ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ: ಯೋಧನ ತುಂಡಾಗಿದ್ದ ಹಸ್ತ ಜೋಡಿಸಿದ ವೈದ್ಯರು

Published 12 ಏಪ್ರಿಲ್ 2024, 16:00 IST
Last Updated 12 ಏಪ್ರಿಲ್ 2024, 16:00 IST
ಅಕ್ಷರ ಗಾತ್ರ

ನವದೆಹಲಿ: ಸೇನಾ ಯೋಧರು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಇರಿಸಿದ ಹೆಜ್ಜೆಗಳು, ವಿಮಾನವು ರಾತ್ರಿಯ ಹೊತ್ತಿನಲ್ಲಿಯೂ ಬಂದಿಳಿದಿದ್ದು, ದೆಹಲಿಯಲ್ಲಿನ ವೈದ್ಯರು ನಡೆಸಿದ ಒಂಬತ್ತು ತಾಸು ಅವಧಿಯ ಶಸ್ತ್ರಚಿಕಿತ್ಸೆ...

ಯೋಧರೊಬ್ಬರ ತುಂಡಾಗಿದ್ದ ಎಡಗೈ ಹಸ್ತವನ್ನು ಮೊದಲಿನಂತೆ ಜೋಡಿಸಲು ಇವೆಲ್ಲವುಗಳ ಪರಿಣಾಮವಾಗಿ ಸಾಧ್ಯವಾಗಿದೆ. ನಾಯ್ಕ್ ಕೊಂಚೊಕ್ ಗೈಲ್ಸಿನ್ ಅವರನ್ನು ಏಪ್ರಿಲ್‌ 9ರಂದು ಲೇಹ್‌ನಲ್ಲಿನ ಮಿಲಿಟರಿ ಗ್ಯಾರಿಸನ್ ಆಸ್ಪತ್ರೆಗೆ ಕರೆತಂದಾಗ ಅವರ ಎಡಗೈ ಹೆಬ್ಬೆರಳು ಮತ್ತು ತೋರುಬೆರಳಿನ ಭಾಗವು ಸಂಪೂರ್ಣವಾಗಿ ತುಂಡಾಗಿತ್ತು. ಲಡಾಕ್ ಸ್ಕೌಟ್ಸ್‌ ರೆಜಿಮೆಂಟ್‌ನ ಈ ಯೋಧ ಯಂತ್ರವೊಂದನ್ನು ಹಿಡಿದು ಕೆಲಸ ಮಾಡುವ ಸಂದರ್ಭದಲ್ಲಿ ಈ ರೀತಿ ಆಗಿತ್ತು.

ಲೇಹ್‌ನ ಆಸ್ಪತ್ರೆಯಲ್ಲಿ ಇವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಯಿತು. ಆದರೆ ಈ ಯೋಧನ ಹಸ್ತವನ್ನು ಜೋಡಿಸಲು ವಿಶೇಷವಾದ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎಂಬುದನ್ನು ವೈದ್ಯರು ಅರಿತರು. ಆ ಶಸ್ತ್ರಚಿಕಿತ್ಸೆ ನಡೆಸುವ ಕೌಶಲ ಇರುವ ವೈದ್ಯರು ಹಾಗೂ ಇತರ ಸಿಬ್ಬಂದಿ ಲೇಹ್‌ನಲ್ಲಿ ಲಭ್ಯರಿರಲಿಲ್ಲ.

ಗೈಲ್ಸಿನ್ ಅವರನ್ನು ಸೇನೆಯ ದೆಹಲಿಯ ಆಸ್ಪತ್ರೆಗೆ ರವಾನಿಸಲು ತೀರ್ಮಾನಿಸಲಾಯಿತು. ತುಂಡಾಗಿದ್ದ ಅಂಗವನ್ನು ಶೀತಲೀಕೃತ ಪೆಟ್ಟಿಗೆಯಲ್ಲಿ ಇರಿಸಲಾಯಿತು. ಆರರಿಂದ ಎಂಟು ತಾಸುಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಭಾರತೀಯ ವಾಯುಪಡೆಯು ತನ್ನ ಸಿ–130ಜೆ ವಿಮಾನವನ್ನು ಲೇಹ್‌ಗೆ ರವಾನಿಸಿತು.

ರಾತ್ರಿಯ ವೇಳೆ ಲ್ಯಾಂಡಿಂಗ್‌ಗೆ ಬಳಸುವ ಸಾಧನಗಳ ನೆರವಿನಿಂದ ಲೇಹ್‌ನಲ್ಲಿ ಇಳಿದ ವಿಮಾನವು, ಯೋಧನನ್ನು ಕರೆದುಕೊಂಡು ದೆಹಲಿಗೆ ತೆರಳಿತು. ‘ಭೂಸೇನೆಯಿಂದ ಮನವಿ ಬಂದ ಒಂದೇ ತಾಸಿನಲ್ಲಿ ಯೋಧನನ್ನು ಕರೆದುಕೊಂಡು ಬರಲು ವಾಯುಪಡೆಯು ಅಗತ್ಯ ವ್ಯವಸ್ಥೆ ಕಲ್ಪಿಸಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದೆಹಲಿಗೆ ಕರೆತಂದ ನಂತರ ಗೈಲ್ಸಿನ್ ಅವರನ್ನು ಪಾಲಂ ತಾಂತ್ರಿಕ ಪ್ರದೇಶದಿಂದ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿಯ ಸುಪರ್ದಿಯಲ್ಲಿ ಕರೆದೊಯ್ಯಲಾಯಿತು. ಅವರ ಕೈ, ಹೆಬ್ಬೆರಳು ಹಾಗೂ ತೋರುಬೆರಳನ್ನು ಮರುಜೋಡಿಸಲು ತೀರಾ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯೊಂದನ್ನು ನಡೆಸಲಾಯಿತು. ಗೈಲ್ಸಿನ್ ಅವರ ಆರೋಗ್ಯ ಈಗ ಸ್ಥಿರವಾಗಿದೆ.

‘ಯೋಧರ ಕೈಬಿಡಬಾರದು, ಸವಾಲಿನ ಸಂದರ್ಭಗಳಲ್ಲಿಯೂ ಸಾಧ್ಯವಿರುವಮಟ್ಟಿಗೆ ಅತ್ಯುತ್ತಮ ರೀತಿಯಲ್ಲಿ ಸೌಲಭ್ಯ ಒದಗಿಸಬೇಕು ಎಂದು ಸೇನೆ ಪ್ರತಿಪಾದಿಸುವ ಮೌಲ್ಯಗಳನ್ನು ಈ ಘಟನೆಯು ತೋರಿಸಿಕೊಟ್ಟಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT