ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಸ್ಯಮೂಲ ಚರ್ಮ’ ಅಭಿವೃದ್ಧಿ: ಸಿಎಸ್‌ಐಆರ್‌ ವಿಜ್ಞಾನಿಗಳ ಪ್ರಯೋಗ ಯಶಸ್ವಿ

Published 2 ಅಕ್ಟೋಬರ್ 2023, 16:42 IST
Last Updated 2 ಅಕ್ಟೋಬರ್ 2023, 16:42 IST
ಅಕ್ಷರ ಗಾತ್ರ

ನವದೆಹಲಿ: ಗಿಡಗಳಿಂದ ತಯಾರಿಸಿದ ಲ್ಯಾಪ್‌ಟಾಪ್‌ ಬ್ಯಾಗ್‌ಗಳು, ವಾಲೆಟ್‌ಗಳು, ಕೈಚೀಲಗಳು ಮತ್ತು ಚಪ್ಪಲಿಗಳು ಚರ್ಮದ ಉತ್ಪನ್ನಗಳನ್ನಂತೆ ಮಿರಿ–ಮಿರಿ ಮಿಂಚುತ್ತವೆಯೇ? ನಿಜವಾದ ಚರ್ಮ ಮತ್ತು ಸಿಂಥೆಟಿಕ್‌ ಚರ್ಮವನ್ನೇ ಹೋಲುವ ಹಾಗೂ ಅಂತಹ ಅನುಭವವನ್ನೇ ನೀಡುವ ‘ಸಸ್ಯಮೂಲ ಚರ್ಮ’ವನ್ನು ಸಿಎಸ್‌ಐಆರ್‌ ಅಭಿವೃದ್ಧಿಪಡಿಸಿದೆ. ಸಿಎಸ್‌ಐಆರ್‌ನ ತಿರುವನಂತಪುರದ ಪ್ರಯೋಗಾಲಯದಲ್ಲಿ ಅಂತಹ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ.

ತಿರುವನಂತಪುರದ ‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್ ಇಂಟರ್‌ಡಿಸಿಪ್ಲಿನರಿ ಸೈನ್ಸ್‌ ಆ್ಯಂಡ್ ಟೆಕ್ನಾಲಜಿ–ಎನ್‌ಐಐಎಸ್‌ಟಿ’ ‘ಸಸ್ಯಮೂಲ ಚರ್ಮ’ದ ತಂತ್ರಜ್ಞಾನವನ್ನು ಪುಣೆ ಮೂಲದ ಕಂಪನಿಯೊಂದಕ್ಕೆ ವರ್ಗಾವಣೆ ಮಾಡಿದೆ. ಜತೆಗೆ ಈ ಸಂಬಂಧ ಬೌದ್ಧಿಕ ಹಕ್ಕುಸ್ವಾಮ್ಯ ಪಡೆಯಲು ಎರಡು ಅರ್ಜಿಗಳನ್ನು ಸಲ್ಲಿಸಿದೆ. ‘ಸಸ್ಯಮೂಲ ಚರ್ಮ’ವನ್ನು ದೆಹಲಿಯ ಭಾರತ ಮಂಟಪದಲ್ಲಿ ನಡೆದಿದ್ದ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಕೃಷಿ ತ್ಯಾಜ್ಯ, ಮಾವು, ಪಪ್ಪಾಯ, ಕಳ್ಳಿ, ಕಾಫಿ, ಸೇಬು, ಅನನಾಸು, ಲಾವಂಚಾ, ಭತ್ತದ ಹುಲ್ಲು ಮತ್ತು ಕೆಲವು ಜೊಂಡು ಸಸ್ಯಗಳಿಂದ ನಾರನ್ನು ತೆಗೆದು ಸಂಸ್ಕರಿಸಬಹುದು. ಆ ನಾರನ್ನು ಪರಸ್ಪರ ಜೋಡಿಸುವ ಮೂಲಕ ನಾರಿನ ಹಾಳೆಗಳನ್ನು ತಯಾರಿಸಲಾಗುತ್ತದೆ. ಆ ಹಾಳೆಗಳನ್ನು ಅತಿಉಷ್ಣತೆಯಲ್ಲಿ ಬಿಸಿ ಮಾಡಿದಾಗ ‘ಸಸ್ಯಮೂಲ ಚರ್ಮ’ ಸಿದ್ಧವಾಗುತ್ತದೆ. ನಾರನ್ನು ಪರಸ್ಪರ ಜೋಡಿಸುವ ವಿಧಾನ ಮತ್ತು ಅದಕ್ಕೆ ಬಳಸುವ ವಸ್ತುಗಳ ಸಂಬಂಧ ಒಂದು ಬೌದ್ಧಿಕ ಹಕ್ಕುಸ್ವಾಮ್ಯ ಅರ್ಜಿಯನ್ನು ಸಲ್ಲಿಸಲಾಗಿದೆ. ನಾರಿನ ಹಾಳೆಗಳನ್ನು ಬಿಸಿಮಾಡುವ ಉಷ್ಣಸಾಧನಕ್ಕೆ ಮತ್ತೊಂದು ಬೌದ್ಧಿಕ ಹಕ್ಕುಸ್ವಾಮ್ಯ ಅರ್ಜಿಯನ್ನು ಸಲ್ಲಿಸಲಾಗಿದೆ.

ಸಸ್ಯಮೂಲ ಚರ್ಮವು ಹಿಗ್ಗುವ ಗುಣ ಹೊಂದಿದೆ. ಜತೆಗೆ ಇದು ನೀರು, ಅತಿಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಚರ್ಮ ಮತ್ತು ಸಿಂಥೆಟಿಕ್‌ ಚರ್ಮದಂತೆಯೇ ಕಾಣುತ್ತದೆ ಎಂದು ಎನ್‌ಐಐಎಸ್‌ಟಿ ನಿರ್ದೇಶಕ ಸಿ.ರಾಮಕೃಷ್ಣನ್ ಹೇಳಿದ್ದಾರೆ.

ಇದು ಚರ್ಮ ಮತ್ತು ಸಿಂಥೆಟಿಕ್‌ ಚರ್ಮಕ್ಕಿಂತ ಶೇ 50ರಷ್ಟು ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ. ಸಸ್ಯಮೂಲವಾದ್ದರಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ. ಚರ್ಮ ಮತ್ತು ಸಿಂಥೆಟಿಕ್ ಚರ್ಮದ ಸಂಸ್ಕರಣೆ ಮತ್ತು ತಯಾರಿಕೆಯಲ್ಲಿ ರಾಸಾಯನಿಕ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಚರ್ಮವನ್ನು ಹದ ಮಾಡುವಲ್ಲಿ ನೀರನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಸಸ್ಯಮೂಲ ಚರ್ಮವು ಇವೆಲ್ಲವನ್ನೂ ತಪ್ಪಿಸುತ್ತದೆ ಎಂದು ಎನ್‌ಐಐಎಸ್‌ಟಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT