ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಡ್ಗೀಳ್‌, ಕಸ್ತೂರಿರಂಗನ್ ವರದಿಗಳು ವಾಸ್ತವಿಕವಾಗಿಲ್ಲ: ಪಿಣರಾಯಿ

ವಯನಾಡ್‌ ಭೂಕುಸಿತ: ತಜ್ಞರ ಸಮಿತಿಗಳೂ ವಾಸ್ತವ ಸಂಗತಿಗಳನ್ನು ಪರಿಗಣಿಸಿಲ್ಲ
Published : 1 ಸೆಪ್ಟೆಂಬರ್ 2024, 13:54 IST
Last Updated : 1 ಸೆಪ್ಟೆಂಬರ್ 2024, 13:54 IST
ಫಾಲೋ ಮಾಡಿ
Comments

ತಿರುವನಂತಪುರ: ‘ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿ, ತಜ್ಞರಾದ ಮಾಧವ ಗಾಡ್ಗೀಳ್‌ ಮತ್ತು ಕೆ.ಕಸ್ತೂರಿರಂಗನ್‌ ನೇತೃತ್ವದ ಸಮಿತಿಗಳು ನೀಡಿರುವ ಶಿಫಾರಸುಗಳು ವಾಸ್ತವಿಕವಾಗಿಲ್ಲ. ಹೀಗಾಗಿ ವಯನಾಡ್ ಭೂಕುಸಿತಕ್ಕೆ ಸಂಬಂಧಿಸಿ ರಾಜ್ಯವು ಕೇಂದ್ರದಿಂದ ಉತ್ತಮ ಪರಿಹಾರ ನಿರೀಕ್ಷಿಸುತ್ತದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತಗಳಿಗೆ ಸಂಬಂಧಿಸಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ಪಶ್ಚಿಮ ಘಟ್ಟಗಳ ಕುರಿತು ವರದಿ ನೀಡುವ ಸಂದರ್ಭದಲ್ಲಿ ಈ ತಜ್ಞರ ನೇತೃತ್ವದ ಸಮಿತಿಗಳು, ರಾಜ್ಯದಲ್ಲಿನ ಸಾಮಾಜಿಕ ನಿರೀಕ್ಷೆಗಳು ಹಾಗೂ ವಾಸ್ತವ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದಿದ್ದಾರೆ.

‘ಈ ಎರಡು ಸಮಿತಿಗಳನ್ನು ನೇಮಕ ಮಾಡಿದ ಸಚಿವಾಲಯಗಳು/ಇಲಾಖೆಗಳೇ ಅವುಗಳು ಸಲ್ಲಿಸಿದ್ದ ವರದಿಗಳನ್ನು ಅಂಗೀಕರಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

‘ಕೆಲವರು ಶತಮಾನಗಳಿಂದಲೂ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರನ್ನು ಸಹ ಈ ಸಮಿತಿಗಳು ಪರಿಗಣನೆಗೆ ತೆಗೆದುಕೊಂಡಿಲ್ಲ. ಪ್ಲಾಂಟೇಷನ್‌ಗಳ ಮಾಲೀಕರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಅಥವಾ ಗಣಿಗಾರಿಕೆ ನಡೆಸುತ್ತಿರುವ ಶ್ರೀಮಂತರ ಜೊತೆ ಸಣ್ಣ ಹಾಗೂ ಅತಿಸಣ್ಣ ರೈತರನ್ನು ಹೋಲಿಕೆ ಮಾಡಲಾಗದು’ ಎಂದಿದ್ದಾರೆ.

‘ಪರಿಸರ ಸೂಕ್ಷ್ಮ ಪ್ರದೇಶಗಳ (ಇಎಸ್‌ಎ) ಕುರಿತು ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಈ ಕುರಿತು ಸಮಗ್ರ ಅಧ್ಯಯನ ನಡೆಸದೆ, ಈ ವರದಿಗಳನ್ನು ಆಧಾರವಾಗಿಟ್ಟುಕೊಂಡು ಅವಸರದಲ್ಲಿ ನಿಲುವು ತೆಗೆದುಕೊಳ್ಳುವ ಯಾವುದೇ ಅಪೇಕ್ಷೆ ನನ್ನ ಸರ್ಕಾರಕ್ಕೆ ಇಲ್ಲ’ ಎಂದು ಹೇಳಿದ್ದಾರೆ.

‘₹2 ಸಾವಿರ ಕೋಟಿ ಪರಿಹಾರಕ್ಕೆ ಬೇಡಿಕೆ’

ವಯನಾಡ್‌ನಲ್ಲಿ ಇತ್ತೀಚೆಗೆ ಹಿಂದೆಂದೂ ಸಂಭವಿಸದಷ್ಟು ಪ್ರಮಾಣದ ಹಾನಿ ಉಂಟಾಗಿದೆ. ಇದಕ್ಕಾಗಿ ₹ 2 ಸಾವಿರ ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಲಾಗಿದ್ದು, ಕೇಂದ್ರ ಸರ್ಕಾರ  ಉತ್ತಮ ನೆರವು ನೀಡುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಈ ಕುರಿತು ಮನವಿ ಸಲ್ಲಿಸಲಾಗಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರದ ತಂಡವೊಂದು ರಾಜ್ಯಕ್ಕೆ ಶೀಘ್ರವೇ ಭೇಟಿ ನೀಡಲಿದೆ. ತಂಡವು ಹಾನಿ ಕುರಿತು ವರದಿ ಸಲ್ಲಿಸಿದ ನಂತರ, ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ‘ವಯನಾಡ್‌ನಲ್ಲಿನ ಭೂಕುಸಿತವನ್ನು ರಾಷ್ಟ್ರೀಯ ಅಥವಾ ತೀವ್ರ ಸ್ವರೂಪದ ಪ್ರಾಕೃತಿಕ ವಿಕೋಪ ಎಂಬುದಾಗಿ ಘೋಷಿಸಬೇಕು. ಅಂದಾಗ ಮಾತ್ರ ಎಲ್ಲ ಸಂಸದರು ತಲಾ ₹ 1 ಕೋಟಿ ಕೇರಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಅವಕಾಶ ಸಿಗುತ್ತದೆ. ಇಲ್ಲದಿದ್ದರೆ, ಸ್ಥಳೀಯ ಸಂಸದರು ಮಾತ್ರ ನೆರವು ನೀಡಬೇಕಾಗುತ್ತದೆ’ ಎಂದು ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT