ನವದೆಹಲಿ: ರಾಜ್ಯಗಳ ವಿಧಾನಸಭೆಗಳು ಹಾಗೂ ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಉದ್ದೇಶದ ‘ಒಂದು ದೇಶ– ಒಂದು ಚುನಾವಣೆ’ಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿಯನ್ನು ಶುಕ್ರವಾರ ರಚಿಸಿದೆ.

ಸಮಿತಿ ಸದಸ್ಯರ ಕುರಿತ ವಿವರಗಳು ಬಹಿರಂಗವಾಗಿಲ್ಲ. ಕೇಂದ್ರದ ಈ ನಡೆಯು ಅವಧಿಪೂರ್ಣಗೊಳ್ಳುವ ಮುನ್ನವೇ ಲೋಕಸಭಾ ಚುನಾವಣೆ ಘೋಷಿಸುವ ಸಾಧ್ಯತೆ ಕುರಿತ ಚರ್ಚೆಗೆ ಕಾರಣವಾಗಿದೆ.

ಸಮಿತಿ ರಚಿಸಿದ ಬೆನ್ನಲ್ಲೇ, ‘ಒಂದು ದೇಶ–ಒಂದು ಚುನಾವಣೆ’ ಕುರಿತು ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬಿಜೆಪಿ ನೇತೃತ್ವದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರದ ನಡೆಯನ್ನು ಟೀಕಿಸಿವೆ.

ಈ ನಡುವೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನವದೆಹಲಿಯಲ್ಲಿರುವ ಕೋವಿಂದ್ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಈ ವಿವರಗಳು ಬಹಿರಂಗವಾಗಿಲ್ಲ.

1967ರ ವರೆಗೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲಾಗುತ್ತಿತ್ತು. ಇದೇ ಮಾದರಿಯಲ್ಲಿ ಈಗ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಸಾಧ್ಯವೇ? ಈ ನಿಟ್ಟಿನಲ್ಲಿ ಅನುಸರಿಸಬೇಕಿರುವ ವಿಧಾನ ಕಾರ್ಯಸಾಧುವೇ ಎಂಬ ಬಗ್ಗೆ ಕೋವಿಂದ್ ಅವರು ಪರಿಶೀಲಿಸುವರು ಎಂದು ಮೂಲಗಳು ಹೇಳಿವೆ.

ಈ ವಿಷಯ ಕುರಿತು ಅವರು ವಿವಿಧ ರಾಜಕೀಯ ಪಕ್ಷಗಳು ಹಾಗೂ ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ ಎಂದು ಇವೇ ಮೂಲಗಳು ಹೇಳಿವೆ.

ಸೆಪ್ಟೆಂಬರ್ 18ರಿಂದ 22ರ ವರೆಗೆ ಸಂಸತ್ನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ ಮಾರನೆ ದಿನವೇ ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಮಿತಿ ರಚಿಸಲಾಗಿದೆ. ವಿಶೇಷ ಅಧಿವೇಶನದ ಕಾರ್ಯಸೂಚಿ ಇನ್ನೂ ಗೌಪ್ಯವಾಗಿಯೇ ಇದೆ.

2014ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಬೇಕು ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

ನಿರಂತರವಾಗಿ ಚುನಾವಣೆಗಳು ನಡೆಯುವುದರಿಂದ ಅಪಾರ ಹಣ ವ್ಯಯವಾಗಿ, ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರಿಂದ ಈ ಎಲ್ಲ ತೊಂದರೆ ತಪ್ಪಿಸಬಹುದು ಎಂಬ ಕಾರಣಗಳನ್ನು ಮೋದಿ ನೀಡುತ್ತಿದ್ದಾರೆ.

2017ರಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಕೋವಿಂದ್ ಅವರು ಕೂಡ ಮೋದಿ ಅವರ ನಿಲುವನ್ನು ಬೆಂಬಲಿಸಿದ್ದರು. ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಆಗುವ ತೊಂದರೆಗಳ ಬಗ್ಗೆ 2018ರಲ್ಲಿ ಸಂಸತ್ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ವೇಳೆ ಪ್ರಸ್ತಾಪಿಸಿದ್ದರು.

ಏಕಕಾಲಕ್ಕೆ ಚುನಾವಣೆ: 5 ತಿದ್ದುಪಡಿಗಳು ಅಗತ್ಯ

‘ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದಕ್ಕಾಗಿ ಸಂವಿಧಾನಕ್ಕೆ 5 ತಿದ್ದುಪಡಿಗಳನ್ನು ತರಬೇಕು. ಹೆಚ್ಚುವರಿಯಾಗಿ ಬೃಹತ್ ಸಂಖ್ಯೆಯ ಇವಿಎಂಗಳು ವಿವಿಪ್ಯಾಟ್ ಯಂತ್ರಗಳು ಅಗತ್ಯ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಬೇಕು’ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಸಂವಿಧಾನದ 83ನೇ ವಿಧಿ (ಸಂಸತ್ನ ಅವಧಿಗೆ ಸಂಬಂಧಿಸಿದ್ದು) 85ನೇ ವಿಧಿ (ರಾಷ್ಟ್ರಪತಿಯಿಂದ ಲೋಕಸಭೆ ವಿಸರ್ಜನೆ) 172ನೇ ವಿಧಿ (ರಾಜ್ಯಗಳ ಅವಧಿಗೆ ಸಂಬಂಧಿಸಿದ್ದು) 174ನೇ ವಿಧಿ (ವಿಧಾನಸಭೆಗಳ ವಿಸರ್ಜನೆ) ಹಾಗೂ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದಕ್ಕೆ ಸಂಬಂಧಿಸಿದ 356ನೇ ವಿಧಿಗೆ ತಿದ್ದುಪಡಿ ಅಗತ್ಯ’ ಎಂದು ತಿಳಿಸಿದ್ದಾರೆ.

‘ಈ ವಿಷಯಕ್ಕೆ ಸಂಬಂಧಿಸಿ ಸಂಸದೀಯ ಸಮಿತಿಯು ಚುನಾವಣಾ ಆಯೋಗ ಸೇರಿದಂತೆ ವಿವಿಧ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿದ್ದು ಹಲವು ಶಿಫಾರಸುಗಳನ್ನು ಮಾಡಿದೆ’ ಎಂದೂ ತಿಳಿಸಿದ್ದಾರೆ. ‘ಈ ವಿಷಯ ಈಗ ಕಾನೂನು ಆಯೋಗದ ಮುಂದಿದ್ದು ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಮಾರ್ಗೋಪಾಯಗಳು ಹಾಗೂ ಚೌಕಟ್ಟು ಕುರಿತು ಆಯೋಗ ಪರಿಶೀಲನೆ ನಡೆಸಲಿದೆ’ ಎಂದು ಹೇಳಿದ್ದಾರೆ. ‘ಇವಿಎಂಗಳ ಬಳಕೆ ಅವಧಿ 15 ವರ್ಷಗಳಿರುವ ಕಾರಣ ಸಾಕಷ್ಟು ಸಂಖ್ಯೆಯ ಇವಿಎಂಗಳು ಬೇಕಾಗುತ್ತವೆ. ಹೆಚ್ಚುವರಿ ಚುನಾವಣೆ ಸಿಬ್ಬಂದಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಬೇಕಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿರೋಧ ಪಕ್ಷಗಳಿಂದ ಖಂಡನೆ

ಮುಂಬೈ/ಚೆನ್ನೈ: ‘ಒಂದು ದೇಶ– ಒಂದು ಚುನಾವಣೆ’ ಕಾರ್ಯಸಾಧ್ಯತೆ ಪರಿಶೀಲನೆಗೆ ಸಮಿತಿ ರಚಿಸಿರುವ ಕೇಂದ್ರದ ನಡೆಯನ್ನು ವಿರೋಧ ಪಕ್ಷಗಳು ಖಂಡಿಸಿವೆ. ‘ಕೇಂದ್ರ ಸರ್ಕಾರದ ಈ ನಡೆ ದೇಶದ ಒಕ್ಕೂಟ ವ್ಯವಸ್ಥೆಗೆ ಅಪಾಯ ಒಡ್ಡುವುದು’ ಎಂದು ಆರೋಪಿಸಿದ್ದಾರೆ. ‘ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ. ಕೇಂದ್ರ ಸರ್ಕಾರ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಜನರನ್ನು ಮೋಸಗೊಳಿಸಲು ಇನ್ನು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ‘ಸರ್ವಾಧಿಕಾರ ಧೋರಣೆಯ ಈ ಸರ್ಕಾರದ ಪತನ ಖಚಿತ. ಕ್ಷಣಗಣನೆ ಆರಂಭವಾಗಿದೆ’ ಎಂದೂ ಹೇಳಿದ್ದಾರೆ. ಕೇಂದ್ರದ ನಡೆಯನ್ನು ತಮಿಳುನಾಡು ಆಡಳಿತಾರೂಢ ಪಕ್ಷ ಡಿಎಂಕೆ ವಿರೋಧಿಸಿದೆ. ‘ಒಂದು ದೇಶ– ಒಂದು ಚುನಾವಣೆಯು ದೇಶದ ಹಿತಾಸಕ್ತಿಗೆ ವಿರುದ್ಧವಾದುದು’ ಎಂದು ಡಿಎಂಕೆ ವಕ್ತಾರ ಶರವಣನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಿವಸೇನಾ (ಶಿಂದೆ ಬಣ) ಎಐಎಡಿಎಂಕೆ ಎಸ್ಎಡಿ ಪಕ್ಷಗಳು ಬೆಂಬಲ ನೀಡಿದ್ದರೆ ಇದು ದೇಶದ ಜನರ ಗಮನ ಬೇರೆಡೆ ಸೆಳೆಯುವ ವ್ಯರ್ಥ ಕಸರತ್ತು ಎಂದು ಜೆಡಿಯು ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.