ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ ಛತ್ತೀಸಗಢ ಸಿಎಂಗೆ ₹508 ಕೋಟಿ ಪಾವತಿ: ಇಡಿ ಆರೋಪ

Published 3 ನವೆಂಬರ್ 2023, 16:01 IST
Last Updated 3 ನವೆಂಬರ್ 2023, 16:01 IST
ಅಕ್ಷರ ಗಾತ್ರ

ನವದೆಹಲಿ: ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರಿಗೆ ಮಹದೇವ್‌ ಬೆಟ್ಟಿಂಗ್‌ ಆ್ಯಪ್‌ನ ಪ್ರವರ್ತಕರು ₹ 508 ಕೋಟಿ ನೀಡಿರುವ ಕುರಿತು ಆರಂಭಿಕ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

‘ಕ್ಯಾಶ್‌ ಕೊರಿಯರ್‌’ನ ಹೇಳಿಕೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವಿಶ್ಲೇಷಣೆಗಳು ಈ ಆರೋಪಗಳಿಗೆ ಪೂರಕವಾಗಿವೆ. ಆದರೆ, ಉಲ್ಲೇಖಿತ ಆರೋಪ ಕುರಿತು ವಿಸ್ತೃತ ತನಿಖೆ ಅಗತ್ಯವಾಗಿದೆ’ ಎಂದು ಇ.ಡಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 

ಏಜೆಂಟ್‌ ಎನ್ನಲಾದ ಅಸಿಂ ದಾಸ್‌ ಎಂಬಾತನನ್ನು ಇ.ಡಿ ಅಧಿಕಾರಿಗಳು ರಾಯಪುರದಲ್ಲಿ ಬಂಧಿಸಿ, ಆತನಿಂದ ₹ 5.39 ಕೋಟಿ ವಶಪಡಿಸಿ ಕೊಂಡಿದ್ದರು. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಚುನಾವಣಾ ವೆಚ್ಚಕ್ಕಾಗಿ ಅಗತ್ಯವಿರುವ ಹಣವನ್ನು ಹಸ್ತಾಂತರಿಸಲು ಆ್ಯಪ್‌ನ ಪ್ರವರ್ತಕರೇ ಯುಎಇಯಿಂದ ದಾಸ್‌ನನ್ನು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ. 

ಜಪ್ತಿ ಮಾಡಲಾದ ಮೊತ್ತವನ್ನು ಮಹದೇವ್‌ ಆ್ಯಪ್‌ನ ಪ್ರವರ್ತಕರೇ ವ್ಯವಸ್ಥೆ ಮಾಡಿದ್ದರು. ಇದನ್ನು ‘ಬಘೆಲ್‌’ ಎಂಬ ರಾಜಕಾರಣಿಗೆ ಮುಂದಿನ ಚುನಾವಣೆ ವೆಚ್ಚಕ್ಕಾಗಿ ತಲುಪಿಸಬೇಕಾಗಿತ್ತು ಎಂದು ಅಸಿಂ ದಾಸ್‌ ಒಪ್ಪಿಕೊಂಡಿದ್ದಾನೆ ಎಂದು ಇ.ಡಿ ಹೇಳಿಕೆ ತಿಳಿಸಿದೆ.

‘ವಿಚಾರಣೆಯಲ್ಲಿ ದಾಸ್‌ ನೀಡಿದ ಮಾಹಿತಿ ಹಾಗೂ ಆತನಿಂದ ವಶಪಡಿಸಿಕೊಂಡಿರುವ ಫೋನ್‌ನ ಪ್ರಯೋಗಾಲಯ ವರದಿ, ಮಹದೇವ್ ನೆಟ್‌ವರ್ಕ್‌ನ ಆರೋಪಿ ಶುಭಂ ಸೋನಿ ಕಳುಹಿಸಿದ್ದ ಇ–ಮೇಲ್‌ನ ವಿಶ್ಲೇಷಣೆಗಳು ಆರೋಪವನ್ನು ಪುಷ್ಟಿಕರಿಸುತ್ತಿದೆ. ಆ ಪ್ರಕಾರ, ಮಹದೇವ್ ಆ್ಯಪ್‌ನ ಪ್ರವರ್ತಕರು ನಿಯಮಿತವಾಗಿ, ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್ ಬಘೆಲ್‌ ಅವರಿಗೆ ಹಣವನ್ನು ಪಾವತಿಸಿದ್ದು, ಹೀಗೇ ಪಾವತಿಸಿರುವ ಒಟ್ಟು ಮೊತ್ತವೇ ಸುಮಾರು ₹ 508 ಕೋಟಿ ಆಗಲಿದೆ’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

‘ಈ ಎಲ್ಲದರ ಬಗ್ಗೆ ಇನ್ನಷ್ಟು ತನಿಖೆ ಆಗಬೇಕಾಗಿದೆ’ ಎಂದು ತನಿಖಾ ಸಂಸ್ಥೆಯು ಸ್ಪಷ್ಟಪಡಿಸಿದೆ. ಮಹದೇವ್ ಆ್ಯಪ್‌ ಮೂಲಕ ಅಕ್ರಮವಾಗಿ ಸಂಗ್ರಹಿಸಿದ್ದ ಹಣವನ್ನು ರಾಜಕಾರಣಿಗಳು, ಅಧಿಕಾರಿಗಳಿಗೆ ಲಂಚವಾಗಿ ನೀಡಲಾಗಿದೆ ಎಂದು ಇ.ಡಿ ಹಿಂದೆ ಹೇಳಿತ್ತು. ಅಲ್ಲದೆ, ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಹಲವು ಪ್ರಮುಖರು, ಬಾಲಿವುಡ್‌ ನಟರಿಗೆ ಸಮನ್ಸ್‌ ಜಾರಿ ಮಾಡಿತ್ತು.

ದೊಡ್ಡ ಪ್ರಮಾಣದ ನಗದನ್ನು ಛತ್ತೀಸಗಢ ಮುಖ್ಯಮಂತ್ರಿಯವರಿಗೆ ಪ್ರವರ್ತಕರು ನೀಡಿದ್ದಾರೆ ಎಂಬ ಗುಪ್ತದಳದ ಮಾಹಿತಿಯನ್ನು ಆಧರಿಸಿ ಗುರುವಾರ, ಬಂಧಿತ ದಾಸ್‌ನ ವಿಚಾರಣೆ ನಡೆಸಲಾಗಿತ್ತು. ಹಣವನ್ನು ಛತ್ತೀಸಗಢದ ದುರ್ಗ್‌ ಜಿಲ್ಲೆ ಭಿಲಾಯಿಯಲ್ಲಿರುವ ಹೋಟೆಲ್‌ ಟ್ರೈಟನ್‌ ಬಳಿ ನಿಲ್ಲಿಸಲಾಗಿದ್ದ ಸುವ್‌ ವಾಹನದಿಂದ ಜಪ್ತಿ ಮಾಡಲಾಗಿತ್ತು ಎಂದು ಇ.ಡಿ ಮಾಹಿತಿ ನೀಡಿದೆ.

90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಗೆ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 20 ಕ್ಷೇತ್ರಗಳಿಗೆ ಮತ್ತು 2ನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

‘ದುಬೈನಲ್ಲಿ ನಡೆದ ವೈಭವೋಪೇತ ಮದುವೆಗೆ ಖಾಸಗಿ ವಿಮಾನದಲ್ಲಿ ತೆರಳಿದ್ದ ರಣಬೀರ್‌ ಕಪೂರ್, ಶ್ರದ್ಧಾ ಕಪೂರ್‌, ಕಪಿಲ್‌ ಶರ್ಮಾ ಹಾಗೂ ಹೀನಾ ಖಾನ್ ಸೇರಿದಂತೆ ಬಾಲಿವುಡ್‌ನ 17 ಸೆಲೆಬ್ರಿಟಿಗಳು ಸಮಾರಂಭದಲ್ಲಿ ಹಾಡಿ–ಕುಣಿದಿದ್ದರು. ಈ ಸೆಲೆಬ್ರಿಟಿಗಳಿಗೆ ಅಕ್ರಮವಾಗಿ ನಗದು ರೂಪದಲ್ಲಿ ಭಾರಿ ಮೊತ್ತದ ಹಣ ಸಂದಾಯ ಮಾಡಲಾಗಿತ್ತು’ ಎಂದು ಇ.ಡಿ ಈಚೆಗೆ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT