ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆ ಮಾಜಿ ಮುಖ್ಯಸ್ಥ ಎಲ್‌. ರಾಮದಾಸ್ ನಿಧನ

Published 15 ಮಾರ್ಚ್ 2024, 15:51 IST
Last Updated 15 ಮಾರ್ಚ್ 2024, 15:51 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ (ನಿವೃತ್ತ) ಲಕ್ಷ್ಮೀನಾರಾಯಣ ರಾಮದಾಸ್ (91) ಶುಕ್ರವಾರ ನಿಧನರಾಗಿದ್ದಾರೆ.

1971ರ ಭಾರತ– ಪಾಕಿಸ್ತಾನ ಯುದ್ಧದಲ್ಲಿ ವೀರೋಚಿತ ಪಾತ್ರ ವಹಿಸಿದ್ದ ಅವರು ನಿವೃತ್ತಿಯ ನಂತರ ಪರಮಾಣು ನಿಶ್ಯಸ್ತ್ರೀಕರಣಕ್ಕೆ ಧ್ವನಿ ಎತ್ತಿ, ಶಾಂತಿದೂತನಾಗಿ ಹೊರಹೊಮ್ಮಿದ್ದರು.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ರಾಮದಾಸ್‌ ಅವರನ್ನು ತೆಲಂಗಾಣದ ಸಿಕಂದರಾಬಾದ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಪತ್ನಿ ಲಲಿತಾ ರಾಮದಾಸ್ ಮತ್ತು ಮೂವರು ಪುತ್ರಿಯರು ಇದ್ದಾರೆ. 

ಲಲಿತಾ ರಾಮದಾಸ್‌ ಅವರು ನೌಕಾಪಡೆಯ ಮೂರನೇ ಮುಖ್ಯಸ್ಥ ಅಡ್ಮಿರಲ್ ಮತ್ತು ಸ್ವಾತಂತ್ರ್ಯದ ನಂತರ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಎನಿಸಿಕೊಂಡಿದ್ದ ರಾಮ್ ದಾಸ್ ಕಟಾರಿ ಅವರ ಪುತ್ರಿ. ರಾಯಗಡ ಜಿಲ್ಲೆಯ ಅಲಿಬಾಗ್‌ನಲ್ಲಿ ಎಲ್‌.ರಾಮದಾಸ್‌ ದಂಪತಿ ನೆಲೆಸಿದ್ದರು. ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಈ ದಂಪತಿ ರಾಮು ಮತ್ತು ಲಾಲಿ ಎಂದೇ ಜನಪ್ರಿಯರಾಗಿದ್ದರು.  

ವೃತ್ತಿ ಜೀವನ:

ಎಲ್‌. ರಾಮದಾಸ್ ಅವರು 1990ರ ಡಿಸೆಂಬರ್‌ 1ರಿಂದ 1993ರ ಸೆಪ್ಟೆಂಬರ್ 30ರವೆಗೆ ಸುಮಾರು ಮೂರು ವರ್ಷ ನೌಕಾಪಡೆಯ ಮುಖ್ಯಸ್ಥರಾಗಿದ್ದರು. ದಕ್ಷಿಣ ಏಷ್ಯಾವನ್ನು ನಿಶಸ್ತ್ರೀಕರಣ ಮತ್ತು ಅಣ್ವಸ್ತ್ರ ರಹಿತಗೊಳಿಸುವ ಅವರ ಪ್ರಯತ್ನಗಳಿಗಾಗಿ, ಪಾಕಿಸ್ತಾನ-ಭಾರತದ ಜನತೆಯ ಶಾಂತಿ ಮತ್ತು ಪ್ರಜಾಪ್ರಭುತ್ವದ ಆಶಯದ ಫೋರಂನಲ್ಲಿ ಶ್ರಮಿಸಿದ ಕಾರಣಕ್ಕೆ ರಾಮದಾಸ್ ಅವರಿಗೆ 2004ರಲ್ಲಿ ಶಾಂತಿಗಾಗಿ ರೆಮೊನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮುಂಬೈ ಮೂಲದ ರಾಮದಾಸ್ ಅವರು ಡೆಹ್ರಾಡೂನ್‌ನಲ್ಲಿರುವ ಭಾರತದ ಸಶಸ್ತ್ರ ಪಡೆಗಳ ಅಕಾಡೆಮಿಯಲ್ಲಿ ಕೆಡೆಟ್ ಆಗಿ ನಂತರ, ಇಂಗ್ಲೆಂಡ್‌ನ ಡಾರ್ಟ್‌ಮೌತ್‌ನಲ್ಲಿರುವ ರಾಯಲ್ ನೇವಲ್ ಕಾಲೇಜ್‌ನಲ್ಲಿ ಶಿಕ್ಷಣ, ತರಬೇತಿ ಪಡೆದು 1953ರ ಸೆಪ್ಟೆಂಬರ್ 1ರಂದು ಭಾರತೀಯ ನೌಕಾಪಡೆಗೆ ನೇಮಕವಾಗಿದ್ದರು. 1969ರ ಜೂನ್ 30ರಂದು ಕಮಾಂಡರ್ ಆಗಿ ಬಡ್ತಿ ಪಡೆದರು. ಕೇರಳದ ಕೊಚ್ಚಿಯಲ್ಲಿ ನೌಕಾ ಅಕಾಡೆಮಿ ಸ್ಥಾಪನೆಗೂ ಕಾರಣವಾಗಿ ಅದರ ಮುಖ್ಯಸ್ಥರಾದರು.

ರಾಮದಾಸ್ ಅವರು 1971ರ ಯುದ್ಧದ ಸಮಯದಲ್ಲಿ ಐಎನ್‌ಎಸ್ ಬಿಯಾಸ್‌ ಯುದ್ಧನೌಕೆಯ ಕಮಾಂಡೆಂಡ್‌ ಮತ್ತು ಪೂರ್ವದ ನೌಕಾದಳದ (ಈಸ್ಟರ್ನ್ ಫ್ಲೀಟ್‌) ಭಾಗವಾಗಿದ್ದರು. ಪೂರ್ವ ಪಾಕಿಸ್ತಾನಕ್ಕೆ ಅತ್ಯಂತ ಪರಿಣಾಮಕಾರಿ ನೌಕಾ ದಿಗ್ಬಂಧನ ಹಾಕಿದ್ದರಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದ ಅಂತಿಮವಾಗಿ, ಪಾಕಿಸ್ತಾನ ಸ್ಥಳಾಂತರಿಸಲಿದ್ದ 93,000 ಸೈನಿಕರು ಭಾರತೀಯ ಪಡೆಗಳಿಗೆ ಶರಣಾಗಿದ್ದರು.

ಭಾರತೀಯ ನೌಕಾಪಡೆಯು, ರಾಮದಾಸ್‌ ಅವರ ನಾಲ್ಕು ದಶಕಗಳ ಸೇವೆಯನ್ನು ಸ್ಮರಿಸಿ ‘ಅಡ್ಮಿರಲ್‌ ಅವರು ಐಎನ್‌ಎಸ್‌ ಬಿಯಾಸ್‌ನ ಕಮಾಂಡಿಂಗ್‌ ಅಧಿಕಾರಿ ಹುದ್ದೆ ಸೇರಿದಂತೆ ಅವರ 40 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹಲವು ಮಹತ್ವದ ಹುದ್ದೆ ಮತ್ತು ಜವಾಬ್ದಾರಿ ನಿಭಾಯಿಸಿದ್ದರು. ಭಾರತೀಯ ನೌಕಾಪಡೆಯ 13 ನೇ ಮುಖ್ಯಸ್ಥರಾಗಿ ಚುಕ್ಕಾಣಿ ಹಿಡಿದಿದ್ದರು’ ಎಂದು ‘ಎಕ್ಸ್‌’ನಲ್ಲಿ ಸ್ಮರಿಸಿದೆ.  

ಭ್ರಷ್ಟಾಚಾರ ವಿರೋಧಿ ಆಂದೋಲನದ ಭಾಗವಾಗಿದ್ದ ರಾಮದಾಸ್‌ ಆಮ್ ಆದ್ಮಿ ಪಕ್ಷವನ್ನು ಸೇರಿದ್ದರು. ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿತ್ತು. 

2022ರ ನವೆಂಬರ್‌ನಲ್ಲಿ ರಾಮದಾಸ್ ಮತ್ತು ಲಾಲಿ ಅವರು ತೆಲಂಗಾಣದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಎಲ್‌. ರಾಮದಾಸ್‌
ಎಲ್‌. ರಾಮದಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT