ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಘೆಲ್‌ ಕಾಂಗ್ರೆಸ್‌ನ ‘ಪ್ರಿ–ಪೇಯ್ಡ್‌’ ಸಿಎಂ, ಟಾಕ್‌ಟೈಮ್‌ ಪೂರ್ಣಗೊಂಡಿದೆ: ಶಾ

Published 3 ನವೆಂಬರ್ 2023, 11:30 IST
Last Updated 3 ನವೆಂಬರ್ 2023, 11:30 IST
ಅಕ್ಷರ ಗಾತ್ರ

ರಾಯಪುರ: ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಅವರು ಕಾಂಗ್ರೆಸ್‌ನ ‘ಪ್ರಿ–ಪೇಯ್ಡ್‌’ ಸಿಎಂ ಆಗಿದ್ದು, ಅವರ ಟಾಕ್‌ಟೈಮ್‌ ಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಪಾಂಡರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾವನಾ ಬೊಹ್ರಾ ಅವರ ಪರ ವಿಜಯ್ ಸಂಕಲ್ಪ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭೂಪೇಶ್‌ ಬಘೆಲ್‌ ಅವರು ಛತ್ತೀಸಗಢವನ್ನು ಕಾಂಗ್ರೆಸ್‌ ಹೈಕಮಾಂಡ್‌ನ ಎಟಿಎಂ ಆಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಘೆಲ್‌ ಅವರು ಛತ್ತೀಸಗಢದ ಜನರನ್ನು ಲೂಟಿ ಮಾಡಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ಅನ್ನು ಉದ್ಧಾರ ಮಾಡಲು ಬಯಸಿದ್ದಾರೆ. ಹಾಗಾಗಿ ಛತ್ತೀಸಗಢದ ಕಲ್ಯಾಣ ಮಾಡಲು ಅವರಿಂದ ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ಅವರನ್ನು ಕಾಂಗ್ರೆಸ್‌ನ ‘ಪ್ರಿ–ಪೇಯ್ಡ್‌’ ಸಿಎಂ ಎಂದು ಹೇಳುತ್ತೇನೆ. ಇದೀಗ ಅವರ ವ್ಯಾಲಿಡಿಟಿ (ಅಧಿಕಾರಾವಧಿ) ಕೊನೆಗೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಘೆಲ್‌ ಅವರು ಒಂದು ವೇಳೆ ಮತ್ತೆ ಮುಖ್ಯಮಂತ್ರಿಯಾದರೆ, ಆಗ ‘ಪ್ರಿ–ಪೇಯ್ಡ್‌’ ಕಾರ್ಡ್‌ಗಳನ್ನು ಪ್ರತಿನಿತ್ಯ ವಿನಿಮಯ ಮಾಡಿಕೊಳ್ಳುವ ಮೂಲಕ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತದೆ. ಇಷ್ಟೆಲ್ಲಾ ಹಣ ದೆಹಲಿಗೆ ಹೋದರೆ, ಛತ್ತೀಸಗಢ ಹೇಗೆ ಅಭಿವೃದ್ಧಿಗೊಳ್ಳುತ್ತದೆ ಎಂದು ಶಾ ಪ್ರಶ್ನಿಸಿದ್ದಾರೆ.

ಈ ‘ಪ್ರಿ–ಪೇಯ್ಡ್‌’ ಸಿಎಂ (ಬಘೆಲ್‌) ಅವರ ವ್ಯಾಲಿಡಿಟಿ ಮುಕ್ತಾಯಗೊಂಡಿದೆ. ಹಣ ಖಾಲಿಯಾದಾಗ ‘ಪ್ರಿ–ಪೇಯ್ಡ್‌’ ಸಿಮ್ ಕಾರ್ಡ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅದೇ ರೀತಿಯಲ್ಲಿ ಐದು ವರ್ಷಗಳಲ್ಲಿ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಬಘೆಲ್‌ ಅವರ ವ್ಯಾಲಿಡಿಟಿಯೂ ಪೂರ್ಣಗೊಂಡಿದೆ ಎಂದು ಶಾ ಲೇವಡಿ ಮಾಡಿದ್ದಾರೆ.

ನೀವೆಲ್ಲರೂ ಮತದಾನ ಮಾಡುವಾಗ ಹಾಕಲು ಹೋದಾಗ ಕೇವಲ ಶಾಸಕ ಅಥವಾ ಸಚಿವರನ್ನು ಆಯ್ಕೆ ಮಾಡಲು ಮತ ಚಲಾಯಿಸಬೇಡಿ. ಬದಲಾಗಿ ನಿಮ್ಮ ಮತ ಛತ್ತೀಸಗಢದ ಭವಿಷ್ಯವನ್ನು ರೂಪಿಸುತ್ತದೆ. ನಿಮ್ಮ ಮತವು ನಕ್ಸಲ್‌ವಾದ ಅಂತ್ಯಗೊಳಿಸಿ ಆದಿವಾಸಿ ಪ್ರದೇಶವನ್ನು ಅಭಿವೃದ್ಧಿ ಹೊಂದಿದ ಪ್ರದೇಶವನ್ನಾಗಿ ಮಾಡಲಿದೆ ಎಂದು ಹೇಳಿದ್ದಾರೆ.

90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಗೆ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 20 ಕ್ಷೇತ್ರಗಳಿಗೆ ಮತ್ತು 2ನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರಮುಖರು ಭರ್ಜರಿ ಪ್ರಚಾರ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT