ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೌಟುಂಬಿಕ ಹಿಂಸೆಯಿಂದ ಮಹಿಳೆ ಸಂರಕ್ಷಣೆ | ಧರ್ಮಾತೀತವಾಗಿ ಕಾಯ್ದೆ ಅನ್ವಯ: SC

Published : 26 ಸೆಪ್ಟೆಂಬರ್ 2024, 13:39 IST
Last Updated : 26 ಸೆಪ್ಟೆಂಬರ್ 2024, 13:39 IST
ಫಾಲೋ ಮಾಡಿ
Comments

ನವದೆಹಲಿ: ಮಹಿಳೆ ಯಾವುದೇ ಧರ್ಮಕ್ಕೆ ಸೇರಿರಲಿ ಅಥವಾ ಯಾವುದೇ ಸಾಮಾಜಿಕ ಹಿನ್ನೆಲೆ ಹೊಂದಿರಲಿ, ‘ಕೌಟುಂಬಿಕ ಹಿಂಸೆಯಿಂದ ಮಹಿಳೆ ಸಂರಕ್ಷಣೆ ಕಾಯ್ದೆ’ ಆಕೆಗೆ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಈ ಕಾಯ್ದೆ ಕೂಡ ನಾಗರಿಕ ಸಂಹಿತೆಯ ಭಾಗವಾಗಿದೆ. ಸಂವಿಧಾನದಡಿ ಮಹಿಳೆಯರಿಗೆ ನೀಡಲಾಗಿರುವ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಿಸುವುದಕ್ಕಾಗಿ ದೇಶದ ಪ್ರತಿಯೊಬ್ಬ ಮಹಿಳೆಗೂ ಈ ಕಾಯ್ದೆ ಅನ್ವಯವಾಗುತ್ತದೆ’ ಎಂದು ತಿಳಿಸಿದೆ. 

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಎನ್‌.ಕೋಟೀಶ್ವರ ಸಿಂಗ್‌ ಅವರಿದ್ದ ನ್ಯಾಯಪೀಠ, ಕೌಟುಂಬಿಕ ಸಂಬಂಧಗಳಲ್ಲಿ ಕಂಡುಬರುವ ಹಿಂಸೆಯಿಂದ ಸಂತ್ರಸ್ತರಾಗುವ ಮಹಿಳೆಯರನ್ನು ರಕ್ಷಿಸುವುದಕ್ಕೂ ಈ ಕಾಯ್ದೆ ಅನ್ವಯವಾಗಲಿದೆ’ ಎಂದು ಹೇಳಿದೆ.

ಪರಿಹಾರ ಮತ್ತು ಜೀವನಾಂಶಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.

ಪ್ರಕರಣ: ಅರ್ಜಿದಾರ ಮಹಿಳೆ, ‘ಕೌಟುಂಬಿಕ ಹಿಂಸೆಯಿಂದ ಮಹಿಳೆ ಸಂರಕ್ಷಣೆ ಕಾಯ್ದೆ’ಯ ಸೆಕ್ಷನ್‌ 12ರಡಿ 2015ರ ಫೆಬ್ರುವರಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮಾನ್ಯ ಮಾಡಿ, ಆಕೆಗೆ ₹ 1 ಲಕ್ಷ ಪರಿಹಾರ ಹಾಗೂ ಮಾಸಿಕ ₹12 ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಪತಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಆ ಅರ್ಜಿಯನ್ನು ವಜಾಗೊಳಿಸಿತ್ತು. ಪತಿಯು ಬಹಳ ತಡವಾಗಿ ಮೇಲ್ಮನವಿ ಸಲ್ಲಿಸಿದ್ದರಿಂದ, ಅದನ್ನು ನ್ಯಾಯಾಲಯ ವಜಾಗೊಳಿಸಿತ್ತು ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ ಗಮನಿಸಿದೆ.

ನಂತರ, ಇದೇ ಕಾಯ್ದೆಯ ಸೆಕ್ಷನ್‌ 25ರಡಿ ಪತಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಆದೇಶದಲ್ಲಿ ಮಾರ್ಪಾಡು ಕೋರಲು ಈ ಸೆಕ್ಷನ್‌ ಅವಕಾಶ ನೀಡುತ್ತದೆ. ಆದರೆ, ಈ ಅರ್ಜಿಯನ್ನು ಕೂಡ ಮ್ಯಾಜಿಸ್ಟ್ರೇಟ್‌ ವಜಾಗೊಳಿಸಿ ದ್ದರು. ಇದನ್ನು ಪ್ರಶ್ನಿಸಿ ಪತಿ, ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಮೇಲ್ಮನವಿ ನ್ಯಾಯಾಲಯ, ‘ಪತಿಯ ಅರ್ಜಿಯನ್ನು ಪರಿಗಣಿಸಬೇಕು. ಪತಿ ಮತ್ತು ಪತ್ನಿ ಇಬ್ಬರಿಗೂ ಮತ್ತೊಮ್ಮೆ ಸಾಕ್ಷ್ಯಗಳನ್ನು ಮಂಡಿಸಲು ಅವಕಾಶ ನೀಡಬೇಕು’ ಎಂದು ಮ್ಯಾಜಿಸ್ಟ್ರೇಟ್‌ ಅವರಿಗೆ ನಿರ್ದೇಶನ ನೀಡಿತ್ತು.

ನ್ಯಾಯಾಲಯದ ಈ ನಿರ್ದೇಶನದ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಮಹಿಳೆ, ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಮಹಿಳೆಯ ಅರ್ಜಿಯನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ವಜಾಗೊಳಿಸಿದ್ದ ಹೈಕೋರ್ಟ್‌, ಕಾಯ್ದೆಯ ಸೆಕ್ಷನ್‌ 25ರಡಿ ಮಹಿಳೆಯ ಪತಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್‌ ಅವರಿಗೆ ನಿರ್ದೇಶನ ನೀಡಿತ್ತು.

‘ಪರಿಸ್ಥಿತಿ ಬದಲಾಗದೆ ಅಪೀಲಿಗೆ ಅವಕಾಶವಿಲ್ಲ’

ಕಾಯ್ದೆಯ ಸೆಕ್ಷನ್‌ 25ರ ಕುರಿತು ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿರುವ ಸುಪ್ರೀಂ ಕೋರ್ಟ್‌, ‘ನೊಂದ ವ್ಯಕ್ತಿ ಅಥವಾ ಪ್ರತಿವಾದಿ, ಆದೇಶದಲ್ಲಿ ಮಾರ್ಪಾಡು ಅಥವಾ ಬದಲಾವಣೆ ಇಲ್ಲವೇ ಆದೇಶ ರದ್ದತಿ ಕೋರಿ ಅಪೀಲು ಸಲ್ಲಿಸಲು ಈ ಸೆಕ್ಷನ್‌ ಅಡಿ ಅವಕಾಶಗಳಿವೆ. ಆದರೆ, ಈ ರೀತಿ ಅಪೀಲು ಸಲ್ಲಿಸಲು ಸಂದರ್ಭ/ಪರಿಸ್ಥಿತಿಗಳಲ್ಲಿ ಬದಲಾವಣೆ ಕಂಡುಬಂದಿರಬೇಕು. ಇಂತಹ ಬದಲಾವಣೆ ಕುರಿತು ಕಾಯ್ದೆಯ ಸೆಕ್ಷನ್‌ 25ರ ಉಪಸೆಕ್ಷನ್‌(2)ರಲ್ಲಿ ವಿವರಿಸಲಾಗಿದೆ’ ಎಂದು ಪೀಠ ಹೇಳಿದೆ.

‘ಸಂದರ್ಭಗಳಲ್ಲಿ ಬದಲಾವಣೆ ಅಂದರೆ ಏನು ಎಂಬುದನ್ನು ಕಾಯ್ದೆಯಲ್ಲಿ ವಿವರಿಸಲಾಗಿದೆ. ಪ್ರತಿವಾದಿ ಅಥವಾ ನೊಂದ ವ್ಯಕ್ತಿಯ ಆದಾಯದಲ್ಲಿ ಬದಲಾವಣೆ ಆಗಿರಬೇಕು. ಇಲ್ಲವೇ, ಮ್ಯಾಜಿಸ್ಟ್ರೇಟ್‌ ಆದೇಶದಂತೆ ನೀಡುತ್ತಿರುವ ಜೀವನಾಂಶದಲ್ಲಿ ಹೆಚ್ಚಳ ಇಲ್ಲವೇ ಕಡಿತ ಮಾಡುವುದನ್ನು ಸಮರ್ಥಿಸುವ ರೀತಿಯಲ್ಲಿ ಬದಲಾವಣೆ ಇರಬೇಕು’ ಎಂದು ಹೇಳಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ, ಜೀವನಾಂಶ/ಪರಿಹಾರ ಕುರಿತಂತೆ ಮ್ಯಾಜಿಸ್ಟ್ರೇಟ್‌ ಅವರು ಆದೇಶ ಹೊರಡಿದ ನಂತರ ಪರಿಸ್ಥಿತಿಗಳಲ್ಲಿ ಬದಲಾವಣೆಗಳು ಕಂಡುಬಂದಿದ್ದರೆ, ಕಾಯ್ದೆಯ ಸೆಕ್ಷನ್‌25(2) ಅನ್ನು ಅನ್ವಯ ಮಾಡಬಹುದಿತ್ತು ಎಂದಿರುವ ಸುಪ್ರೀಂ ಕೋರ್ಟ್‌, ‘ಮಾರ್ಪಾಡು, ಬದಲಾವಣೆ ಇಲ್ಲವೇ ರದ್ದತಿಗೆ ಸಂಬಂಧಿಸಿದ ಆದೇಶವು ಮುಂದಿನ ದಿನಗಳಿಗೆ ಅನ್ವಯವಾಗುತ್ತದೆ ಹೊರತು ಪೂರ್ವಾನ್ವಯವಾಗುದಿಲ್ಲ’ ಎಂದಿದೆ.

ಈ ಪ್ರಕರಣದಲ್ಲಿಯೂ ಆದೇಶವನ್ನು
ಪೂರ್ವಾನ್ವಯಗೊಳಿಸುವಂತೆ ಪತಿಯು ಕೋರುವಂತಿಲ್ಲ. ಮೂಲ ಆದೇಶದಂತೆ ಪತ್ನಿಗೆ ಈಗಾಗಲೇ ನೀಡಿರುವ ಹಣವನ್ನು ವಾಪಸು ನೀಡುವಂತೆ ಕೇಳುವ ಹಾಗಿಲ್ಲ ಎಂದ ಪೀಠವು, ಹೈಕೋರ್ಟ್‌ ಆದೇಶ ಮತ್ತು ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT