ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಬಳಿಕ ಯಾರೇ ಅಧ್ಯಕ್ಷರಾದರೂ, ಅವರೊಂದಿಗೆ ಕೆಲಸ ಮಾಡುವ 'ಸಂಪೂರ್ಣ ವಿಶ್ವಾಸ' ಭಾರತಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೈಶಂಕರ್, ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಈ ವರ್ಷಾಂತ್ಯದಲ್ಲಿ ನಡೆಯಲಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅವರೆದುರು ಉಪಾಧ್ಯಕ್ಷೆ ಹಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ.
'ಸಾಮಾನ್ಯವಾಗಿ ನಾವು ಬೇರೆ ದೇಶಗಳ ಚುನಾವಣೆ ಕುರಿತು ಮಾತನಾಡುವುದಿಲ್ಲ. ಏಕೆಂದರೆ, ಬೇರೆಯವರು ನಮ್ಮ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಭಾವಿಸುತ್ತೇವೆ. ಅಮೆರಿಕದ ಅಧ್ಯಕ್ಷ ಯಾರೇ ಆದರೂ, ಅವರೊಂದಿಗೆ ಕೆಲಸ ಮಾಡುವ ಸಂಪೂರ್ಣ ವಿಶ್ವಾಸವನ್ನು ಭಾರತ ಹೊಂದಿದೆ' ಎಂದು ಹೇಳಿದ್ದಾರೆ.
ಜಾಗತಿಕ ಪರಿಸ್ಥಿತಿ ಕುರಿತ ತಮ್ಮ ದೃಷ್ಟಿಕೋನದ ಬಗ್ಗೆ ಕೇಳಿದ್ದಕ್ಕೆ, 'ಮುಂದಿನ ಐದು ವರ್ಷಗಳು ಕಠಿಣವಾಗಿರುವ ಸಾಧ್ಯತೆ ಇದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.