ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಹೊರಬಂದ ಡಿ.ಕೆ ಶಿವಕುಮಾರ್‌

Last Updated 24 ಅಕ್ಟೋಬರ್ 2019, 2:19 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌) ಅಡಿ ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ಬಂಧನಕ್ಕೆ ಒಳಗಾಗಿ 33 ದಿನಗಳಿಂದ ತಿಹಾರ್‌ ಕೇಂದ್ರ ಕಾರಾಗೃಹದಲ್ಲಿದ್ದ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ಗೆ ದೆಹಲಿ ಹೈಕೋರ್ಟ್‌ ಬುಧವಾರ ಷರತ್ತುಬದ್ಧ ಜಾಮೀನು ನೀಡಿತು.

ಮಧ್ಯಾಹ್ನ ಇ.ಡಿ ವಿಶೇಷ ನ್ಯಾಯಾಲಯಕ್ಕೆ ಭದ್ರತೆಯ ಬಾಂಡ್‌ ನೀಡಿ ನ್ಯಾಯಾಧೀಶರಿಂದ ಬಿಡುಗಡೆಗೆ ಅಗತ್ಯವಿರುವ ಪತ್ರ ಪಡೆದ ಸೋದರ ಡಿ.ಕೆ. ಸುರೇಶ, ಜಾಮೀನಿನ ಆದೇಶದೊಂದಿಗೆ ಸಂಜೆ ತಿಹಾರ್‌ ಜೈಲಿನ ಅಧಿಕಾರಿಗಳಿಗೆ ನೀಡಿದರು. ರಾತ್ರಿ 9.30ರ ವೇಳೆಗೆ ಶಿವಕುಮಾರ್‌ ಜೈಲಿನಿಂದ ಹೊರಬಂದರು.

ಶಿವಕುಮಾರ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಇ.ಡಿ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಲಾದ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿ, ಇದೇ 17ರಂದು ತೀರ್ಪು ಕಾದಿರಿಸಿದ್ದ ನ್ಯಾಯಮೂರ್ತಿ ಸುರೇಶಕುಮಾರ್‌ ಕೈತ್‌ ಜಾಮೀನು ಮಂಜೂರು ಮಾಡಿರುವುದನ್ನು ಪ್ರಕಟಿಸಿದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಆರೋಪಿಯು ಆಂಜಿಯೊಗ್ರಾಮ್‌ಗೆ ಒಳಗಾಗಿದ್ದಾರೆ. ಆದ್ದರಿಂದ ಈ ನೆಲೆಯಲ್ಲಿ ಜಾಮೀನು ನೀಡಿದ್ದಾಗಿ ತೀರ್ಪಿನಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್‌ 3ರಂದು ಬಂಧನಕ್ಕೆ ಒಳಗಾಗಿದ್ದ ಶಿವಕುಮಾರ್‌ ಮೊದಲ 14 ದಿನಗಳು ವಿಚಾರಣೆಗಾಗಿ ಇ.ಡಿ ವಶದಲ್ಲಿದ್ದರು. ಇ.ಡಿ ಕಸ್ಟಡಿ ಅವಧಿ ಪೂರ್ಣಗೊಂಡ ನಂತರ ಅವರು ಅನಾರೋಗ್ಯದಿಂದಾಗಿ ಇಲ್ಲಿನ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಜಾಮೀನಿಗೆ ವಿಧಿಸಿದ ಷರತ್ತುಗಳು

* ಅಧೀನ ನ್ಯಾಯಾಲಯಕ್ಕೆ ₹ 25 ಲಕ್ಷ ಭದ್ರತೆಯ 2 ಬಾಂಡ್‌ ನೀಡಬೇಕು
* ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ಬಿಟ್ಟು ಹೋಗಬಾರದು
* ತನಿಖಾ ಸಂಸ್ಥೆ ಬಯಸಿದಲ್ಲಿ ವಿಚಾರಣೆಗೆ ಲಭ್ಯವಾಗಿ ಸಹಕರಿಸಬೇಕು

ಆದೇಶದಲ್ಲಿರುವ ಅಂಶಗಳು

* 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರೋಪಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆಗಳಿಲ್ಲ

* ಶಾಸಕ ಸ್ಥಾನ ಹೊರತುಪಡಿಸಿ ಬೇರೆ ಯಾವುದೇ ಅಧಿಕಾರದಲ್ಲಿ ಇರದ್ದರಿಂದ ಸಾಕ್ಷ್ಯಗಳನ್ನು ತಿರುಚುವ ಮತ್ತು ಪ್ರಭಾವ ಬೀರುವ ಸಾಧ್ಯತೆಗಳೂ ವಿರಳ

* ಇದುವರೆಗೆ ಗುರುತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದ, ಶಿಕ್ಷೆಗೆ ಒಳಗಾಗದ್ದನ್ನು ಪರಿಗಣಿಸಿ ಜಾಮೀನು ನೀಡಲಾಗಿದೆ

* ಜನಪ್ರತಿನಿಧಿಯಾದ ಆರೋಪಿ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು ಎಂದು ತನಿಖಾ ಸಂಸ್ಥೆಯ ಪರ ವಕೀಲರು ದೂರಿದ್ದಾರಾದರೂ ಅದಕ್ಕೆ ಸೂಕ್ತ ಪುರಾವೆ ಒದಗಿಸುವಲ್ಲಿ ವಿಫಲರಾಗಿದ್ದಾರೆ

* ಆರೋಪಿಯನ್ನು 15 ದಿನ ವಿಚಾರಣೆ ನಡೆಸಲಾಗಿದೆ. ಪ್ರಕರಣದಲ್ಲಿ ಒಟ್ಟು 14 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆಪ್ತರು, ಕುಟುಂಬ ಸದಸ್ಯರು ವೈಯಕ್ತಿಕವಾಗಿ ಸಾಕ್ಷ್ಯಗಳನ್ನು ಸಂಪರ್ಕಿಸಿ ಬೆದರಿಸಿದ ಉದಾಹರಣೆಗಳಿಲ್ಲ

ಡಿಕೆಶಿ ಭೇಟಿ ಮಾಡಿದ ಸೋನಿಯಾ

ನವದೆಹಲಿ: ಬುಧವಾರ ಬೆಳಿಗ್ಗೆ ಇಲ್ಲಿನ ತಿಹಾರ್‌ ಕೇಂದ್ರ ಕಾರಾಗೃಹಕ್ಕೆ ತೆರಳಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಬಂಧಿತ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದರು.

‘ಬೆಳಿಗ್ಗೆ 9.30ರಿಂದ 10ರವರೆಗೆ ಶಿವಕುಮಾರ್‌ ಅವರೊಂದಿಗೆ ಮಾತುಕತೆ ನಡೆಸಿದ ಸೋನಿಯಾ, ಧೈರ್ಯ ತುಂಬಿದರಲ್ಲದೆ, ಆರೋಪದಿಂದ ಕೂಡಲೇ ಮುಕ್ತವಾಗಿ ಹೊರ ಬರಲಿದ್ದೀರಿ ಎಂಬ ವಿಶ್ವಾಸ ತುಂಬಿದರು’ ಎಂದು ಈ ಸಂದರ್ಭ ಹಾಜರಿದ್ದ ಸೋದರ ಡಿ.ಕೆ. ಸುರೇಶ ಸುದ್ದಿಗಾರರಿಗೆ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT