ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸಸ್ಥಳದಿಂದಲೇ ಮತದಾನಕ್ಕೆ ವಲಸಿಗರಿಗೆ ಅವಕಾಶ: ಚುನಾವಣಾ ಆಯೋಗ

16ರಂದು ಪಕ್ಷಗಳಿಗೆ ಪ್ರಾತ್ಯಕ್ಷಿಕೆ
Last Updated 29 ಡಿಸೆಂಬರ್ 2022, 11:18 IST
ಅಕ್ಷರ ಗಾತ್ರ

ನವದೆಹಲಿ: ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅನುವಾಗುವಂತೆ ದೂರನಿಯಂತ್ರಿತ ವಿದ್ಯುನ್ಮಾನ ಮತಯಂತ್ರದ (ಆರ್‌ವಿಎಂ) ಮಾದರಿಯನ್ನು ಕೇಂದ್ರ ಚುನಾವಣಾ ಆಯೋಗವು ಅಭಿವೃದ್ಧಿಪಡಿಸಿದೆ.

ರಿಮೋಟ್‌ ವೋಟಿಂಗ್ ಮಷೀನ್‌ (ಆರ್‌ವಿಎಂ) ಕಾರ್ಯಶೈಲಿ ಕುರಿತು ರಾಜಕೀಯ ಪಕ್ಷಗಳಿಗೆ ಜ.16ರಂದು ಪ್ರಾತ್ಯಕ್ಷಿಕೆ ನೀಡಲಿದೆ. ನೂತನ ಸೌಲಭ್ಯ ಜಾರಿಗೆ ಬಂದರೆ ವಲಸಿಗರು ತಾವು ವಾಸವಿರುವ ಸ್ಥಳದಿಂದಲೇ ಮತದಾನ ಮಾಡಬಹುದು. ಮತದಾನ ಮಾಡಲೆಂದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಹುಟ್ಟೂರಿಗೆ ಪ್ರಯಾಣಿಸುವ ಅಗತ್ಯ ಬರುವುದಿಲ್ಲ.

ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚಿಸುವುದು ಇದರ ಉದ್ದೇಶ.ಇವಿಎಂಗಳ ಮಾದರಿಯಲ್ಲಿಯೇ ಆರ್‌ವಿಎಂ ಇರಲಿದೆ. ದೃಢವಾಗಿದ್ದು, ಲೋಪಕ್ಕೆ ಅವಕಾಶ ಇರುವುದಿಲ್ಲ. ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಲಾಗುವುದಿಲ್ಲ ಎಂದು ಆಯೋಗ ಹೇಳಿದೆ.

ಪ್ರಾತ್ಯಕ್ಷಿಕೆ ಹಾಗೂ ಆರ್‌ವಿಎಂ ಕಾರ್ಯಶೈಲಿ ವಿವರಿಸಲು ಮಾನ್ಯತೆ ಪಡದ ಎಂಟು ರಾಷ್ಟ್ರೀಯ ಮತ್ತು 57 ಪ್ರಾದೇಶಿಕ ಪಕ್ಷಗಳಿಗೆ ಆಯೋಗ ಆಹ್ವಾನ ಕಳುಹಿಸಿದೆ. ಆಯೋಗದ ತಾಂತ್ರಿಕ ಪರಿಣತರ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೂರನಿಯಂತ್ರಿತ ಒಂದು ಮತಗಟ್ಟೆಯಿಂದ ಒಟ್ಟು 72 ಕ್ಷೇತ್ರಗಳ ನಿರ್ವಹಣೆ ಸಾಧ್ಯವಿದೆ ಎಂದು ಆಯೋಗವು ಹೇಳಿದೆ.

ಅಲ್ಲದೆ ವಲಸಿಗರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ಕ್ರಮ, ಈ ಪ್ರಕ್ರಿಯೆಯ ಅನುಷ್ಠಾನ ಕ್ರಮ, ಪೂರಕವಾಗಿ ಆಡಳಿತಾತ್ಮಕವಾಗಿ ಆಗಬೇಕಿರುವ ಬದಲಾವಣೆ, ಪ್ರತ್ಯೇಕ ಕಾಯ್ದೆಯ ಅಗತ್ಯ ಕುರಿತಂತೆ ಅಭಿಪ್ರಾಯ ತಿಳಿಸುವಂತೆಯೂ ಪಕ್ಷಗಳಿಗೆ ಕೋರಲಾಗಿದೆ.

ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದ ಕುಗ್ರಾಮಗಳ ಮತಗಟ್ಟೆಗಳಿಗೆ ಮತಯಂತ್ರ ಸಾಗಣೆ, ಸಿಬ್ಬಂದಿ ಪ್ರಯಾಣ ಕಷ್ಟವಾಗಿತ್ತು. ಮತ ಎಣಿಕೆ ಕೂಡಾ ‘ತಾಂತ್ರಿಕವಾಗಿ ಸವಾಲಿನದಾಗಿತ್ತು’ ಎಂದು ಆಯೋಗದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಮಾದರಿ ಆರ್‌ವಿಎಂನ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಭಾಗಿದಾರರ ಅಭಿಪ್ರಾಯಗಳನ್ನು ಪರಿಗಣಿಸಿ ಮತದಾನ ಪ್ರಕ್ರಿಯೆಯಲ್ಲಿ ಇದನ್ನು ಜಾರಿಗೊಳಿಸಲು ಆಯೋಗ ನಿರ್ಧರಿಸಿದೆ. ಈ ಬಗ್ಗೆ ಕಾನೂನಾತ್ಮಕ, ಆಡಳಿತ ಮತ್ತು ತಾಂತ್ರಿಕ ಸವಾಲುಗಳು ಕುರಿತಂತೆ ಈಗ ರಾಜಕೀಯ ಪಕ್ಷಗಳ ಜೊತೆಗೆ ಸಮಾಲೋಚಿಸಲು ಮುಂದಾಗಿದೆ.

ಮತದಾನ ಪ್ರಮಾಣವನ್ನು ಹೆಚ್ಚಿಸಲು ಇದು ಉತ್ತಮ ಪರಿಕ್ರಮವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ತಿಳಿಸಿದ್ದಾರೆ.

ಬಳಕೆಗೆ ಅರ್ಹವಾದ, ವಿಶ್ವಾಸಾರ್ಹವಾದ ಮತ್ತು ಭಾಗಿದಾರರು ಒಪ್ಪಬಹುದಾದ ತಾಂತ್ರಿಕ ಪರಿಹಾರ ಕ್ರಮಗಳನ್ನು ಗುರುತಿಸುವುದರ ಭಾಗವಾಗಿಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್, ಆಯುಕ್ತರಾದ ಅನೂಪ್ ಚಂದ್ರ ಪಾಂಡೆ, ಅರುಣ್‌ ಗೋಯಲ್ ನೇತೃತ್ವದಲ್ಲಿ ಆಯೋಗವು ಈಗ ಆರ್‌ವಿಎಂ ರೂಪಿಸಿದೆ ಎಂದು ಹೇಳಿಕೆ ತಿಳಿಸಿದೆ.

ಪದೇ ಪದೇ ವಿಳಾಸ ಬದಲಾವಣೆ ಆಗಲಿದೆ ಎಂಬುದು, ಹುಟ್ಟೂರಿನ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಬೇಡ ಎಂಬ ಭಾವನೆ, ವಲಸೆ ಹೋದ ಸ್ಥಳದ ಕುರಿತು ಭಾವನಾತ್ಮಕ ಸಂಬಂಧ ಇಲ್ಲದಿರುವ ಕಾರಣ ವಲಸಿಗರು ಕೆಲಸ ಮಾಡುವ ಸ್ಥಳದಲ್ಲಿ ಹೆಸರು ನೋಂದಣಿಗೆ ಆಸಕ್ತಿ ತೋರುತ್ತಿರಲಿಲ್ಲ. ಹೊಸ ಕ್ರಮದಿಂದ ಇಂತಹವರು ಮತದಾನ ಮಾಡಲು ಸಾಧ್ಯವಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT