ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯದಲ್ಲಿ ಮತ್ತೆ ಕಮಲ; ಕಾಂಗ್ರೆಸ್‌ ಪ್ರಪಾತಕ್ಕೆ

Last Updated 3 ಮಾರ್ಚ್ 2023, 3:07 IST
ಅಕ್ಷರ ಗಾತ್ರ

ನವದೆಹಲಿ: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಕಮಲ ಮತ್ತೆ ಅರಳಿದೆ. ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಮತದಾರರು ಮತ್ತೊಮ್ಮೆ ಮಣೆ ಹಾಕಿದ್ದಾರೆ. ಮೇಘಾಲಯದಲ್ಲಿ ಅತಂತ್ರ ಫಲಿತಾಂಶ ನಿರ್ಮಾಣವಾಗಿದ್ದು, ಎನ್‌ಪಿಪಿ ನೇತೃತ್ವದಲ್ಲಿ ಮತ್ತೊಮ್ಮೆ ‘ಕಿಚಡಿ’ ಸರ್ಕಾರ ರಚನೆಯಾಗುವ ಸಾಧ್ಯತೆ ದಟ್ಟವಾಗಿದೆ.

‘ಭಾರತ ಒಗ್ಗೂಡಿಸಿ ಯಾತ್ರೆ’ಯ ಯಶಸ್ಸಿನಲ್ಲಿ ತೇಲುತ್ತಿದ್ದ ಕಾಂಗ್ರೆಸ್‌ ಮೂರು ರಾಜ್ಯಗಳಲ್ಲೂ ಪ್ರಪಾತಕ್ಕೆ ಬಿದ್ದಿದೆ. ಮತ್ತೆರಡು ರಾಜ್ಯಗಳಲ್ಲಿ ನೆಲೆ ವಿಸ್ತರಿಸುವ ತೃಣಮೂಲ ಕಾಂಗ್ರೆಸ್‌ ಕೂಡ ಮುಖಭಂಗ ಅನುಭವಿಸಿದೆ.

ಪ್ರಧಾನಿ ನರೇಂದ್ರ ಮೋದಿ ನಾಮಬಲ ನೆಚ್ಚಿಕೊಂಡು ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಹಾಗೂ ಶಾಂತಿ ಸುವ್ಯವಸ್ಥೆಯ ಮಂತ್ರ ಪಠಿಸಿದ ಕೇಸರಿ ಪಾಳಯವು ಎರಡು ರಾಜ್ಯಗಳನ್ನು ತನ್ನ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೇಘಾಲಯದಲ್ಲಿ ಕಿರಿಯ ಪಾಲುದಾರನಾಗಿ ಸರ್ಕಾರದ ಭಾಗವಾಗಲು ಹೆಜ್ಜೆ ಇಟ್ಟಿದೆ. ಮೋದಿ ಅವರು ತಿಂಗಳಿಗೊಮ್ಮೆ ಈ ರಾಜ್ಯಗಳಿಗೆ ಭೇಟಿ ನೀಡಿ ಕಣ ಸಜ್ಜುಮಾಡಿದ್ದು ಸಹ ಕೇಸರಿ ಪಾಳಯದ ನೆರವಿಗೆ ಬಂದಿದೆ. ಸಣ್ಣ ರಾಜ್ಯಗಳ ಚುನಾವಣೆಗಳಲ್ಲೂ ದೊಡ್ಡ ಮಟ್ಟದ ಕೆಚ್ಚು ತೋರಿದ ಪಕ್ಷವು ಭರಪೂರ ಲಾಭ ಪಡೆದಿದೆ. ಈ ಚುನಾವಣೆಯ ಫಲಿತಾಂಶ ಏಪ್ರಿಲ್‌– ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಇನ್ನಷ್ಟು ಹುಮ್ಮಸ್ಸು ನೀಡಿದೆ.

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ‘ಕೈ’ ‍ಪಾಳಯದ ಹೆಜ್ಜೆ ಗುರುತುಗಳು ಈಶಾನ್ಯದಿಂದ ಮರೆಯಾಗುವ ಸ್ಪಷ್ಟ ಸೂಚನೆಗಳನ್ನು ಈ ಫಲಿತಾಂಶ ನೀಡಿದೆ. ಜತೆಗೆ, ಮೂರು ರಾಜ್ಯಗಳ ಹೀನಾಯ ಸೋಲಿನೊಂದಿಗೆ ಕಾಂಗ್ರೆಸ್‌ ಪಾಳಯ ವರ್ಷ ಆರಂಭಿಸಿದೆ. ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ನಾಯಕರು ಸಣ್ಣ ರಾಜ್ಯಗಳಲ್ಲಿ ಕಾಟಾಚಾರಕ್ಕೆಂಬಂತೆ ಪ್ರಚಾರ ನಡೆಸಿದ್ದರು. ಖರ್ಗೆ ಹಾಗೂ ರಾಹುಲ್‌ ಗಾಂಧಿ ತ್ರಿಪುರಾದಲ್ಲಿ ಪ್ರಚಾರ ನಡೆಸುವ ಗೋಜಿಗೆ ಹೋಗಿರಲಿಲ್ಲ. ರಾಹುಲ್‌ ಗಾಂಧಿ ಮೇಘಾಲಯದಲ್ಲಿ ಹಾಗೂ ಖರ್ಗೆ ನಾಗಾಲ್ಯಾಂಡ್‌ನಲ್ಲಿ ಒಂದು ರ‍್ಯಾಲಿ ನಡೆಸಿ ‘ಕೈ’ ತೊಳೆದುಕೊಂಡಿದ್ದರು. ಶಾಸಕರ ಪಕ್ಷಾಂತರದಿಂದ ನಲುಗಿದ್ದ ಈ ಪಕ್ಷವು ಚುನಾವಣೆ ಘೋಷಣೆಗೆ ಮುನ್ನವೇ ಶಸ್ತ್ರ ತ್ಯಾಗ ನಡೆಸಿದಂತಿತ್ತು.

ಮೇಘಾಲಯ ಹಾಗೂ ತ್ರಿಪುರಾದಲ್ಲಿ ಉತ್ತಮ ಸಾಧನೆ ಮಾಡಿ ಬಿಜೆಪಿಗೆ ಟಕ್ಕರ್‌ ಕೊಡುವ ವಿಶ್ವಾಸದಲ್ಲಿ ತೃಣಮೂಲ ಕಾಂಗ್ರೆಸ್‌ ಇತ್ತು. ತ್ರಿಪುರದಲ್ಲಿ ಖಾತೆಯನ್ನೇ ತೆರೆದಿಲ್ಲ. ಮೇಘಾಲಯದಲ್ಲಿ ಐದು ಕಡೆ ಗೆಲುವು ಕಂಡಿದೆ. ಕಾಂಗ್ರೆಸ್‌ನಿಂದ ಶಾಸಕರ ದಂಡಿನೊಂದಿಗೆ
ಟಿಎಂಸಿಗೆ ಪಕ್ಷಾಂತರ ಮಾಡಿದ್ದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಒಂದರಲ್ಲಿ ಗೆಲುವು ಸಾಧಿಸಿ ಮತ್ತೊಂದರಲ್ಲಿ ಸೋತಿದ್ದಾರೆ. ನೆಲೆ ವಿಸ್ತರಿಸುವ ಕನಸಿನಲ್ಲಿದ್ದ ಆ ಪಕ್ಷಕ್ಕೆ ಗೋವಾದ ನಂತರ ಮತ್ತೆರಡು ರಾಜ್ಯಗಳಲ್ಲಿ ‘ಕಹಿ’ ಗುಳಿಗೆ ಸಿಕ್ಕಿದೆ.

ಬಿಜೆಪಿ ತೆಕ್ಕೆಗೆ ತ್ರಿಪುರಾ

ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ತ್ರಿಪುರಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಿಪಿಎಂ–ಕಾಂಗ್ರೆಸ್‌ ಹಾಗೂ ಟಿಪ್ರಮೊಥಾ ನಡುವೆ ಸುಮಾರು 16 ಕ್ಷೇತ್ರಗಳಲ್ಲಿ ಮತ ವಿಭಜನೆಯಾಗಿದ್ದು ಬಿಜೆಪಿಗೆ ಅನುಕೂಲವಾಗಿದೆ. ಗೆಲ್ಲಲು ಪೂರಕ ವಾತಾವರಣ ನಿರ್ಮಾಣವಾಗಿದ್ದ
ಕ್ಷೇತ್ರಗಳಲ್ಲಿ ಈ ಪಕ್ಷಗಳು ಸೋತಿವೆ.

ಬುಡಕಟ್ಟು ಜನರಿಗಾಗಿ ‘ಗ್ರೇಟರ್‌ ತ್ರಿಪುರಾ’ ಎಂಬ ಪ್ರತ್ಯೇಕ ರಾಜ್ಯದ ಬೇಡಿಕೆಯೊಂದಿಗೆ ಕಣಕ್ಕೆ ಇಳಿದಿದ್ದ ಟಿಪ್ರ ಮೊಥಾ ಪಕ್ಷವು 13 ಸ್ಥಾನಗಳನ್ನು ಗೆದ್ದುಕೊಂಡಿದೆ. ಬುಡಕಟ್ಟು ಜನರನ್ನೇ ನಂಬಿಕೊಂಡಿರುವ ಪ್ರದ್ಯೋತ್‌ ದೇಬಬರ್ಮಾ ಅವರ ಟಿಪ್ರ ಮೊಥಾವು 42 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್‌ ಪಕ್ಷ ಟಿಪ್ರ ಮೊಥಾ ಜೊತೆಗೆ ಚುನಾವಣಾಪೂರ್ವ ಹೊಂದಾಣಿಕೆಗೆ ಒಲವು ತೋರಿದ್ದವು. ಆದರೆ, ಟಿಪ್ರ ಮೊಥಾ ಯಾವುದೇ ಗುಂಪಿನ ಜತೆಗೆ ಗುರುತಿಸಿಕೊಳ್ಳಲು ಇಷ್ಟಪಡದೆ ಕಣಕ್ಕೆ ಇಳಿದಿತ್ತು. ಗದ್ದುಗೆಗೆ ಏರದಿದ್ದರೂ ಪಕ್ಷವು ದೊಡ್ಡ ಫಸಲನ್ನೇ ತೆಗೆದಿದೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು ಸಿಪಿಎಂನ 25 ವರ್ಷಗಳ ಸುದೀರ್ಘ ಆಡಳಿತವನ್ನು ಕೊನೆಗೊಳಿಸಿತ್ತು. ಈಶಾನ್ಯ ರಾಜ್ಯವೊಂದರಲ್ಲಿ ಬಿಜೆಪಿ ಮೊದಲ ಬಾರಿಗೆ ಸ್ವಂತ ಬಲದಲ್ಲಿ ಅಧಿಕಾರ ಹಿಡಿದಿತ್ತು. ಕಳೆದ ಸಲ 35 ಸ್ಥಾನಗಳನ್ನು ಗೆದ್ದಿದ್ದ ಕಮಲ ಪಡೆ ಈ ಸಲ 32 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಮಿತ್ರ ಪಕ್ಷ ಇಂಡಿಜಿನಸ್‌ ಪೀಪಲ್ಸ್‌ ಫ್ರಂಟ್‌ ಆಫ್‌ ತ್ರಿಪುರಾ (ಐಟಿಎಫ್‌ಟಿ) ಈ ಚುನಾವಣೆಯಲ್ಲಿ ಒಂದು ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಂಡಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯಂತಹ ವಿಚಾರಗಳು ಚುನಾವಣೆಯ ಮೇಲೆ ದೊಡ್ಡ ಪ್ರಭಾವವನ್ನು ಬೀರಿಲ್ಲ.

ಮುಖ್ಯಮಂತ್ರಿಯ ಬದಲಾವಣೆಯ ಪ್ರಯೋಗ ಸಹ ಬಿಜೆಪಿಗೆ ಚುನಾವಣಾ ಕಣದಲ್ಲಿ ಅನುಕೂಲ ಮಾಡಿಕೊಟ್ಟಿತು. 2018ರಲ್ಲಿ ಬಿಪ್ಲಬ್‌ ದೇಬ್‌ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಕಳೆದ ವರ್ಷ ಅವರ ಜಾಗಕ್ಕೆ ಮಾಣಿಕ್‌ ಸಹಾ ಅವರನ್ನು ತಂದಿತ್ತು. ಅವರು ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

ಈಶಾನ್ಯದ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಪಕ್ಷವನ್ನು ಪುನರುತ್ಥಾನ ಮಾಡುವ ಸಿಪಿಎಂ ನಾಯಕರ ಕನಸು ಭಗ್ನವಾಗಿದೆ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ ಪಕ್ಷದ ಗಳಿಕೆಯು ಮತ್ತಷ್ಟು ಕಡಿಮೆ ಆಗಿದೆ. ಹಿಂದಿನ ಚುನಾವಣೆಯಲ್ಲಿ 16 ಸ್ಥಾನಗಳನ್ನು ಗೆದ್ದು ಪ್ರಬಲ ಪ್ರತಿಪಕ್ಷವಾಗಿ ಉಳಿದುಕೊಂಡಿದ್ದ ಪಕ್ಷಕ್ಕೆ ಈ ಸಲ ಸಿಕ್ಕಿದ್ದು 11 ಸ್ಥಾನಗಳಷ್ಟೇ.

ತಳಮಟ್ಟದಲ್ಲಿ ಕಾರ್ಯಕರ್ತರ ಪಡೆ ಹೊಂದಿರುವ ಸಿಪಿಎಂ, ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಗೆಲುವು ಸಾಧಿಸುವ ಅಮಿತ ವಿಶ್ವಾಸದಲ್ಲಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಶೇ 43.59ರಷ್ಟು ಮತ ಸಿಕ್ಕಿತ್ತು. ಸಿಪಿಎಂ ಶೇ 42.22ರಷ್ಟು ಮತ ಪಡೆದಿತ್ತು. ಕಾಂಗ್ರೆಸ್‌ಗೆ ಶೇ 1.79ರಷ್ಟು ಮತ ಪಡೆದು ಹೀನಾಯವಾಗಿ ಸೋತಿತ್ತು. ಈ ಸಲ ಸಿಪಿಎಂ ಮತ ಪ್ರಮಾಣ ಶೇ 24.62ಕ್ಕೆ ಇಳಿದಿದೆ. ಈ ಮೈತ್ರಿಯಿಂದಾಗಿ ಕಾಂಗ್ರೆಸ್‌ಗೆ ಅಲ್ಪ ಅನುಕೂಲವಾಗಿದೆ. 2018ರಲ್ಲಿ ಸೊನ್ನೆ ಸುತ್ತಿದ್ದ ಕಾಂಗ್ರೆಸ್‌ ಗಳಿಕೆ ಸಂಖ್ಯೆ ಮೂರಕ್ಕೆ ಏರಿದೆ. ಅದರ ಮತ ಪ್ರಮಾಣ ಶೇ 8.56ಕ್ಕೆ ಹಿಗ್ಗಿದೆ.

ಮೈತ್ರಿಕೂಟಕ್ಕೆ ನಾಗಾಲ್ಯಾಂಡ್‌

ಎನ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ರಾಜ್ಯದ ಜನರು ಮತ್ತೆ ಬಹುಪರಾಕ್‌ ಎಂದಿದ್ದಾರೆ. ಶೇ 50ಕ್ಕೂ ಹೆಚ್ಚು ಮತ ಗಳಿಕೆಯೊಂದಿಗೆ ಮೈತ್ರಿಕೂಟವು ದಿಗ್ವಿಜಯ ಸಾಧಿಸಿವೆ. ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟವು ಕ್ರಮವಾಗಿ 40 ಮತ್ತು 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಎನ್‌ಡಿಪಿಪಿ 25 ಕ್ಷೇತ್ರಗಳಲ್ಲಿ ಹಾಗೂ ಕಮಲ ಪಡೆ 12 ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ಪ್ರಮುಖ ವಿರೋಧ ಪಕ್ಷವಾದ ಎನ್‌ಪಿಎಫ್‌ 2018ರಲ್ಲಿ ಶೇ 39 ಮತ ಗಳಿಕೆಯೊಂದಿಗೆ 26 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಈ ಸಲ ಪಕ್ಷದ ಸ್ಥಾನ ಒಂದಂಕಿಗೆ ಇಳಿದಿದೆ. ಅಭ್ಯರ್ಥಿಗಳ ಕೊರತೆಯಿಂದಾಗಿ 22 ಕ್ಷೇತ್ರಗಳಲ್ಲಷ್ಟೇ ಸ್ಪರ್ಧಿಸಿದ್ದ ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದೆ. ಪ್ರಾದೇಶಿಕ ಪಕ್ಷಗಳು ಸಣ್ಣ ರಾಜ್ಯದಲ್ಲಿ ಛಾಪು ಮೂಡಿಸಿವೆ. ಎನ್‌ಸಿಪಿ ಏಳು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದರೆ, ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್) ಎರಡು ಕ್ಷೇತ್ರಗಳಲ್ಲಿ ಜಯಿಸಿದೆ. ಕೇಂದ್ರ ಸಚಿವ ರಾಮದಾಸ್ ಆಠವಳೆ ನೇತೃತ್ವದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿ) ಎರಡು ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ಪಕ್ಷ ಸ್ಥಾಪನೆಯಾದ 24 ವರ್ಷಗಳ ಬಳಿಕ ಮಹಾರಾಷ್ಟ್ರದ ಹೊರಗೆ ಖಾತೆ ತೆರೆದಿದೆ. ಪಕ್ಷವು ಎಂಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.

ನಾಗಾಲ್ಯಾಂಡ್‌: ಇಬ್ಬರು ಮಹಿಳೆಯರು ಶಾಸನಸಭೆಗೆ

ನಾಗಾಲ್ಯಾಂಡ್‌ನಲ್ಲಿ ಇಬ್ಬರು ಮಹಿಳೆಯರು ಮೊದಲ ಬಾರಿಗೆ ಶಾಸನಸಭೆಗೆ ಪ್ರವೇಶಿಸಿದ್ದಾರೆ. ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ದಾಖಲೆಯನ್ನು ಎನ್‌ಡಿಪಿಪಿಯ ಹೆಖಾನಿ ಜಖಾಲು ನಿರ್ಮಿಸಿದ್ದಾರೆ.

ದಿಮಾಪುರ–3 ಕ್ಷೇತ್ರದಲ್ಲಿ ಎನ್‌ಡಿಪಿಪಿ ಅಭ್ಯರ್ಥಿಯಾದ ಜಖಾಲು ಅವರು ಸಮೀಪದ ಪ್ರತಿಸ್ಪರ್ಧಿ ಲೋಕ ಜನಶಕ್ತಿ ಪಕ್ಷದ ಅಭ್ಯರ್ಥಿಯನ್ನು 1,536 ಮತಗಳ ಅಂತರದಿಂದ ಮಣಿಸಿದರು. ಪಶ್ಚಿಮ ಅಂಗಮಿ ಕ್ಷೇತ್ರದಲ್ಲಿ ಎನ್‌ಡಿಪಿಪಿಯ ಸಲ್ಹೌಟ್‌ ವೊನುಮೊ ಕ್ರೂಸೊ ಅವರು ಏಳು ಮತಗಳಿಂದ ಜಯ ಗಳಿಸಿದರು. ಈ ಸಲದ ಚುನಾವಣೆಯಲ್ಲಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು.



ಮೇಘಾಲಯ ಅತಂತ್ರ

12 ಪಕ್ಷಗಳು ಕಣದಲ್ಲಿದ್ದು ಬಹುಕೋನ ಸ್ಪರ್ಧೆಯ ಬೀಡಾಗಿದ್ದ ಮೇಘಾಲಯದಲ್ಲಿ ಈ ಸಲವೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ.

ಬುಡಕಟ್ಟು ಹಾಗೂ ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ಪುಟ್ಟ ರಾಜ್ಯದಲ್ಲಿ ಕಳೆದ ಬಾರಿ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ಬೆಂಬಲಿಸಿದ್ದ ಹಲವು ಪಕ್ಷಗಳು ಈ ಬಾರಿ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದಿದ್ದವು. ಕಾನ್ರಾಡ್ ಕೆ.ಸಂಗ್ಮಾ ನೇತೃತ್ವದ ಎನ್‌‍ಪಿಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಕಾನ್ರಾಡ್ ಕೆ. ಸಂಗ್ಮಾ ಅವರು ಸಣ್ಣಪುಟ್ಟ ಪಕ್ಷಗಳನ್ನು ಒಟ್ಟುಗೂಡಿಸಿ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ನೇತೃತ್ವದಲ್ಲಿ ಸರ್ಕಾರ ರಚಿಸಿದ್ದರು. ಬಿಜೆಪಿ, ಈ ಮೈತ್ರಿಕೂಟದ ಕಿರಿಯ ಪಾಲುದಾರ ಪಕ್ಷವಾಗಿತ್ತು. ಯುಡಿಎಫ್, ಪಿಡಿಎಫ್, ಎಚ್‌ಎಸ್‌ಪಿಡಿಪಿ ಶಾಸಕರು ಹಾಗೂ ಪಕ್ಷೇತರರು ಸಂಗ್ಮಾ ಸರ್ಕಾರವನ್ನು ಬೆಂಬಲಿಸಿದ್ದರು. ಈ ಸಲ ಮೈತ್ರಿ ಸರ್ಕಾರದ ರಚನೆಗೆ ಎನ್‌ಪಿಪಿ, ಬಿಜೆಪಿ ಮತ್ತಿತರ ಪಕ್ಷಗಳು ಮಾತುಕತೆ ಆರಂಭಿಸಿವೆ. ಮೇಘಾಲಯದಲ್ಲಿ 1976ರಿಂದ ಇಲ್ಲಿಯವರೆಗೆ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದಿಲ್ಲ.

ಕಳೆದ ಚುನಾವಣೆಯವರೆಗೂ ಕಾಂಗ್ರೆಸ್ ಇಲ್ಲಿ ಅತಿದೊಡ್ಡ (21 ಸ್ಥಾನ) ಪಕ್ಷವಾಗಿತ್ತು. ಕಳೆದ ಬಾರಿ ಅತಿಹೆಚ್ಚು (ಶೇ 29ರಷ್ಟು) ಮತಗಳನ್ನು ಗಳಿಸಿಯೂ ಪ್ರತಿಪಕ್ಷದಲ್ಲಿ ಕುಳಿತುಕೊಂಡಿದ್ದ ಕಾಂಗ್ರೆಸ್‌ ಈಗ ರಾಜ್ಯದಲ್ಲಿ ನಾಮಾವಶೇಷ ಆಗುವ ಹಂತಕ್ಕೆ ತಲುಪಿದೆ. ಎಲ್ಲ ಶಾಸಕರ ಪಕ್ಷಾಂತರದಿಂದ ನಲುಗಿದ್ದ ಪಕ್ಷವು ಕಷ್ಟಪಟ್ಟು ಎಲ್ಲ ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ಕಣಕ್ಕೆ ಇಳಿಸಿತ್ತು. ಐದು ಕಡೆಗಳಲ್ಲಷ್ಟೇ ಗೆದ್ದಿದೆ. ‘ಕೈ’ ಶಾಸಕರನ್ನು ಆಪರೇಷನ್‌ ಮಾಡಿದ್ದ ತೃಣಮೂಲ ಕಾಂಗ್ರೆಸ್‌ ಸಹ ಗಮನಾರ್ಹ ಸಾಧನೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT