ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿದೆ ಎಂದು ಅಧಿಕೃತ ಮೂಲಗಳ ತಿಳಿಸಿವೆ.
ಖಾನ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಇ.ಡಿ ಅಧಿಕಾರಿಗಳು, ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಅವರ ಮೇಲೆ ಎರಡು ಎಫ್ಐಆರ್‌ಗಳು ದಾಖಲಾಗಿವೆ. ವಕ್ಫ್ ಬೋರ್ಡ್‌ನಲ್ಲಿ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದು ಎಫ್‌ಐಆರ್ ಅನ್ನು ಸಿಬಿಐ ದಾಖಲಿಸಿದ್ದರೆ, ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ದೆಹಲಿ ಎಸಿಬಿ ಮತ್ತೊಂದು ಪ್ರಕರಣ ದಾಖಲಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ವಿಚಾರಣೆ ಹಾಜರಾಗಿದ್ದ ಖಾನ್, ನಂತರ ಇ.ಡಿ ಸಲ್ಲಿಸಿದ್ದ ಕನಿಷ್ಠ 10 ನೋಟಿಸ್‌ಗಳಿಗೆ ಉತ್ತರ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
‘ನನ್ನನ್ನು ಬಂಧಿಸಲು ಇ.ಡಿ ತಂಡ ನನ್ನ ಮನೆಗೆ ತಲುಪಿದೆ’ ಎಂದು ಮುಂಜಾನೆ 6.29 ಸುಮಾರಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಖಾನ್, ತಮ್ಮ ಬಂಧನದ ಬಗ್ಗೆ ಸುಳಿವು ನೀಡಿದ್ದರು.