗಳ್ಳ’ ಎಂದು ಆರೋಪಿಸಿದ್ದ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ನೀಡಿರುವ ನೋಟಿಸ್‌ ಸಂಬಂಧ ಎಂಟು ವಾರಗಳ ಒಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ (ಇ.ಸಿ) ದೆಹಲಿ ಹೈಕೋರ್ಟ್‌ ಗುರುವಾರ ಸೂಚಿಸಿದೆ. 

ರಾಹುಲ್‌ ವಿರುದ್ಧ ಕ್ರಮಕ್ಕೆ ಹಾಗೂ ರಾಜಕೀಯ ಮುಖಂಡರಿಂದ ಇಂತಹ ಹೀನಾಯ ಹೇಳಿಕೆ ತಡೆಯಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಅವರ ನೇತೃತ್ವದ ಪೀಠವು, ಈ ಸೂಚನೆ ನೀಡಿದೆ.

ರಾಹುಲ್‌ ಗಾಂಧಿ ಅವರು ತಮ್ಮ ಭಾಷಣದಲ್ಲಿ ನೀಡಿದ ಈ ಹೇಳಿಕೆ ಉತ್ತಮ ಅಭಿರುಚಿಯಿಂದ ಕೂಡಿಲ್ಲ. ಇಂತಹ ಹೇಳಿಕೆಗಳಿಂದ ನೊಂದವರಿಗೆ ಮಾನನಷ್ಟ ಮೊಕದ್ದಮೆ ದಾಖಲಿಸುವ ಪರಿಹಾರವೂ ಇದೆ ಎಂದು ನ್ಯಾಯಾಲಯ ಹೇಳಿದೆ.

‘ಆಯೋಗದ ನೋಟಿಸ್‌ಗೆ ಪ್ರತ್ಯುತ್ತರ ಸಲ್ಲಿಸುವ ಗಡುವು ಮುಗಿದಿದೆ. ರಾಹುಲ್‌ ಗಾಂಧಿಯವರಿಂದ ಉತ್ತರ ಬಂದಿಲ್ಲ’ ಎಂಬ ಮಾಹಿತಿ ಪರಿಗಣಿಸಿದ ಪೀಠದಲ್ಲಿದ್ದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ, ಅರ್ಜಿ ಸಂಬಂಧ 8 ವಾರಗಳೊಳಗೆ ತ್ವರಿತವಾಗಿ ನಿರ್ಧರಿಸಲು ಇ.ಸಿಗೆ ನಿರ್ದೇಶನ ನೀಡಿದರು. ಅಲ್ಲದೆ, ಇದನ್ನು ಇ.ಸಿ ಪರಿಶೀಲಿಸುತ್ತಿರುವುದರಿಂದ ಅರ್ಜಿ ವಿಲೇವಾರಿಗೆ ತೀರ್ಮಾನಿಸಿತು.

‘ಮಾರ್ಗಸೂಚಿಗಳನ್ನು ರೂಪಿಸುವ ವಿಷಯದಲ್ಲಿ ಕಾನೂನು ರಚಿಸಲು ಸಂಸತ್ತು ಸ್ವತಂತ್ರವಾಗಿದೆ ಮತ್ತು ಜನರ ಬುದ್ಧಿವಂತಿಕೆಯನ್ನು ಅನುಮಾನಿಸಬಾರದು’ ಎಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರು, ‘ನಾವು ಇದನ್ನು ಸರಿಯಲ್ಲ, ಉತ್ತಮ ಅಭಿರುಚಿಯಿಂದ ಕೂಡಿಲ್ಲವೆಂದಷ್ಟೇ ಹೇಳಬಹುದು. ಜನರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾರೆ. ಅವರು ಚುನಾವಣೆಯಲ್ಲಿ ತಮ್ಮ ತೀರ್ಪು ನೀಡುತ್ತಾರೆ’ ಎಂದೂ ಹೇಳಿದರು. 

ನವೆಂಬರ್ 22 ರಂದು ರಾಜಸ್ಥಾನದಲ್ಲಿ ನಡೆದ ರ‍್ಯಾಲಿಗಳಲ್ಲಿ ರಾಹುಲ್‌ ಗಾಂಧಿಯವರು, ಪ್ರಧಾನಿ ಮತ್ತು ಗೃಹ ಸಚಿವರು ಸೇರಿ ಹಲವು ಪ್ರಮುಖ ಸಚಿವರ ವಿರುದ್ಧ ಕೀಳುಮಟ್ಟದ ಆರೋಪ ಮಾಡಿದ್ದಾರೆ ಎಂದು ಅರ್ಜಿದಾರ ಭಾರತ್ ನಗರ್ ಹೈಕೋರ್ಟ್‌ಗೆ ತಿಳಿಸಿದ್ದರು. ಇ.ಸಿ ನ.23ರಂದು ರಾಹುಲ್‌ ಗಾಂಧಿ ಅವರಿಗೆ ಅವರ ನಿಲುವು ತಿಳಿಸುವಂತೆ ನೋಟಿಸ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT