ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌ : ಗುಟ್ಟು ಬಿಟ್ಟುಕೊಡದ ಪಕ್ಷಗಳು

Published 18 ಮಾರ್ಚ್ 2024, 22:46 IST
Last Updated 18 ಮಾರ್ಚ್ 2024, 22:46 IST
ಅಕ್ಷರ ಗಾತ್ರ

ನವದೆಹಲಿ : ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಪಡೆದ ಪ್ರಮುಖ ಪಕ್ಷಗಳು, ಕಾನೂನಿನ ಹಲವು ಅಂಶಗಳನ್ನು ಉಲ್ಲೇಖಿಸುವ ಮೂಲಕ ತಮಗೆ ದೇಣಿಗೆ ನೀಡಿದವರ ಹೆಸರನ್ನು ಬಹಿರಂಗಪಡಿಸಿಲ್ಲ. ಇನ್ನು ಕೆಲವು ಪಕ್ಷಗಳು, ‘ನಾವು ಅನಾಮಧೇಯ’ ಮೂಲಗಳಿಂದ ದೇಣಿಗೆ ಪಡೆದಿದ್ದೇವೆ ಎಂದು ಹೇಳಿವೆ.

ಬಿಜೆಪಿಯು 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆಯಲ್ಲಿನ ತಿದ್ದುಪಡಿ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಆದಾಯ ತೆರಿಗೆ ಇಲಾಖೆ ಕಾಯ್ದೆಯ ಅಂಶಗಳನ್ನು ಉಲ್ಲೇಖಿಸಿ, ದೇಣಿಗೆ ನೀಡಿದವರ ವಿವರಗಳನ್ನು ಬಹಿರಂಗಪಡಿಸಿಲ್ಲ.

ಕಾಂಗ್ರೆಸ್ ಪಕ್ಷವು ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರ ವಿವರ, ದೇಣಿಗೆಯ ಮೊತ್ತ, ಜಮಾ ಆಗಿರುವ ಬ್ಯಾಂಕ್ ಖಾತೆ ಮತ್ತು ದಿನಾಂಕದ ವಿವರಗಳನ್ನು ಕೋರಿ ಎಸ್‌ಬಿ ಪತ್ರ ಬರೆದಿದೆ.

ಅದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್, ಚುನಾವಣಾ ಬಾಂಡ್‌ಗಳ ವಿವರಗಳು ರಾಜಕೀಯ ಪಕ್ಷಗಳ ಬಳಿಯೇ ಇವೆ. ದೇಣಿಗೆಗೆ ಸಂಬಂಧಿಸಿದ ಬ್ಯಾಂಕ್‌ ಖಾತೆ ವಿವರಗಳನ್ನು ಚುನಾವಣಾ ಆಯೋಗದ ಜತೆ ಹಂಚಿಕೊಳ್ಳಲಾಗಿದೆ ಎಂದಿದೆ.

ಸಮಾಜವಾದಿ ಪಕ್ಷವು ತನಗೆ ದೊರೆತ ಕಡಿಮೆ ಮೊತ್ತದ ದೇಣಿಗೆಯ ವಿವರಗಳನ್ನು (₹1 ಲಕ್ಷದಿಂದ ₹10 ಲಕ್ಷದವರೆಗಿನ) ಮಾತ್ರ ಬಹಿರಂಗಪಡಿಸಿದೆ. ತಲಾ ₹1 ಕೋಟಿ ಮೊತ್ತದ 10 ಬಾಂಡ್‌ಗಳು ಅಂಚೆ ಮೂಲಕ ಪಡೆದಿದ್ದು, ಅದರಲ್ಲಿ ದೇಣಿಗೆ ನೀಡಿದವರ ಹೆಸರು ನಮೂದಿಸಿರಲಿಲ್ಲ ಎಂದಿದೆ.

ಬಾಂಡ್‌ ಮೂಲಕ ಎಷ್ಟು ಮೊತ್ತದ ದೇಣಿಗೆ ನೀಡಿದ್ದೀರಿ ಎಂಬ ಮಾಹಿತಿಯನ್ನು ದೇಣಿಗೆ ನೀಡಿದವರನ್ನು ಸಂಪರ್ಕಿಸಿ ಕಲೆಹಾಕಿರುವುದಾಗಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತಿಳಿಸಿದೆ. 

‘ಬಾಂಡ್‌ ಯೋಜನೆಯಡಿ ದೇಣಿಗೆ ಪಡೆದವರು ದೇಣಿಗೆ ನೀಡಿದವರ ವಿವರ ಒದಗಿಸುವ ಅಗತ್ಯವಿಲ್ಲ. ಆದರೂ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ನಾವು ದಾನಿಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಕಲೆಹಾಕಿದ್ದೇವೆ’ ಎಂದು ಪ‍ಕ್ಷದ ಹೇಳಿದೆ.

‘ಲಾಟರಿ ಕಿಂಗ್’ ಸ್ಯಾಂಟಿಯಾಗೊ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಆ್ಯಂಡ್‌ ಹೋಟೆಲ್‌ ಸರ್ವೀಸಸ್‌ ಸಂಸ್ಥೆಯು, ತಾನು ಖರೀದಿಸಿದ ₹1,368 ಕೋಟಿ ಮೊತ್ತದ ಚುನಾವಣಾ 
ಬಾಂಡ್‌ನಲ್ಲಿ ₹509 ಕೋಟಿಯನ್ನು ಡಿಎಂಕೆಗೆ ದೇಣಿಗೆ ನೀಡಿದೆ.

‘ನಮ್ಮ ಕಚೇರಿಯ ಸಿಬ್ಬಂದಿ ಚುನಾವಣಾ ಪ್ರಚಾರ ಸೇರಿದಂತೆ ಇತರ ಕೆಲಸಗಳಲ್ಲಿ ಮಗ್ನರಾಗಿದ್ದರು. ಆದ್ದರಿಂದ ದೇಣಿಗೆ ನೀಡಿದ ಪ್ರತಿಯೊಬ್ಬರ ಮಾಹಿತಿಯನ್ನು ಸಮೂದಿಸಲು ಸಾಧ್ಯವಾಗಿಲ್ಲ’ ಎಂಬ ಕಾರಣವನ್ನು ಎನ್‌ಸಿಪಿ ನೀಡಿದೆ.

‘ಡ್ರಾಪ್‌ ಬಾಕ್ಸ್‌ಗೆ ಹಾಕಿದ್ದರು’

‘ಕೆಲವರು ಚುನಾವಣಾ ಬಾಂಡ್‌ಗಳನ್ನು ಪಕ್ಷದ ಕಚೇರಿಗೆ ಕಳುಹಿಸಿದ್ದರು. ಅದನ್ನು ತಂದವರು ಕಚೇರಿಯ ಡ್ರಾಪ್‌ ಬಾಕ್ಸ್‌ನಲ್ಲಿ ಹಾಕಿ ಹೋಗಿದ್ದರು’ ಎಂದು ತೃಣಮೂಲ ಕಾಂಗ್ರೆಸ್‌ ಹೇಳಿದೆ. ‘ಪಕ್ಷವನ್ನು ಬೆಂಬಲಿಸಲು ಬಯಸುವ ಹಲವರು ತಮ್ಮ ಪ್ರತಿನಿಧಿಗಳ ಮೂಲಕವೂ ಬಾಂಡ್‌ಗಳನ್ನು ಕಳುಹಿಸಿದ್ದರು. ಅವರಲ್ಲಿ ಕೆಲವರು ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ’ ಎಂದು ತಿಳಿಸಿದೆ.

ಮೋದಿ ಸರ್ಕಾರದ ‘ಹಫ್ತಾ ವಸೂಲಿ’ ಯೋಜನೆ’

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಚುನಾವಣಾ ಬಾಂಡ್‌ಗಳ ಮೂಲಕ ‘ಹಫ್ತಾ ವಸೂಲಿ’ ನಡೆಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಸಿಬಿಐ, ಇ.ಡಿ., ಐ.ಟಿ ದಾಳಿಗೊಳಗಾಗಿದ್ದ 21 ಸಂಸ್ಥೆಗಳು ಬಾಂಡ್‌ಗಳ ಮೂಲಕ ದೇಣಿಗೆಯನ್ನು ಸಲ್ಲಿಸಿದ್ದವು ಎಂದೂ ಹೇಳಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ‘ಎಕ್ಸ್‌’ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ‘ಚುನಾವಣಾ ಬಾಂಡ್‌ ಹಗರಣದ ಆಳ ಕುರಿತಂತೆ ಪ್ರತಿನಿತ್ಯವು ಹೆಚ್ಚಿನ ಉದಾಹರಣೆಗಳು ಬಯಲಾಗುತ್ತಿವೆ’ ಎಂದು ಹೇಳಿದ್ದಾರೆ. 

‘ಪ್ರಧಾನ ಮಂತ್ರಿ ಹಫ್ತಾ ವಸೂಲಿ ಯೋಜನೆ’ ಕುರಿತು ನಾವು ಇನ್ನಷ್ಟು ವಿವರಗಳನ್ನು ಗಮನಿಸೋಣ. ಇದು, ‘ಚಂದಾ ಕೊಡಿ, ವ್ಯವಹಾರ ಮಾಡಿ’ ಹಾಗೂ ‘ಹಫ್ತಾ ವಸೂಲಿ’ ಕಾರ್ಯಕ್ರಮವಾಗಿತ್ತು ಎಂದೂ ಅವರು ಟೀಕಿಸಿದ್ದಾರೆ.

‘ಅರಬಿಂದೊ ಫಾರ್ಮಾ ನಿರ್ದೇಶಕ ಪಿ.ಶರದ್‌ಚಂದ್ರ ರೆಡ್ಡಿ ಅವರ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ  ನವೆಂಬರ್ 10, 2022ರಂದು ಬಂಧಿಸುತ್ತದೆ. ಐದು ದಿನದ ನಂತರ ಅರಬಿಂದೊ ಫಾರ್ಮಾ ₹ 5 ಕೋಟಿ ಮೊತ್ತದ ಬಾಂಡ್ ನೀಡಲಿದೆ.

ನವಯುಗ ಎಂಜಿನಿಯರಿಂಗ್‌ ಕಂಪನಿ ಲಿಮಿಟೆಡ್ ಏಪ್ರಿಲ್‌ 2019ರಲ್ಲಿ ₹ 30 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸುತ್ತದೆ. ಅದಕ್ಕೆ ಆರು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 2018ರಲ್ಲಿ ಈ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿರುತ್ತದೆ.

ಅಂತೆಯೇ, ಡಿಸೆಂಬರ್ 7, 2023ರಂದು ರಂಗ್ಟಾ ಸನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮೂರು ಘಟಕಗಳ ಮೇಲೆ ಐ.ಟಿ ದಾಳಿ ನಡೆಯಲಿದೆ. ಬಳಿಕ ಜನವರಿ 11, 2024ರಂದು ಕಂಪನಿಯು ₹ 1 ಕೋಟಿ ಮೌಲ್ಯದ 50 ಚುನಾವಣಾ ಬಾಂಡ್‌ಗಳನ್ನು ಖರೀದಿಸುತ್ತದೆ’ ಎಂದು ಕೆಲ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT