ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪುನಶ್ಚೇತನ ಕೊನೆಗೊಳಿಸಿದ ನೋಟು ರದ್ದತಿ: ಕಾಂಗ್ರೆಸ್

Published 8 ನವೆಂಬರ್ 2023, 15:41 IST
Last Updated 8 ನವೆಂಬರ್ 2023, 15:41 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಹಿಂದೆ–ಮುಂದೆ ಆಲೋಚಿಸದೆ’ ಜಾರಿಗೊಳಿಸಿದ ನೋಟು ರದ್ದತಿ ಕ್ರಮವು ದೇಶದ ಅರ್ಥ ವ್ಯವಸ್ಥೆಯ ಬೆನ್ನುಮೂಳೆಯನ್ನೇ ಮುರಿದುಹಾಕಿತು ಎಂದು ಕಾಂಗ್ರೆಸ್ ಟೀಕಿಸಿದೆ. ‘ಮರೆಯಲು ಸಾಧ್ಯವೇ ಇಲ್ಲದ ದುರಂತ’ ಇದು ಎಂದು ಹೇಳಿರುವ ಕಾಂಗ್ರೆಸ್, ಪ್ರಧಾನಿ ಅವರನ್ನು ದೇಶದ ಜನ ಕ್ಷಮಿಸುವುದಿಲ್ಲ ಎಂದು ಹೇಳಿದೆ.

ಎಐಸಿಸಿ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ‘ನೋಟು ರದ್ದತಿಯ ತೀರ್ಮಾನ ಹಾಗೂ ಕೆಟ್ಟದ್ದಾಗಿ ರೂಪಿಸಿದ್ದ ಜಿಎಸ್‌ಟಿ ವ್ಯವಸ್ಥೆಯು ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿದ್ದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ಇಲ್ಲವಾಗಿಸಿತು’ ಎಂದು ದೂರಿದ್ದಾರೆ. 2013ರಲ್ಲಿ ಶುರುವಾಗಿದ್ದ ಆರ್ಥಿಕ ಪುನಶ್ಚೇತನವನ್ನು ಕೊನೆಗೊಳಿಸಿತು, 45 ವರ್ಷಗಳ ಗರಿಷ್ಠ ಪ್ರಮಾಣದ ನಿರುದ್ಯೋಗಕ್ಕೆ ಕಾರಣವಾಯಿತು ಎಂದು ಕೂಡ ರಮೇಶ್ ದೂರಿದ್ದಾರೆ.

ಪ್ರಧಾನಿ ಮೋದಿ ಅವರು ನೋಟು ರದ್ದತಿಯ ನಿರ್ಧಾರವನ್ನು 2016ರ ನವೆಂಬರ್‌ 8ರಂದು ಪ್ರಕಟಿಸಿದ್ದರು. ನೋಟು ರದ್ದತಿಯ ತೀರ್ಮಾನವು ‘ಸೊಕ್ಕು, ಅಮಾನವೀಯತೆ ಮತ್ತು ಆರ್ಥಿಕ ಅಸಾಕ್ಷರತೆಯ ಮೂರ್ತರೂಪ’ ಎಂದು ರಮೇಶ್ ಅವರು ಟೀಕಿಸಿದ್ದಾರೆ. ಇಂತಹ ನಡೆಯನ್ನು 2020ರ ಮಾರ್ಚ್‌ನಲ್ಲಿ ಯೋಜನೆಯಿಲ್ಲದೆ, ಇದ್ದಕ್ಕಿದ್ದಂತೆ ಲಾಕ್‌ಡೌನ್‌ ಘೋಷಿಸುವ ಮೂಲಕ ಮತ್ತೊಮ್ಮೆ ಪ್ರದರ್ಶಿಸಲಾಯಿತು. ಲಾಕ್‌ಡೌನ್ ತೀರ್ಮಾನದಿಂದಾಗಿ ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ. ದಾರಿಯನ್ನು ನಡೆದೇ ಸಾಗಬೇಕಾದ ಸ್ಥಿತಿ ಉಂಟಾಯಿತು ಎಂದು ಅವರು ಹೇಳಿದ್ದಾರೆ.

ನೋಟು ರದ್ದತಿ, ಜಿಎಸ್‌ಟಿಯ ದೋಷಪೂರಿತ ಅನುಷ್ಠಾನದ ಪರಿಣಾಮವಾಗಿ ಸಂಪತ್ತು ಹಾಗೂ ಅಧಿಕಾರವು ಕೆಲವರ ಸ್ವತ್ತಾಗುವಂತಾಯಿತು ಎಂದು ರಮೇಶ್ ಅರೋಪಿಸಿದ್ದಾರೆ.

ನೋಟು ರದ್ದತಿಯ ತೀರ್ಮಾನವು ದೇಶದ ಅರ್ಥ ವ್ಯವಸ್ಥೆ ಹಾಗೂ ಜನರ ಜೀವನೋಪಾಯದ ಮೇಲೆ ನಡೆದ ಅತಿದೊಡ್ಡ ದಾಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ‘ಮೋದಿ ಅವರು 50 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ ಏಳು ವರ್ಷಗಳ ನಂತರವೂ ದೇಶದ ಜನ ಉತ್ತರ ಹುಡುಕುತ್ತಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT