ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಎಎಪಿ ಶಾಸಕರ ಖರೀದಿ: ‌ಕೇಜ್ರಿವಾಲ್‌ಗೆ ನೋಟಿಸ್ ನೀಡಿದ ದೆಹಲಿ ಪೊಲೀಸರು

Published 3 ಫೆಬ್ರುವರಿ 2024, 5:44 IST
Last Updated 3 ಫೆಬ್ರುವರಿ 2024, 5:44 IST
ಅಕ್ಷರ ಗಾತ್ರ

ನವದೆಹಲಿ: ಎಎಪಿ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿರುವ ಆರೋಪ ಪ್ರಕರಣದ ತನಿಖೆಗೆ ಸಹಕರಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಅಪರಾಧ ವಿಭಾಗದ ಪೊಲೀಸರು ಶನಿವಾರ ನೋಟಿಸ್‌ ನೀಡಿದ್ದಾರೆ.

ಮುಖ್ಯಮಂತ್ರಿ ನಿವಾಸದಲ್ಲಿ ಐದು ತಾಸುಗಳ ನಾಟಕೀಯ ಪ್ರಸಂಗದ ನಂತರ ಅಂತಿಮವಾಗಿ ಪೊಲೀಸರು ನೋಟಿಸ್‌ ನೀಡಿದ್ದು, ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಕೋರಿದ್ದಾರೆ.

ದೆಹಲಿ ಪೊಲೀಸ್ ಅಧಿಕಾರಿಗಳ ತಂಡವು ಶುಕ್ರವಾರ ಕೇಜ್ರಿವಾಲ್ ಅವರ ನಿವಾಸಕ್ಕೆ ನೋಟಿಸ್ ನೀಡಲು ಹೋಗಿತ್ತು. ಆದರೆ, ಸಿ.ಎಂ ನಿವಾಸದಲ್ಲಿದ್ದ ಸಿಬ್ಬಂದಿ ನೋಟಿಸ್‌ ಸ್ವೀಕರಿಸಲು ನಿರಾಕರಿಸಿದ್ದರು. ಪುನಃ ಶನಿವಾರ ಸಿ.ಎಂ ನಿವಾಸಕ್ಕೆ ಬಂದ ಪೊಲೀಸರು, ನಿವಾಸದಲ್ಲಿದ್ದ ಅಧಿಕಾರಿಗಳಿಗೆ ನೋಟಿಸ್ ಹಸ್ತಾಂತರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನಾವು ಅವರಿಗೆ (ಕೇಜ್ರಿವಾಲ್) ನೋಟಿಸ್ ನೀಡಿದ್ದೇವೆ. ಅವರು ಮೂರು ದಿನಗಳಲ್ಲಿ ಲಿಖಿತ ರೂಪದಲ್ಲಿ ಉತ್ತರ ನೀಡಬಹುದು’ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 

ಬಿಜೆಪಿಯು ಸಂಪರ್ಕಿಸಿದೆ ಎನ್ನಲಾದ ಎಎಪಿಯ ಶಾಸಕರ ಹೆಸರನ್ನು ಬಹಿರಂಗಪಡಿಸುವಂತೆ ಅಪರಾಧ ವಿಭಾಗದ ಪೊಲೀಸರು ಕೇಜ್ರಿವಾಲ್ ಅವರನ್ನು ಕೇಳಿದರು.

ಎಎಪಿಯ ಏಳು ಶಾಸಕರನ್ನು ತಲಾ ₹25 ಕೋಟಿ ನೀಡಿ ಖರೀದಿಸಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಅರವಿಂದ ಕೇಜ್ರಿವಾಲ್‌ ಕಳೆದ ವಾರ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು.

ದೆಹಲಿ ಸಚಿವೆ ಆತಿಶಿ ಪತ್ರಿಕಾಗೋಷ್ಠಿ ನಡೆಸಿ, ‘ದೆಹಲಿಯಲ್ಲಿ ಬಿಜೆಪಿ ಆಪರೇಷನ್ ಕಮಲ 2.0 ಆರಂಭಿಸಿದೆ. ಕಳೆದ ವರ್ಷ ಕೂಡ ಇಂಥದ್ದೇ ಪ್ರಯತ್ನ ಮಾಡಿ, ವಿಫಲರಾಗಿತ್ತು’ ಎಂದು ಆರೋಪಿಸಿದ್ದರು. 

ಇದರ ಬೆನ್ನಲ್ಲೇ ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ನೇತೃತ್ವದ ನಿಯೋಗವು ಜನವರಿ 30ರಂದು ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರನ್ನು ಭೇಟಿ ಮಾಡಿ, ಈ ಆರೋಪದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿತ್ತು.

ಐದು ತಾಸಿನ ‘ಪ್ರಹಸನ’

ಇದಕ್ಕೂ ಮೊದಲು, ಸಿವಿಲ್ ಲೈನ್ಸ್‌ನಲ್ಲಿರುವ ಕೇಜ್ರಿವಾಲ್ ಅವರ ನಿವಾಸದಲ್ಲಿ ನಾಟಕೀಯ ಪ್ರಸಂಗ ನಡೆಯಿತು. ಸಹಾಯಕ ಪೊಲೀಸ್‌ ಆಯುಕ್ತರ (ಎಸಿಪಿ) ಮಟ್ಟದ ಅಧಿಕಾರಿ ನೇತೃತ್ವದ ಪೊಲೀಸರ ತಂಡವು, ಕೇಜ್ರಿವಾಲ್ ಅವರ ಹೆಸರಿನಲ್ಲಿರುವ ನೋಟಿಸ್ ಅನ್ನು ಖುದ್ದು ಕೇಜ್ರಿವಾಲ್‌ ಅವರಿಗೆ ಮಾತ್ರ ನೀಡುವುದಾಗಿ ಪಟ್ಟುಹಿಡಿಯಿತು. ಆದರೆ, ಇದಕ್ಕೆ ಒಪ್ಪದ ಸಿ.ಎಂ ನಿವಾಸದ ಅಧಿಕಾರಿಗಳು, ಅವರ ಪರವಾಗಿ ನೋಟಿಸ್ ಪಡೆದು, ಸ್ವೀಕೃತಿ ನೀಡಲು ಸಿದ್ಧವೆಂದರು. ಈ ನಾಟಕೀಯ ಜಟಾಪಟಿ ಐದು ತಾಸು ನಡೆಯಿತು. 

ಕೇಜ್ರಿವಾಲ್‌ ಭ್ರಷ್ಟಾಚಾರದ ಅನಭಿಶಕ್ತ ದೊರೆ: ಬಿಜೆಪಿ

‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭ್ರಷ್ಟಾಚಾರದ ಅನಭಿಶಕ್ತ ದೊರೆ. ತನಿಖೆ ಎಂದರೆ ಅವರು ಯಾವಾಗಲೂ ಓಡಿ ಹೋಗುತ್ತಾರೆ’ ಎಂದು ಬಿಜೆಪಿ ಶನಿವಾರ ಟೀಕಾ ಪ್ರಹಾರ ನಡೆಸಿದೆ.

ಪೊಲೀಸರು ನೋಟಿಸ್‌ ನೀಡುವಾಗ ಸಿ.ಎಂ ನಿವಾಸದಲ್ಲಿ ನಡೆದ ಐಡ್ರಾಮಾ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ‘ಇದೊಂದು ವಿಚಿತ್ರ ಪರಿಸ್ಥಿತಿ. ದೆಹಲಿಯ ಜನರು ಇಂದು ಕೇಜ್ರಿವಾಲ್ ಅವರನ್ನು ಪಲಾಯನವಾದಿ ಎನ್ನುತ್ತಿದ್ದಾರೆ. ಅಬಕಾರಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್‌ಗೆ ಐದು ಸಮನ್ಸ್‌ಗಳನ್ನು ಜಾರಿಗೊಳಿಸಿದಾಗಲೂ ಅವರು ಓಡಿಹೋದರು. ಅವರು ತನಿಖಾ ಸಂಸ್ಥೆಯ ಮುಂದೆ ಹಾಜರಾಗಿಲ್ಲ ಮತ್ತು ತನಿಖೆಗೆ ಸಹಕರಿಸಲಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಕೇಜ್ರಿವಾಲ್‌ ವಿರುದ್ಧ ಇ.ಡಿ ಕೋರ್ಟ್‌ ಮೊರೆ

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಐದು ಬಾರಿ ನೋಟಿಸ್‌ ನೀಡಿದರೂ ಗೈರಾದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯವು ಶನಿವಾರ ಇಲ್ಲಿನ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ.

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರ ಮುಂದೆ ದೂರು ಸಲ್ಲಿಸಲಾಗಿದೆ. ಈ ಅರ್ಜಿಯ ಹೆಚ್ಚಿನ ವಿಚಾರಣೆಯನ್ನು ನ್ಯಾಯಾಧೀಶರು ಇದೇ ತಿಂಗಳ 7ಕ್ಕೆ (ಬುಧವಾರ) ನಿಗದಿಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT