ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನನಷ್ಟ ಪ್ರಕರಣ | ಕೇಜ್ರಿವಾಲ್‌ ಮೇಲ್ಮನವಿ: ನಾಳೆ ವಿಚಾರಣೆ ಸಾಧ್ಯತೆ

Published 12 ಮೇ 2024, 15:32 IST
Last Updated 12 ಮೇ 2024, 15:32 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ತಮಗೆ ಸಮನ್ಸ್‌ ನೀಡಿರುವುದನ್ನು ಎತ್ತಿಹಿಡಿದು ದೆಹಲಿ ಹೈಕೋರ್ಟ್‌ ನೀಡಿರುವ ಆದೇಶ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಲ್ಲಿಸಿರುವ ಮೇಲ್ಮನವಿಯು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಂಕರ್‌ ದತ್ತಾ ಅವರಿರುವ ಪೀಠವು ಈ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆ ಇದೆ.

‘ಬಿಜೆಪಿ ಐಟಿ ವಿಭಾಗಕ್ಕೆ ಸಂಬಂಧಿಸಿದ, ಧ್ರುವ ರಾಠಿ ಅವರ ವಿಡಿಯೊವನ್ನು ಮರು ಟ್ವೀಟ್‌ ಮಾಡುವ ಮೂಲಕ ನಾನು ತಪ್ಪು ಮಾಡಿರುವೆ’ ಎಂಬುದಾಗಿ ಕೇಜ್ರಿವಾಲ್‌ ಅವರು ಫೆಬ್ರುವರಿ 26ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

‘ಈ ವಿಚಾರವಾಗಿ ದೂರುದಾರರಲ್ಲಿ ಕ್ಷಮೆ ಕೇಳುವಿರಾ’ ಎಂದು ಮಾರ್ಚ್‌ 11ರಂದು ಸುಪ್ರೀಂ ಕೋರ್ಟ್‌ ಕೇಜ್ರಿವಾಲ್‌ ಅವರನ್ನು ಕೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ದೂರುದಾರ ವಿಕಾಸ್‌ ಸಾಂಕೃತ್ಯಾಯನ ಎಂಬುವವರು, ಸಾಮಾಜಿಕ ಜಾಲತಾಣಗಳಾದ ‘ಎಕ್ಸ್‌’ ಅಥವಾ ಇನ್‌ಸ್ಟಾಗ್ರಾಮ್‌ ಮೂಲಕ ಕೇಜ್ರಿವಾಲ್‌ ಕ್ಷಮಾಪಣೆ ಕೋರಬಹುದು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

‘ಮರುಟ್ವೀಟ್‌ ಮಾಡುವ ಮೂಲಕ ನಾನು ತಪ್ಪು ಮಾಡಿದ್ದೇನೆ ಎಂದಷ್ಟೆ ನನ್ನ ಕಕ್ಷಿದಾರ ಹೇಳಬಹುದು’ ಎಂದು ಕೇಜ್ರಿವಾಲ್‌ ಪರ ವಾದಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ವಾದ–ಪ್ರತಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್‌, ಕೇಜ್ರಿವಾಲ್‌ ಅವರಿಗೆ ಯಾವುದೇ ನೋಟಿಸ್‌ ನೀಡಿರಲಿಲ್ಲ. ಅಲ್ಲದೇ, ‘ಕೇಜ್ರಿವಾಲ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿರುವ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲು ಇಚ್ಛಿಸುವಿರಾ’ ಎಂದು ಅರ್ಜಿದಾರರನ್ನು ಫೆಬ್ರುವರಿ 26ರಂದು ಪ್ರಶ್ನಿಸಿತ್ತು.

ಅಲ್ಲದೇ, ಮುಂದಿನ ಆದೇಶದವರೆಗೆ, ಕೇಜ್ರಿವಾಲ್‌ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಕೈಗೆತ್ತಿಕೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೂ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಪ್ರಕರಣ ಏನು: ಮಾನಹಾನಿಕರ ಎನ್ನಲಾದ ವಿಡಿಯೊವೊಂದನ್ನು ಯುಟ್ಯೂಬರ್ ಧ್ರುವ ರಾಠಿ ಮಾಡಿದ್ದು, ಅದನ್ನು ಕೇಜ್ರಿವಾಲ್‌ ಅವರು 2018ರ ಮೇ ತಿಂಗಳಲ್ಲಿ ಟ್ವಿಟರ್‌ನಲ್ಲಿ (ಈಗ ‘ಎಕ್ಸ್‌’) ಮತ್ತೆ ಹಂಚಿಕೊಂಡಿದ್ದರು ಎಂಬ ಆರೋಪ ಇದೆ.

ಈ ಬಗ್ಗೆ ವಿಕಾಸ್‌ ಸಾಂಕೃತ್ಯಾಯನ ದೂರು ದಾಖಲಿಸಿದ್ದಾರೆ.

‘ಜರ್ಮನಿಯಲ್ಲಿ ನೆಲೆಸಿರುವ ರಾಠಿ, ‘ಬಿಜೆಪಿ ಐಟಿ ವಿಭಾಗ ಭಾಗ–2’ ಎಂಬ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಲವಾರು ತಪ್ಪು ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ’ ಎಂದು ವಿಕಾಸ್‌ ತಮ್ಮ ದೂರಿನಲ್ಲಿ ತಿಳಿಸಿದ್ದರು.

‘ಮಾನಹಾನಿಕರ ವಸ್ತು–ವಿಷಯವನ್ನು ಮತ್ತೆ ಹಂಚಿಕೊಂಡಿರುವಾಗ ಮಾನನಷ್ಟಕ್ಕೆ ಸಂಬಂಧಿಸಿದ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬಹುದು’ ಎಂದು ದೆಹಲಿ ಹೈಕೋರ್ಟ್‌ ಫೆಬ್ರುವರಿ 5ರಂದು ನೀಡಿದ ಆದೇಶದಲ್ಲಿ ಹೇಳಿತ್ತು.

ಕೇಜ್ರಿವಾಲ್‌ ವಿರುದ್ಧ ವಿಚಾರಣಾ ನ್ಯಾಯಾಲಯ 2019ರಲ್ಲಿ ಹೊರಡಿಸಿದ್ದ ಸಮನ್ಸ್‌ ರದ್ದು ಮಾಡಲು ನಿರಾಕರಿಸಿದ್ದ ಹೈಕೋರ್ಟ್‌, ‘ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಮಾನಹಾನಿಕರ ಪೋಸ್ಟ್‌ ಹಂಚಿಕೊಂಡಾಗ ಅದರಿಂದಾಗುವ ಪರಿಣಾಮ ಅಗಾಧ’ ಎಂದೂ ಹೇಳಿತ್ತು.

‘ಇಂತಹ ನಡೆ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ, ದುರುದ್ದೇಶ ಹೊಂದಿದ ವ್ಯಕ್ತಿಗಳು ಮಾನಹಾನಿಕರ ವಸ್ತುವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಉತ್ತೇಜನ ನೀಡಿದಂತಾಗುತ್ತದೆ. ನಾವು ಮರುಟ್ವೀಟ್‌ ಮಾಡಿದ್ದೇವಷ್ಟೆ ಎಂದು ಹೇಳಲು ಅವರಿಗೆ ಅವಕಾಶ ಕೊಟ್ಟಂತೆಯೂ ಆಗುತ್ತದೆ’ ಎಂದೂ ಹೈಕೋರ್ಟ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT