ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ನೀರಿನ ಬಿಕ್ಕಟ್ಟು | ಮಡಿಕೆ ಒಡೆದು ಬಿಜೆಪಿ ಪ್ರತಿಭಟನೆ

Published 16 ಜೂನ್ 2024, 6:34 IST
Last Updated 16 ಜೂನ್ 2024, 6:34 IST
ಅಕ್ಷರ ಗಾತ್ರ

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು ಬಿಗಡಾಯಿಸಿದ್ದು , ದೆಹಲಿ ಸರ್ಕಾರದ ವಿರುದ್ಧ ಬಿಜೆಪಿ ಮಡಿಕೆ ಒಡೆದು ಪ್ರತಿಭಟಿಸಿದೆ.

ಈ ವೇಳೆ ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರು, ದೆಹಲಿಯ ಎಎಪಿಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, 'ಜನರು ನೀರಿಗಾಗಿ ಹಾತೊರೆಯುತ್ತಿದ್ದಾರೆ. ದೆಹಲಿಯಲ್ಲಿ ಕಳೆದ 10 ವರ್ಷಗಳಿಂದ ಎಎಪಿ, ಸರ್ಕಾರ ನಡೆಸುತ್ತಿದೆ. ಆದರೆ ದೆಹಲಿ ಜಲ ಮಂಡಳಿಯ ಪೈಪ್‌ಗಳನ್ನು ಸರಿಪಡಿಸಲು ಏನನ್ನೂ ಮಾಡದಿರುವುದು ಹೇಯ ಸಂಗತಿ' ಎಂದು ಹೇಳಿದ್ದಾರೆ.

'ನೀರಿನ ಟ್ಯಾಂಕರ್ ಮಾಫಿಯಾಗೆ ಎಎಪಿ ಸರ್ಕಾರ ಬೆಂಬಲ ನೀಡುತ್ತಿದೆ. ಎಎಪಿಯ ಭ್ರಷ್ಟಾಚಾರದಿಂದ ಜನರು ಬೇಸತ್ತು ಹೋಗಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಉಷ್ಣ ಹವೆಯ ಕುರಿತು ಹಮಾಮಾನ ಇಲಾಖೆ ಮಾರ್ಚ್ ತಿಂಗಳಲ್ಲೇ ಎಚ್ಚರಿಕೆ ನೀಡಿತ್ತು. ಆದರೆ ದೆಹಲಿ ಸರ್ಕಾರ ಏನನ್ನೂ ಮಾಡಿಲ್ಲ. ದೆಹಲಿಯಲ್ಲಿ ಶೇ 40ಕ್ಕೂ ಹೆಚ್ಚು ನೀರು ಪೋಲಾಗುತ್ತಿದೆ. ನೀರಿನ ಟ್ಯಾಂಕರ್ ಮಾಫಿಯಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಅವರು ಆರೋಪಿಸಿದ್ದಾರೆ.

'ನೀರಿನ ಕೊರತೆಯ ಕುರಿತು ದಿನಂಪ್ರತಿ ಯಾವುದಾದರೂ ಒಂದು ಕ್ಷೇತ್ರದಿಂದ ನನಗೆ ಕರೆ ಬರುತ್ತಿದೆ. ನೀರಿನ ಲಭ್ಯತೆಯಾಗಿ ದೆಹಲಿ ಜಲ ಮಂಡಳಿಗೆ ನಿರಂತರ ಒತ್ತಡ ಹೇರುವ ಪರಿಸ್ಥಿತಿ ಬಂದಿದೆ. ಎಎಪಿಗೆ ಕೆಲಸ ಮಾಡುವ ಬದ್ಧತೆಯಿಲ್ಲ' ಎಂದು ಅವರು ಹೇಳಿದ್ದಾರೆ.

'ಕಳೆದ 10 ವರ್ಷದಲ್ಲಿ ಎಎಪಿ, ₹600 ಕೋಟಿ ಲಾಭದಲ್ಲಿದ್ದ ದೆಹಲಿ ಜಲ ಮಂಡಳಿಯನ್ನು ₹73,000 ಕೋಟಿ ನಷ್ಟಕ್ಕೆ ಇಳಿಸಿದ್ದಾರೆ. ಹರಿಯಾಣ ಬೇಕಾದಷ್ಟು ನೀರು ಬಿಡುತ್ತಿದೆ. ಆದರೂ ಮತ್ತೆ ನೀರು ಕೇಳುವುದು ಮಾಫಿಯಾಕ್ಕಾಗಿ ಅಲ್ಲವೇ' ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT