ನವದೆಹಲಿ: ಜೋಡಿ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಹಾರದ ಮಹಾರಾಜಗಂಜ್‌ನ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
1995ರಲ್ಲಿ ಬಿಹಾರದ ವಿಧಾನಸಭಾ ಚುನಾವಣೆಯ ಮತದಾನ ದಿನದಂದೇ ಸರಣ್ ಜಿಲ್ಲೆಯಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿತ್ತು.
ಕೊಲೆ ಪ್ರಕರಣದಲ್ಲಿ ಪ್ರಭುನಾಥ್ ಸಿಂಗ್ ಅವರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯ ಮತ್ತು ಪಟ್ನಾ ಹೈಕೋರ್ಟ್‌ನ ಆದೇಶಗಳನ್ನು ಆಗಸ್ಟ್ 18ರಂದು ರದ್ದುಗೊಳಿಸಿದ್ದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು, ಸಿಂಗ್ ಅವರನ್ನು ಅಪರಾಧಿ ಎಂದು ತೀರ್ಪು ನೀಡಿತ್ತು.
ಅಪರಾಧಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣದ ಬಗ್ಗೆ ವಾದಗಳನ್ನು ಆಲಿಸಲು ಶುಕ್ರವಾರ ನಿಗದಿಪಡಿಸಲಾಗಿತ್ತು. ಈ ವೇಳೆ ‘ಈ ಹಿಂದೆ ಇಂಥ ಪ್ರಕರಣವನ್ನು ಎಂದೂ ನೋಡಿರಲಿಲ್ಲ’ ಎಂದು ನ್ಯಾಯಪೀಠವು ಹೇಳಿದೆ.
‘ಜೋಡಿ ಕೊಲೆಯಲ್ಲಿ ಹತ್ಯೆಗೀಡಾದ ಎರಡೂ ಕುಟುಂಬದವರಿಗೆ ತಲಾ ₹ 10 ಲಕ್ಷ ಹಾಗೂ ಗಾಯಗೊಂಡ ಐವರಿಗೆ ತಲಾ ₹ 5 ಲಕ್ಷ ನೀಡಬೇಕು’ ಎಂದು ಅಪರಾಧಿ ಸಿಂಗ್ ಹಾಗೂ ಬಿಹಾರ ಸರ್ಕಾರಕ್ಕೆ ಪೀಠವು ನಿರ್ದೇಶನ ನೀಡಿದೆ.
ಶಿಕ್ಷೆಯ ಪ್ರಮಾಣ ನಿಗದಿಪಡಿಸುವಾಗ ನ್ಯಾಯಪೀಠವು, ‘ಕೇವಲ ಎರಡೇ ಆಯ್ಕೆಗಳಿವೆ. ಮೂರನೇ ಆಯ್ಕೆ ಎಂಬುದಿಲ್ಲ. ಒಂದು ಜೀವಾವಧಿ ಶಿಕ್ಷೆ, ಮತ್ತೊಂದು ಮರಣದಂಡನೆ’ ಎಂದು ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್ ಪರ ವಕೀಲ, ‘ಮರಣದಂಡನೆಗೆ ಪರಿಗಣಿಸಬಹುದಾದ ಪ್ರಕರಣವು ಇದಲ್ಲ. ಅಧೀನ ನ್ಯಾಯಾಲಯಗಳ ಖುಲಾಸೆ ಆದೇಶಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಸಿಂಗ್ ಅವರನ್ನು ಅಪರಾಧಿ ಎಂದು ಘೋಷಿಸಿದೆ. ಈ ಘೋಷಣೆಯನ್ನು ನ್ಯಾಯಾಲಯವು ಮರು ಪರಿಶೀಲಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ’ ಎಂದು ಅಪರಾಧಿ ಪರ ವಕೀಲರು ಮನವಿ ಮಾಡಿದರು.
ಇದನ್ನು ಪರಿಗಣಿಸುವುದಾಗಿ ನ್ಯಾಯಪೀಠವು ತಿಳಿಸಿತು.
‘ಇಂಥ ಪ್ರಕರಣವು, ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ನೋವಿನ ಪ್ರಕರಣವಾಗಿದೆ’ ಎಂದಿರುವ ನ್ಯಾಯಪೀಠವು, ‘ಕ್ರಿಮಿನಲ್ ವಿಚಾರಣೆಯಲ್ಲಿ ಮೂರು ಪ್ರಮುಖ ಪಾಲುದಾರರಾದ ತನಿಖಾಧಿಕಾರಿ, ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ನ್ಯಾಯಾಂಗ ವ್ಯವಸ್ಥೆ ಈ ಮೂವರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸಿಂಗ್ ಅವರ ವಿರುದ್ಧದ ಸಾಕ್ಷ್ಯವನ್ನು ಅಳಿಸಿಹಾಕಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವಲ್ಲಿ ಈ ಮೂವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರಲ್ಲಿ ಯಾವುದೇ ಒಂದು ಸಣ್ಣ ಅನುಮಾನವೂ ಇಲ್ಲ’ ಎಂಬುದನ್ನು ಗಮನಿಸಿದೆ.
ಏನಿದು ಪ್ರಕರಣ?: 1995ರ ಮಾರ್ಚ್ 25ರಂದು ಬಿಹಾರ ವಿಧಾನಸಭಾ ಚುನಾವಣೆಯ ಮತದಾನದ ದಿನ. ಸರಣ್ ಜಿಲ್ಲೆಯ ಚಾಪ್ರಾ ಗ್ರಾಮದ ದರೋಗಾ ರೈ ಮತ್ತು ರಾಜೇಂದ್ರ ರೈ ತಮ್ಮ ಗ್ರಾಮದ ಇತರ ಎಂಟ್ಹತ್ತು ಜನರೊಂದಿಗೆ ಮತದಾನ ಮುಗಿಸಿ ವಾಪಸ್ ಬರುತ್ತಿದ್ದರು. ಅದೇ ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಬಿಹಾರ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಪ್ರಭುನಾಥ ಸಿಂಗ್, ಕಾರು ನಿಲ್ಲಿಸಿ ರೈ ಮತ್ತು ಗ್ರಾಮಸ್ಥರನ್ನು ಯಾರಿಗೆ ಮತ ಚಲಾಯಿಸಿದಿರಿ ಎಂದು ವಿಚಾರಿಸುತ್ತಾರೆ.
ಬೇರೆ ರಾಜಕೀಯ ಪಕ್ಷಕ್ಕೆ ಮತ ಚಲಾಯಿಸಿರುವುದಾಗಿ ರೈ ಹೇಳಿದಾಗ, ಸಿಂಗ್ ತಮ್ಮ ರೈಫಲ್‌ನಿಂದ ಅವರತ್ತ ಗುಂಡು ಹಾರಿಸುತ್ತಾರೆ. ಈ ವೇಳೆ ದರೋಗಾ ರೈ ಮತ್ತು ರಾಜೇಂದ್ರ ರೈ ಸೇರಿದಂತೆ ಮೂವರು ಗಾಯಗೊಳ್ಳುತ್ತಾರೆ. ಚಿಕಿತ್ಸೆ ಸಮಯದಲ್ಲಿ ದರೋಗಾ ಮತ್ತು ರಾಜೇಂದ್ರ ಸಾವೀಗೀಡಾಗುತ್ತಾರೆ. ಆದರೆ, ಸಾಯುವ ಮುನ್ನ ರಾಜೇಂದ್ರ ಅವರು ನೀಡಿದ್ದ ಹೇಳಿಕೆಯಿಂದ ಪ್ರಭುನಾಥ್ ಸಿಂಗ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಲಡಾಕ್: ನ್ಯಾಷನಲ್ ಕಾನ್ಫರೆನ್ಸ್‌ನ ಅರ್ಜಿಯ ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’
ಸೆ. 10ರಂದು ಲಡಾಕ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಯ (ಎಲ್‌ಎಎಚ್‌ಡಿಸಿ) ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳಿಗೆ ‘ನೇಗಿಲು’ ಚಿಹ್ನೆಯನ್ನು ನಿರಾಕರಿಸಿರುವುದನ್ನು ಪ್ರಶ್ನಿಸಿ ನ್ಯಾಷನಲ್ ಕಾನ್ಫರೆನ್ಸ್ ಸಲ್ಲಿಸಿದ ಮನವಿಯ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹಸನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರಾಡಳಿತ ಪ್ರದೇಶದ ಆಡಳಿತ ಹಾಗೂ ರಾಜಕೀಯ ಪಕ್ಷಗಳ ಪರ ವಕೀಲರ ವಾದಗಳನ್ನು ಆಲಿಸಿ ಸೆ. 6ರಂದು ತೀರ್ಪು ನೀಡುವುದಾಗಿ ಹೇಳಿದೆ.
ಕೇಂದ್ರಾಡಳಿತ ಪ್ರದೇಶ ಮತ್ತು ಚುನಾವಣಾ ಸಮಿತಿಯ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ 1968ರ ಆದೇಶವು ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳಿಗೆ ಅನ್ವಯಿಸುತ್ತದೆಯೇ ಹೊರತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಲ್ಲ. ಕಾಯ್ದಿರಿಸಿದ ಚುನಾವಣಾ ಚಿಹ್ನೆಗಳನ್ನು ಮಾನ್ಯತೆ ಪಡೆದ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಹಂಚಲಾಗಿದೆ. ನ್ಯಾಷನಲ್ ಕಾನ್ಫರೆನ್ಸ್‌ಗೆ ಸೇರಿರುವ 89 ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ‘ನೇಗಿಲು’ ಪಕ್ಷದ ಚಿಹ್ನೆಯನ್ನು ಹೊಂದಲು ಪ್ರಯತ್ನಿಸಿಲ್ಲ’ ಎಂದು ವಾದ ಮಂಡಿಸಿದರು.
‘ಸೆ. 10ರಂದು ಚುನಾವಣೆ ನಿಗದಿಯಾಗಿದ್ದು ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ ಅಭ್ಯರ್ಥಿಗಳಿಗೆ ಮೀಸಲಾಗಿರುವ ಚಿಹ್ನೆಗಳನ್ನು ನೀಡಲು ಚುನಾವಣಾ ಸಮಿತಿಯು ಯಾವುದೇ ಬಾಧ್ಯತೆ ಹೊಂದಿಲ್ಲ’ ಎಂದು ಕಾನೂನು ಅಧಿಕಾರಿ ಹೇಳಿದರು. ‘ಲಡಾಕ್ ಹಿಲ್ ಕೌನ್ಸಿಲ್‌ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಅಧಿಕಾರದಲ್ಲಿದೆ ಮತ್ತು ಅದರ ಅಭ್ಯರ್ಥಿಗಳಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮೀಸಲು ಚುನಾವಣಾ ಚಿಹ್ನೆಯನ್ನು ನಿರಾಕರಿಸಲಾಗದು’ ಎಂದು ನ್ಯಾಷನಲ್ ಕಾನ್ಫರೆನ್ಸ್ ಪರ ವಕೀಲರು ಹೇಳಿದರು.
ಸತ್ಯೇಂದ್ರ ಜೈನ್ ವಿಚಾರಣೆಯಿಂದ ಹಿಂದಕ್ಕೆ ಸರಿದ ನ್ಯಾ. ಪಿ.ಕೆ. ಮಿಶ್ರಾ
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಿ.ಕೆ. ಮಿಶ್ರಾ ಅವರು ಶುಕ್ರವಾರ ಹಿಂದಕ್ಕೆ ಸರಿದಿದ್ದಾರೆ. ವಿಚಾರಣೆಯಿಂದ ಹಿಂದೆ ಸರಿದಿರುವ ಹಿಂದಿನ ಕಾರಣವನ್ನು ಅವರು ತಿಳಿಸಿಲ್ಲ. ಜಾರಿ ನಿರ್ದೇಶನಾಲಯವು (ಇ.ಡಿ) ಕಳೆದ ವರ್ಷ ಮೇ 30ರಂದು ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.