ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ | ಪ್ಯಾಡ್‌ವುಮೆನ್‌ ಆಗಿ ಬದಲಾದ ಮಾಜಿ ಭಯೋತ್ಪಾದಕಿಯರು

Published 16 ಡಿಸೆಂಬರ್ 2023, 14:42 IST
Last Updated 16 ಡಿಸೆಂಬರ್ 2023, 14:42 IST
ಅಕ್ಷರ ಗಾತ್ರ

ಗುವಾಹಟಿ: ಒಂದು ಕಾಲದಲ್ಲಿ ಯುವಕರ ಕೈಯಲ್ಲಿ ಬಂದೂಕು ಕೊಟ್ಟು ಗುರಿ ಇಡುವುದನ್ನು ಹೇಳಿಕೊಡುತ್ತಿದ್ದ ಕೈಗಳು ಈಗ ಸ್ಯಾನಿಟರಿ ಪ್ಯಾಡ್‌ಗಳನ್ನು ಸಿದ್ಧಪಡಿಸುತ್ತಿವೆ. ಪ್ರತಿಭಟನೆ ನಡೆಸಲು ಪ್ರೇರೇಪಿಸುತ್ತಿದ್ದವರು ಈಗ ಅಕ್ಕಿ ಗಿರಣಿಯನ್ನು  ನಡೆಸುತ್ತಿದ್ದಾರೆ.

ಅಸ್ಸಾಂನ ಉದಲ್‌ಗುರಿ ಜಿಲ್ಲೆಯಲ್ಲಿ ಕೆಲ ಮಹಿಳೆಯರು ಉಗ್ರರು ಎಂಬ ಹಣೆಪಟ್ಟಿ ಹೊತ್ತು ಜೈಲು ಸೇರಿದ್ದರು. ಶರಣಾದ ಇವರು ಈಗ ಹಿಂದಿನ ಕೃತ್ಯಗಳಿಂದ ವಿಮುಖರಾಗಿದ್ದಾರೆ. ಪರಿವರ್ತನೆಯ ಹಾದಿ ತುಳಿದ ಈ ಮಹಿಳೆಯರು ಈಗ ಸ್ಯಾನಿಟರಿ ಪ್ಯಾಡ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅವು ಶೀಘ್ರದಲ್ಲಿ ವಾಣಿಜ್ಯ ಬಳಕೆಗೂ ಲಭ್ಯವಾಗಲಿವೆ ಎಂದು ಬೊಡೊಲ್ಯಾಂಡ್ ಪ್ರಾದೇಶಿಕ ಪ್ರಾಂತ್ಯ (ಬಿಟಿಆರ್) ಅಧಿಕಾರಿಗಳು ಹೇಳಿದ್ದಾರೆ.

‘ಶರಣಾಗತರಾದ ಉಗ್ರರಿಗೆ ಪುನರ್ವಸತಿ ಬಹಳಾ ಮುಖ್ಯ. ಅವರ ಆಸಕ್ತಿ ಹಾಗೂ ಪರಿಣತಿ ಗ್ರಹಿಸಿ, ಆ ದಿಕ್ಕಿನಲ್ಲಿ ಅವರನ್ನು ತರಬೇತುಗೊಳಿಸಿ, ಉತ್ತೇಜಿಸಲಾಗುತ್ತಿದೆ’ ಎಂದು ಬಿಟಿಆರ್‌ ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಪ್ರಮೋದ್ ಬೊರೊ ತಿಳಿಸಿದರು.

‘ಇವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರ್ಥಿಕ ನೆರವು ನೀಡುತ್ತಿವೆ. ಇದರೊಂದಿಗೆ ಅವರಿಗೆ ಉದ್ಯೋಗ ಕಂಡುಕೊಳ್ಳಲು ಬಿಟಿಆರ್ ಕೂಡಾ ನೆರವಾಗುತ್ತಿದೆ. ‘ಮಿಷನ್‌ ಬ್ಲಾಸಮ್ ಅಗೈನ್‌’ ಎಂಬ ಯೋಜನೆಯಡಿ ಅಕ್ಕಿ ಗಿರಣಿಯನ್ನು ಆರಂಭಿಸಲಾಗಿದೆ. ಸ್ಯಾನಿಟರಿ ಪ್ಯಾಡ್ ಸಿದ್ಧಪಡಿಸುವ ಘಟಕವನ್ನೂ ಸ್ಥಾಪಿಸಲಾಗಿದೆ. ಇವೆಲ್ಲವುಗಳಿಗೂ ಪ್ರತ್ಯೇಕ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.

‘ಇದೇ ರೀತಿ ಸುಮಾರು 30 ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿರುವ ಬಹುತೇಕರು ಶರಣಾಗತರಾದ ಉಗ್ರರು. ಇವುಗಳಲ್ಲಿ 8 ಸಹಕಾರಿಗಳಿಗೆ ಯೋಜನೆಗಳೂ ಮಂಜೂರಾಗಿವೆ. ಇವುಗಳಲ್ಲಿ ಅಕ್ಕಿ ಗಿರಣಿ, ಹೈನು ಉದ್ಯಮವೂ ಸೇರಿದೆ. ಒಂದು ಗುಂಪು ಸ್ಟಿವಿಯಾ (ಸಕ್ಕರೆ ಅಂಶ ರಹಿತ ಸಿಹಿ) ಸಂಸ್ಕರಣೆಯಂತ ಘಟಕವನ್ನೂ ಸ್ಥಾಪಿಸಿದೆ’ ಎಂದು ತಿಳಿಸಿದರು.

‘ಸ್ಯಾನಿಟರಿ ಪ್ಯಾಡ್ ಸಿದ್ಧಪಡಿಸುವ ಘಟಕಕ್ಕೆ ನೀತಿ ಆಯೋಗ ಯಂತ್ರಗಳನ್ನು ನೀಡಿದೆ. ಈಗಾಗಲೇ ಗುಂಪಿನ ಸದಸ್ಯರಿಗೆ ತರಬೇತಿ ನೀಡಲಾಗಿದೆ. ಪ್ಯಾಡ್‌ಗಳ ತಯಾರಿಕೆಯೂ ಆರಂಭಗೊಂಡಿದೆ’ ಎಂದು ಬೊರೊ ಹೇಳಿದರು.

‘ಇನ್ನು ಕೆಲವೇ ತಿಂಗಳಲ್ಲಿ ಮಾರಾಟ ಆರಂಭವಾಗಲಿದೆ. ಇವುಗಳು ರೊಡೋಮ್‌ (ಮೊಗ್ಗು) ಹೆಸರಿನಲ್ಲಿ ಮಾರಾಟವಾಗಲಿವೆ’ ಎಂದು ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೊಡೊಲ್ಯಾಂಡ್‌ನಿಂದ ಬೇರ್ಪಟ್ಟ ಸಂಘಟನೆಯ ವ್ಯಾರಿ ಎಂಬುವವರು ತಿಳಿಸಿದರು.

‘ಈ ಕಚೇರಿ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡಿವೆ. ಪ್ರದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಹಿಂಸೆಗೆ ಪೂರ್ಣವಿರಾಮ ಹಾಕಲು ಸಂಪೂರ್ಣ ಪ್ರಯತ್ನ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದೆನ್ನಲು ಹೆಮ್ಮೆಯಾಗುತ್ತಿದೆ. ಇಲ್ಲಿನ ಜನರು ಈಗ ಭಯಮುಕ್ತರಾಗಿ ಬದುಕುತ್ತಿದ್ದಾರೆ’ ಎಂದು ಬೊರೊ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT