ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಿನ ಬಿಕ್ಕಟ್ಟು: ಹರಿಯಾಣದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ದೆಹಲಿ ಸರ್ಕಾರ

Published 30 ಮೇ 2024, 12:24 IST
Last Updated 30 ಮೇ 2024, 12:24 IST
ಅಕ್ಷರ ಗಾತ್ರ

ನವದೆಹಲಿ: ನೀರಿನ ಪೂರೈಕೆಗೆ ಸಂಬಂಧಪಟ್ಟಂತೆ ಹರಿಯಾಣದ ವಿರುದ್ಧ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದೆ ಎಂದು ಎಎಪಿ ನಾಯಕಿ, ಸಚಿವೆ ಅತಿಶಿ ತಿಳಿಸಿದ್ದಾರೆ. ದೆಹಲಿ ಪಾಲಿನ ನೀರನ್ನು ಹರಿಯಾಣ ಬಿಡುಗಡೆ ಮಾಡದೆ ಇರುವುದರಿಂದ ನೀರಿನ ಕೊರತೆ ಉಂಟಾಗಿ ರಾಜಧಾನಿಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ನೀರಿನ ಬಿಕ್ಕಟ್ಟನ್ನು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದೆಹಲಿ ಜಲ ಮಂಡಳಿಯಲ್ಲಿ (ಡಿಜೆಬಿ), ಸೆಂಟ್ರಲ್ ವಾಟರ್ ಟ್ಯಾಂಕರ್ ಕಂಟ್ರೋಲ್ ರೂಮ್ ತೆರೆಯಲಾಗುತ್ತದೆ. ಐಎಎಸ್‌ ದರ್ಜೆಯ ಅಧಿಕಾರಿ ಇದರ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ನೀರಿನ ಅಗತ್ಯವಿದ್ದಾಗ ಜನರು 1916 ಸಂಖ್ಯೆಗೆ ಕರೆ ಮಾಡಬಹುದು. ಜೂನ್ 5ರಿಂದ ದೆಹಲಿಯ 11 ಜಲ ವಲಯಗಳಲ್ಲಿ ಎಡಿಎಂ ಹಾಗೂ ಎಸ್‌ಡಿಎಂ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗುವುದು. ಅವರು ನೀರಿನ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಲಿದ್ದಾರೆ. ಅಲ್ಲದೆ, ಬೋರ್‌ವೆಲ್‌ಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ದೆಹಲಿ ಜಲ ಮಂಡಳಿಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ತಂಡಗಳನ್ನು ರಚಿಸಲಾಗುವುದು ಎಂದು ಅವರು ಅತಿಶಿ ಹೇಳಿದ್ದಾರೆ.

ನಗರದಲ್ಲಿ ನೀರಿನ ದುಂದು ಬಳಕೆಯನ್ನು ತಡೆಗಟ್ಟಲು ಐಎಎಸ್‌ ಅಧಿಕಾರಿಯ ನೇತೃತ್ವದಲ್ಲಿ ಸುಮಾರು 200 ಅನುಷ್ಠಾನ ತಂಡಗಳು ಪರಿಶೀಲನೆ ನಡೆಸಲಿವೆ. ನಾಳೆಯಿಂದ (ಶುಕ್ರವಾರ) ಕಟ್ಟಡ ನಿರ್ಮಾಣಕ್ಕೆ ಕುಡಿಯುವ ನೀರಿನ ಬಳಕೆಯನ್ನು ಸರ್ಕಾರ ನಿಷೇಧಿಸುತ್ತಿದೆ. ನಿಷೇಧ ಉಲ್ಲಂಘಿಸಿದರೆ ದೆಹಲಿ ಮಹಾನಗರ ಪಾಲಿಕೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ. ಹಾಗೆಯೇ, ಕಾರುಗಳನ್ನು ತೊಳೆಯಲು ಮತ್ತು ಕಾರು ಸೇವಾ ಕೇಂದ್ರಗಳಲ್ಲಿ ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸಲಾಗುತ್ತಿದೆ. ಈ ಸ್ಥಳಗಳಲ್ಲಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ತಂಡಗಳು ಪರಿಶೀಲನೆ ನಡೆಸಲಿವೆ. ನಿಷೇಧ ಉಲ್ಲಂಘನೆ ಕಂಡುಬಂದರೆ, ಅಂತಹ ಕೇಂದ್ರಗಳಿಗೆ ಬೀಗ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ನಗರದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಮಾನ ಮತ್ತು ಹರಿಯಾಣ ನೀರು ಬಿಡುಗಡೆ ಮಾಡದ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಜನರು ನೀರನ್ನು ಸಮರ್ಪಕವಾಗಿ ಬಳಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ನಿನ್ನೆ (ಬುಧವಾರ) 52.3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT