ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಜೈಲು ವ್ಯವಸ್ಥೆಗೆ ಸುಪ್ರೀಂ ಕೋರ್ಟ್‌ ಒಲವು

Published 9 ಮೇ 2024, 16:01 IST
Last Updated 9 ಮೇ 2024, 16:01 IST
ಅಕ್ಷರ ಗಾತ್ರ

ನವದೆಹಲಿ: ಜೈಲುಗಳಲ್ಲಿ ಕೈದಿಗಳ ಸಂಖ್ಯೆಯು ಅತಿಯಾಗುತ್ತಿರುವ ಸಮಸ್ಯೆಗೆ ಪರಿಹಾರವಾಗಿ ಹಾಗೂ ಕೈದಿಗಳ ಪುನರ್ವಸತಿಯ ದೃಷ್ಟಿಯಿಂದ ಮುಕ್ತ ಜೈಲುಗಳನ್ನು ಸ್ಥಾಪಿಸುವುದು ಸೂಕ್ತವಾಗಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಅರೆ ಮುಕ್ತ ಅಥವಾ ಮುಕ್ತ ಜೈಲು ವ್ಯವಸ್ಥೆಗಳು, ಶಿಕ್ಷೆಗೆ ಗುರಿಯಾದವರಿಗೆ ಜೈಲಿನ ಆವರಣದಿಂದ ಹೊರಗಡೆ ಹಗಲು ಹೊತ್ತಿನಲ್ಲಿ ಕೆಲಸ ಮಾಡುವುದಕ್ಕೆ ಕೂಡ ಅವಕಾಶ ಕಲ್ಪಿಸುತ್ತವೆ. ಆ ಮೂಲಕ ಅವರಿಗೆ ಹಣ ಸಂ‍ಪಾದಿಸಲು ಅವಕಾಶ ಮಾಡಿಕೊಡುತ್ತವೆ. ಸಂಜೆ ಅವರು ಜೈಲಿಗೆ ಮರಳಬೇಕಾಗುತ್ತದೆ.

ಕೈದಿಗಳು ಸಮಾಜದಲ್ಲಿ ಬೆರೆಯುವಂತೆ ಆಗಲು ಹಾಗೂ ಅವರ ಮೇಲಿನ ಮಾನಸಿಕ ಒತ್ತಡವನ್ನು ತಗ್ಗಿಸಲು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಜೈಲುಗಳು ಹಾಗೂ ಕೈದಿಗಳಿಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರು ಇದ್ದ ವಿಭಾಗೀಯ ಪೀಠವು, ಮುಕ್ತ ಜೈಲುಗಳ ಅಸ್ತಿತ್ವವನ್ನು ದೇಶದಾದ್ಯಂತ ಹೆಚ್ಚಿಸುವ ಬಯಕೆ ತನಗೆ ಇರುವುದಾಗಿ ಹೇಳಿತು.

‘ಜೈಲುಗಳಲ್ಲಿ ಕೈದಿಗಳ ಸಂಖ್ಯೆಯು ವಿಪರೀತ ಆಗುತ್ತಿರುವ ಸಮಸ್ಯೆಗೆ ಒಂದು ಪರಿಹಾರ ಮುಕ್ತ ಜೈಲುಗಳನ್ನು ಸ್ಥಾಪಿಸುವುದು. ಈ ವ್ಯವಸ್ಥೆಯು ರಾಜಸ್ಥಾನದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ’ ಎಂದು ಪೀಠವು ಹೇಳಿದೆ. ಆದರೆ, ಜೈಲುಗಳ ಸುಧಾರಣೆಗೆ ಸಂಬಂಧಿಸಿದ ವಿಚಾರವನ್ನು ತಾನು ಆಲಿಸಲು ಮುಂದಾಗುವುದಿಲ್ಲ, ಅದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಬೇರೆ ಪೀಠಗಳು ಈಗಾಗಲೇ ವಿಚಾರಣೆಗೆ ಎತ್ತಿಕೊಂಡಿವೆ ಎಂಬುದನ್ನು ಪೀಠವು ಸ್ಪಷ್ಟಪಡಿಸಿತು.

ಮುಕ್ತ ಜೈಲು ವ್ಯವಸ್ಥೆಯ ಬಗ್ಗೆ ಎಲ್ಲ ರಾಜ್ಯಗಳಿಂದ ಪ್ರತಿಕ್ರಿಯೆ ಕೋರಲಾಗಿದೆ, 24 ರಾಜ್ಯಗಳು ಪ್ರತಿಕ್ರಿಯೆ ಸಲ್ಲಿಸಿವೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪರ ವಕೀಲರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT