ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವೀಯ ನೆಲೆಯಲ್ಲಿ ನೀರು ಹರಿಸಲು ಹರಿಯಾಣಕ್ಕೆ ದೆಹಲಿ ಸರ್ಕಾರ ಮನವಿ

Published 15 ಜೂನ್ 2024, 10:02 IST
Last Updated 15 ಜೂನ್ 2024, 10:02 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಮಾನವೀಯ ನೆಲೆಯಲ್ಲಿ ಯಮುನಾ ನದಿಗೆ ಹೆಚ್ಚುವರಿ ನೀರು ಹರಿಸುವಂತೆ ದೆಹಲಿ ಸರ್ಕಾರವು ಹರಿಯಾಣಕ್ಕೆ ಮನವಿ ಮಾಡಿದೆ ಎಂದು ಎಎಪಿ ನಾಯಕಿ, ಸಚಿವೆ ಅತಿಶಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುನಕ್ ಕಾಲುವೆ ಮತ್ತು ವಜೀರಾಬಾದ್‌ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿದ್ದು, ರಾಷ್ಟ್ರ ರಾಜಧಾನಿಯು 70 ದಶಲಕ್ಷ ಗ್ಯಾಲನ್ ನೀರಿನ ಉತ್ಪಾದನೆ ಕೊರತೆಯನ್ನು ಎದುರಿಸುತ್ತಿದೆ. ನೀರಿನ ಕೊರತೆಯಿಂದಾಗಿ ನಗರದಲ್ಲಿ ದಿನಕ್ಕೆ ಸುಮಾರು 1,002 ದಶಲಕ್ಷ ಗ್ಯಾಲನ್‌ ಇದ್ದ ಸಾಮಾನ್ಯ ನೀರಿನ ಉತ್ಪಾದನೆಯು ಶುಕ್ರವಾರ 932 ದಶಲಕ್ಷ ಗ್ಯಾಲನ್‌ಗೆ ಇಳಿಕೆಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ನಗರದ ಜನರಿಗೆ ಮಾನವೀಯ ನೆಲೆಯಲ್ಲಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ದೆಹಲಿ ಸರ್ಕಾರವು ಹರಿಯಾಣಕ್ಕೆ ಮನವಿ ಮಾಡಿದೆ. ದೆಹಲಿಯಲ್ಲಿ ಬಿಸಿಗಾಳಿ ಮತ್ತು ಶಾಖದ ಪರಿಸ್ಥಿತಿಗಳು ಕಡಿಮೆಯಾದ ಬಳಿಕ ಯಮುನಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲಾಗುತ್ತದೆ’ ಎಂದು ಅತಿಶಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಬಳಕೆಯಾಗದ ನೀರನ್ನು ದೆಹಲಿಗೆ ನೀಡಲು ಹಿಮಾಚಲ ಪ್ರದೇಶ ಸಿದ್ಧವಾಗಿದೆ. ನಾನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರು ನನಗೆ ಸಹಕಾರದ ಭರವಸೆ ನೀಡಿದ್ದಾರೆ. ಹಿಮಾಚಲ ಪ್ರದೇಶದಿಂದ ಲಭ್ಯವಿರುವ ನೀರಿನ ದತ್ತಾಂಶದ ಲೆಕ್ಕಾಚಾರವನ್ನು ಜಲ ಮಂಡಳಿ ಮಾಡಬೇಕಿದೆ’ ಎಂದು ಅತಿಶಿ ವಿವರಿಸಿದ್ದಾರೆ.

ಇಂದು (ಶನಿವಾರ) ದೆಹಲಿ ಜಲ ಮಂಡಳಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಗರದಲ್ಲಿ ನೀರು ಸಿಗದೆ ಇರುವ ಪ್ರದೇಶಗಳ ಮೌಲ್ಯಮಾಪನ ಮಾಡಲು ಮತ್ತು ನೀರಿನ ಟ್ಯಾಂಕರ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT