ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಕೂಬಾ ಡೈವಿಂಗ್‌ ಮಾಡಿ ಪ್ರಾಚೀನ ದ್ವಾರಕಾ ನಗರದ ಅವಶೇಷ ವೀಕ್ಷಿಸಿದ ಪ್ರಧಾನಿ ಮೋದಿ

Published 25 ಫೆಬ್ರುವರಿ 2024, 9:30 IST
Last Updated 25 ಫೆಬ್ರುವರಿ 2024, 9:30 IST
ಅಕ್ಷರ ಗಾತ್ರ

ದೇವಭೂಮಿ (ದ್ವಾರಕಾ): ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದ್ವಾರಕಾ ನಗರದಲ್ಲಿ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್‌ ಮಾಡಿದ್ದಾರೆ. ‘ನೀರಿನಲ್ಲಿ ಮುಳುಗಿರುವುದು ದೈವಿಕ ಅನುಭವ ನೀಡಿದೆ’ ಎಂದಿದ್ದಾರೆ.

ಸ್ಕೂಬಾ ಡೈವಿಂಗ್ ಅನ್ನು ‘ಬೇಟ್ ದ್ವಾರಕಾ ದ್ವೀಪ’ದ ಬಳಿ ನಡೆಸಲಾಗುತ್ತದೆ. ಸಮುದ್ರ ಆಳದಲ್ಲಿ ಪುರಾತತ್ವ ತಜ್ಞರು ಉತ್ಖನನ ಮಾಡಿದ ಪ್ರಾಚೀನ ದ್ವಾರಕಾ ನಗರದ ಅವಶೇಷಗಳನ್ನು ಇಲ್ಲ ನೋಡಬಹುದು.

ಸ್ಕೂಬಾ ಡೈವಿಂಗ್ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ‘ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಪ್ರಾಚೀನ ಯುಗಕ್ಕೆ ಹೋದಂತೆ ಭಾಸವಾಯಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ’ ಎಂದು ಬರೆದುಕೊಂಡಿದ್ದಾರೆ.

ನೀರಿನಲ್ಲಿ ಮುಳುಗಿದ ಕೆಲವು ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 

ನೌಕಾಪಡೆಯ ಡೈವರ್‌ಗಳ ತಂಡ ಸ್ಕೂಬಾ ಡೈವಿಂಗ್‌ನಲ್ಲಿ ಪ್ರಧಾನಿ ಅವರಿಗೆ ನೆರವಾಯಿತು. ‘ಇಲ್ಲಿ ಧೈರ್ಯಕ್ಕಿಂತಲೂ ನಂಬಿಕೆಯೇ ಮುಖ್ಯವಾಗಿತ್ತು’ ಎಂದು ನೀರಿನಿಂದ ಮೇಲೆ ಬಂದ ಬಳಿಕ ಪ್ರಧಾನಿ ಪ್ರತಿಕ್ರಿಯಿಸಿದರು. 

‘ನಾನು ಸಮುದ್ರದ ಆಳಕ್ಕೆ ಹೋಗಿ ಪ್ರಾಚೀನ ದ್ವಾರಕಾ ನಗರವನ್ನು ನೋಡಿದೆ. ನೀರಿನಡಿ ಮುಳುಗಿರುವ ದ್ವಾರಕಾ ಬಗ್ಗೆ ಪುರಾತತ್ವಜ್ಞರು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ನಮ್ಮ ಗ್ರಂಥಗಳಲ್ಲಿಯೂ ಈ ಬಗ್ಗೆ ಬಹಳಷ್ಟು ಹೇಳಲಾಗಿದೆ. ಭಗವಾನ್ ವಿಶ್ವಕರ್ಮ ಸ್ವತಃ ದ್ವಾರಕಾ ನಗರವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ ಎಂದು ನುಡಿದರು.

‘ನನ್ನ ಹಲವು ವರ್ಷಗಳ ಆಸೆ ಇಂದು ಈಡೇರಿದೆ. ರೋಮಾಂಚನಗೊಂಡಿದ್ದು, ಭಾವೋದ್ವೇಗಕ್ಕೆ ಒಳಗಾಗಿದ್ದೇನೆ. ದಶಕಗಳಿಂದ ಕಂಡಿದ್ದ ಕನಸು ಆ ಪುಣ್ಯಸ್ಥಳವನ್ನು ಸ್ಪರ್ಶಿಸುವ ಮೂಲಕ ಈಡೇರಿದೆ. ನೀರಿನ ಆಳದಲ್ಲಿ ಶ್ರೀಕೃಷ್ಣನಿಗೆ ಶಿರಬಾಗಿ ನಮಸ್ಕರಿಸಿದೆ. ಶ್ರೀಕೃಷ್ಣನಿಗೆ ಅರ್ಪಿಸಲು ನವಿಲು ಗರಿಗಳನ್ನೂ ಕೊಂಡೊಯ್ದಿದ್ದೆ’ ಎಂದರು.

ಪ್ರಧಾನಿ ಅವರು ಇದಕ್ಕೂ ಮುನ್ನ ದ್ವಾರಕಾದಲ್ಲಿರುವ ಶ್ರೀಕೃಷ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ದ್ವಾರಕಾ, ಜಾಮ್‌ನಗರ ಮತ್ತು ಪೋರ್‌ಬಂದರ್‌ ಜಿಲ್ಲೆಗಳಲ್ಲಿ ₹4,100 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT