ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲ್ಪುರ ಸೇತುವೆ ಕುಸಿತಕ್ಕೆ ಬಿಜೆಪಿಯೇ ಕಾರಣ: ಬಿಹಾರ ಸಚಿವ ತೇಜ್ ಪ್ರತಾಪ್ ಆರೋಪ

Published 6 ಜೂನ್ 2023, 5:42 IST
Last Updated 6 ಜೂನ್ 2023, 5:42 IST
ಅಕ್ಷರ ಗಾತ್ರ

ನವದೆಹಲಿ: ಬಾಗಲ್ಪುರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಪಥಗಳ ಬೃಹತ್‌ ಸೇತುವೆ ಕುಸಿತಕ್ಕೆ ಬಿಜೆಪಿಯೇ ಕಾರಣ ಎಂದು ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ಆರೋಪಿಸಿದ್ದಾರೆ.

ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಸೇತುವೆಗಳನ್ನು ನಿರ್ಮಿಸುತ್ತಿದ್ದೇವೆ. ಆದರೆ, ಕೇಸರಿ ಪಕ್ಷದವರು (ಬಿಜೆಪಿ) ಅವುಗಳನ್ನು ಕೆಡವುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸೇತುವೆ ಕುಸಿತ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಬಿಹಾರ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಬಾಗಲ್ಪುರ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಅಂದಾಜು ₹1,700 ಕೋಟಿ ವೆಚ್ಚದ ನಾಲ್ಕು ಪಥಗಳ ಬೃಹತ್‌ ಸೇತುವೆ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಕುಸಿದುಬಿದ್ದಿದೆ. ನಿರ್ಮಾಣ ಹಂತದ ಸೇತುವೆ ವರ್ಷ ತುಂಬುವುದರಲ್ಲಿ ಕುಸಿದು ಬಿದ್ದಿರುವುದು ಇದು ಎರಡನೇ ಬಾರಿ. ಕಳೆದ ಡಿಸೆಂಬರ್‌ನಲ್ಲಿ ಎರಡು ತುಂಡಾಗಿ ಬಿದ್ದಿತ್ತು.

ಸೇತುವೆ ಗಂಗಾನದಿಯಲ್ಲಿ ಕುಸಿದುಬೀಳುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಯಾವುದೇ ಸಾವು– ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತನಿಖೆಗೆ ಆದೇಶಿಸಿದ್ದಾರೆ.

ಸುಲ್ತಾನ್‌ಗಂಜ್ ಮತ್ತು ಖಗಾಡಿಯಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯನ್ನು ನಿರ್ಮಾಣ ಹಂತದಲ್ಲಿರುವಾಗಲೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ 2014ರಲ್ಲಿ ಉದ್ಘಾಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT