ನವದೆಹಲಿ (ಪಿಟಿಐ): ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಮನೀಷ್ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನಿರಾಕರಿಸಿದೆ.
ಆದರೆ, ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು, ಅನಾರೋಗ್ಯದಿಂದ ಬಳಲುತ್ತಿರುವ ಸಿಸೋಡಿಯಾ ಅವರ ಪತ್ನಿಯನ್ನು ಭೇಟಿ ಮಾಡಲು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಒಂದು ದಿನದ ಮಟ್ಟಿಗೆ ಅವಕಾಶವನ್ನು ನೀಡಿದ್ದಾರೆ.
ದೆಹಲಿಯ ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಸಿಸೋಡಿಯಾ ಅವರು ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ನೋಡಿಕೊಳ್ಳಲು ತಾವೊಬ್ಬರೇ ಇರುವ ಕಾರಣ, ಆರು ವಾರಗಳ ತಾತ್ಕಾಲಿಕ ಅವಧಿಗೆ ಜಾಮೀನು ಕೋರಿದ್ದರು. ಈ ಪ್ರಕರಣದಲ್ಲಿ ಅವರು ಸಲ್ಲಿಸಿರುವ ನಿಯಮಿತ ಜಾಮೀನು ಅರ್ಜಿಯು ಹೈಕೋರ್ಟ್‌ನಲ್ಲಿ ಇನ್ನೂ ವಿಚಾರಣೆಗೆ ಬಾಕಿ ಉಳಿದಿದೆ.
ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮಾರ್ಚ್ 9ರಂದು ಬಂಧಿಸಿತ್ತು. ಪ್ರಸ್ತುತ ಅವರು, ಇ.ಡಿ ದಾಖಲಿಸಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿದ್ದಾರೆ.
‘ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಸಿಸೋಡಿಯಾ ಅವರಿಗೆ ಮಧ್ಯಂತರ ಜಾಮೀನು ನೀಡಬಾರದು’ ಎಂದು ಇ.ಡಿ ಹೇಳಿದೆ.
‘ಸಿಸೋಡಿಯಾ ಅವರ ಪತ್ನಿಯ ಆರೋಗ್ಯವು ಕಳೆದ 20 ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ’ ಎಂದು ಇ.ಡಿ ಪರ ವಕೀಲರು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದಾರೆ.
2021ರ ನ. 17ರಂದು ದೆಹಲಿ ಸರ್ಕಾರವು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ, ಭ್ರಷ್ಟಾಚಾರದ ಆರೋಪದ ಕಾರಣ 2022ರ ಸೆಪ್ಟೆಂಬರ್‌ನಲ್ಲಿ ಈ ನೀತಿಯನ್ನು ರದ್ದುಗೊಳಿಸಿತ್ತು.
ಅಬಕಾರಿ ನೀತಿ ಹಗರಣವನ್ನು ಸಿಬಿಐ ಕೂಡಾ ತನಿಖೆ ನಡೆಸುತ್ತಿದ್ದು, ಮೇ 30ರಂದು ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಸಿಸೋಡಿಯಾ ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಅವರ ವಿರುದ್ಧದ ಆರೋಪಗಳು ತುಂಬಾ ಗಂಭೀರ ಸ್ವರೂಪದ್ದಾಗಿವೆ ಎಂದು ಸಿಬಿಐ ಪರ ವಕೀಲರು ಹೇಳಿದ್ದರು.
ಹಾಗಾಗಿ, ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಜುಲೈಗೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.