ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪ್ರಧಾನಿ ಮೋದಿಗೆ ದೆಹಲಿ ಸಚಿವರಿಂದ ಪತ್ರ

Published 24 ಜೂನ್ 2024, 13:21 IST
Last Updated 24 ಜೂನ್ 2024, 13:21 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸುವಂತೆ ಕೋರಿ ದೆಹಲಿ ಸಚಿವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇವೆ ಎಂದು ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರಾದ ಗೋಪಾಲ್ ರಾಯ್, ಸೌರಭ್ ಭಾರದ್ವಾಜ್, ಕೈಲಾಶ್ ಗೆಹಲೋತ್ ಮತ್ತು ಇಮ್ರಾನ್ ಹುಸೇನ್, ಹರಿಯಾಣದಿಂದ ನೀರು ಬಿಡುಗಡೆಗೆ ಒತ್ತಾಯಿಸಿ ಸಚಿವೆ ಅತಿಶಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಅವರು ಹೇಳಿದ್ದಾರೆ.

ಅತಿಶಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸ್ಥಳದಲ್ಲೇ ಪ್ರಧಾನಿಗೆ ಪತ್ರ ಬರೆಯುವ ನಿರ್ಧಾರವನ್ನು ಸಚಿವರು ಕೈಗೊಂಡಿದ್ದರು.

ಭೀಕರ ಬಿಸಿಗಾಳಿ ನಡುವೆಯೂ ದೆಹಲಿಗೆ ಹರಿಯಾಣದಿಂದ ನ್ಯಾಯವಾಗಿ ಸಿಗಬೇಕಾದ ನೀರಿನ ಪಾಲು ಸಿಕ್ಕಿಲ್ಲ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ದೆಹಲಿಗೆ ದಿನಕ್ಕೆ 1,005 ಎಂಜಿಡಿಯಷ್ಟು ನೀರಿನ ಸರಬರಾಜು ಮಾಡಬೇಕು. ಅದರಲ್ಲಿ 613 ಎಂಜಿಡಿಯಷ್ಟು ನೀರು ಹರಿಯಾಣದಿಂದಲೇ ಬರುತ್ತದೆ. ಆದರೆ, ಕಳೆದ ಹಲವು ವಾರಗಳಿಂದ ಹರಿಯಾಣದಿಂದ ನೀರಿನ ಪ್ರಮಾಣದಲ್ಲಿ ಬಹಳ ಕಡಿತ ಮಾಡಲಾಗಿದೆ’ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕಳೆದ ಹಲವು ದಿನಗಳಿಂದ ದೆಹಲಿಗೆ ನಿತ್ಯ ಕೇವಲ 100 ಮಿಲಿಯನ್ ಗ್ಯಾಲನ್ ನೀರು ಮಾತ್ರ ಬರುತ್ತಿದೆ ಎಂದೂ ಸಚಿವರು ದೂರಿದ್ದಾರೆ.

‘28,500 ಒಂದು ದಿನಕ್ಕೆ ಒಂದು ಮಿಲಿಯನ್ ಗ್ಯಾಲನ್ ನೀರು ಬೇಕು. ಇದೀಗ ಹರಿಯಾಣ ಸರ್ಕಾರ ನೀರನ್ನು ಕಡಿತಗೊಳಿಸಿರುವುದರಿಂದ 28 ಲಕ್ಷ ಜನರಿಗ ನೀರು ಸಿಗುತ್ತಿಲ್ಲ. ಅದಲ್ಲದೆ, ಉರಿಬಿಸಿಲ ನಡುವೆ ದೆಹಲಿಗೆ ಹೆಚ್ಚುವರಿ ನೀರಿನ ಅಗತ್ಯವಿದೆ’ ಎಂದು ಸಚಿವರಾದ ರಾಯ್, ಗೆಹಲೋತ್, ಹುಸೇನ್ ಮತ್ತು ಭಾರದ್ವಾಜ್ ಸಹಿ ಹಾಕಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಇವತ್ತು ಮತ್ತೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡುತ್ತೇವೆ. ನಮ್ಮ ಜೊತೆ ವಾಜಿರಾಬಾದ್ ನೀರು ಸಂಸ್ಕರಣಾ ಕೇಂದ್ರಕ್ಕೆ ಬನ್ನಿ. ನಮ್ಮ ಅಧಿಕಾರಿಗಳೂ ಬರುತ್ತಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿ ಎಂದು ಗೋಪಾಲ್ ರಾಯ್ ಪತ್ರಕರ್ತರಿಗೆ ಮನವಿ ಮಾಡಿದರು.

ಇದಲ್ಲದೆ, ದೆಹಲಿಗೆ ದಿನಕ್ಕೆ 1000 ಎಂಜಿಡಿ ನೀರು ಪೂರೈಸಬೇಕೆಂದು 30 ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಂಡಾಗ ದೆಹಲಿ ಜನಸಂಖ್ಯೆ 1 ಕೋಟಿಯಷ್ಟಿತ್ತು. ಈಗ ದೆಹಲಿ ಜನಸಂಖ್ಯೆ 3 ಕೋಟಿಗೂ ಹೆಚ್ಚಿದೆ. ಆದರೆ, ನೀರಿನ ಸರಬರಾಜಿನ ಪ್ರಮಾಣ ಮಾತ್ರ ಅಷ್ಟೇ ಇದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT