ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ರೈತ ಮುಖಂಡರು: ನಾಳೆಯಿಂದ ದೆಹಲಿ ಚಲೋ ಪುನರಾರಂಭ

Published 19 ಫೆಬ್ರುವರಿ 2024, 20:00 IST
Last Updated 20 ಫೆಬ್ರುವರಿ 2024, 2:34 IST
ಅಕ್ಷರ ಗಾತ್ರ

ಚಂಡೀಗಢ: ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರದ ಸಂಸ್ಥೆಗಳ ಮೂಲಕ ಐದು ವರ್ಷಗಳವರೆಗೆ ಖರೀದಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತ ಮುಖಂಡರು ತಿರಸ್ಕರಿಸಿದ್ದಾರೆ. ಅಲ್ಲದೆ, ರಾಷ್ಟ್ರ ರಾಜಧಾನಿ ದೆಹಲಿಯ ಕಡೆ ಬುಧವಾರ ತಾವು ಸಾಗುವುದಾಗಿ ಹೇಳಿದ್ದಾರೆ.

‘ನಮ್ಮ ಸಮಸ್ಯೆಗಳನ್ನು ಸರ್ಕಾರವು ಬಗೆಹರಿಸಬೇಕು. ಅದು ಸಾಧ್ಯವಾಗದಿದ್ದರೆ, ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ನಮಗೆ ದೆಹಲಿಗೆ ಬಂದು ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ’ ಎಂದು ಕಿಸಾನ್ ಮಜ್ದೂರ್ ಮೋರ್ಚಾ ನಾಯಕ ಸರವಣ್ ಸಿಂಗ್ ಪಂಡೇರ್ ಅವರು ಶಂಭು ಗಡಿಯಲ್ಲಿ ಸುದ್ದಿಗಾರರ ಬಳಿ ಹೇಳಿದರು.

ರೈತ ನಾಯಕರ ಜೊತೆ ಕೇಂದ್ರದ ಮೂವರು ಸಚಿವರು ಭಾನುವಾರ ಸಭೆ ನಡೆಸಿದ್ದರು. ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ರೈತರಿಂದ ಐದು ವರ್ಷಗಳವರೆಗೆ ಕನಿಷ್ಠ ಬೆಂಬಲ ಬೆಲೆಗೆ ಖರೀದಿ ಮಾಡಲಾಗುವುದು, ಈ ಖರೀದಿಯು ಸರ್ಕಾರದ ಏಜೆನ್ಸಿಗಳ ಮೂಲಕ ನಡೆಯುತ್ತದೆ ಹಾಗೂ ಖರೀದಿ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂಬ ಪ್ರಸ್ತಾವವನ್ನು ಕೇಂದ್ರವು ರೈತರ ಮುಂದೆ ಇರಿಸಿತ್ತು.

2020–21ರಲ್ಲಿ ನಡೆದ ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಇರುವ ಶಿಫಾರಸಿನ ಅನುಷ್ಠಾನದ ಹೊರತಾಗಿ ಬೇರೆ ಯಾವ ಪ್ರಸ್ತಾವವನ್ನೂ ತಾನು ಒಪ್ಪುವುದಿಲ್ಲ ಎಂದು ಅದು ಹೇಳಿತ್ತು.

ಕಿಸಾನ್ ಮಜ್ದೂರ್ ಸಂಘದ ಜೊತೆ ಎಸ್‌ಕೆಎಂ (ರಾಜಕೀಯೇತರ) ಕೂಡ ‘ದೆಹಲಿ ಚಲೋ’ ಪ್ರತಿಭಟನೆಯ ನೇತೃತ್ವ ವಹಿಸಿದೆ. ‘ನಮ್ಮ ಎರಡು ಸಂಘಟನೆಗಳ ಮುಖಂಡರು ಚರ್ಚಿಸಿದ ನಂತರ, ಕೇಂದ್ರದ ಪ್ರಸ್ತಾವನೆಯು ರೈತರ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ತೀರ್ಮಾನಿಸಲಾಯಿತು. ಪ್ರಸ್ತಾವನೆಯನ್ನು ನಾವು ತಿರಸ್ಕರಿಸುತ್ತಿದ್ದೇವೆ’ ಎಂದು ಎಸ್‌ಕೆಎಂ (ರಾಜಕೀಯೇತರ) ನಾಯಕ ಜಗಜಿತ್ ಸಿಂಗ್ ಡಲ್ಲೆವಾಲ್‌ ಸೋಮವಾರ ಸಂಜೆ ತಿಳಿಸಿದರು.

‘ನಾವು ಬುಧವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಕಡೆ ಶಾಂತಿಯುತವಾಗಿ ಸಾಗಲಿದ್ದೇವೆ’ ಎಂದು ಪಂಡೇರ್ ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ದ್ವಿದಳ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವ ಖಾತರಿಯನ್ನು ನೀಡಿದಲ್ಲಿ ಕೇಂದ್ರದ ಮೇಲೆ ಹೆಚ್ಚುವರಿಯಾಗಿ ₹1.50 ಲಕ್ಷ ಕೋಟಿಯ ಹೊರೆ ಉಂಟಾಗುತ್ತದೆ ಎಂದು ನಾಲ್ಕನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಸಚಿವರು ಹೇಳಿದರು ಎಂದು ಡಲ್ಲೆವಾಲ್ ವಿವರಿಸಿದರು. 

ಆದರೆ ಕೃಷಿ ತಜ್ಞರೊಬ್ಬರ ಲೆಕ್ಕಾಚಾರದ ಪ್ರಕಾರ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸಿದರೆ ಬೇಕಾಗುವ ಮೊತ್ತ ₹1.75 ಲಕ್ಷ ಕೋಟಿ. ಕೇಂದ್ರ ಸರ್ಕಾರವು ₹1.75 ಲಕ್ಷ ಕೋಟಿ ಮೌಲ್ಯದ ತಾಳೆ ಎಣ್ಣೆ ಖರೀದಿಸುತ್ತಿದೆ. ಹಲವರಲ್ಲಿ ಈ ಎಣ್ಣೆಯು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಹೀಗಿದ್ದರೂ ಇದನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದೇ ಮೊತ್ತವನ್ನು, ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸಿ ಇತರ ಬೆಳೆಗಳನ್ನು ಬೆಳೆಯಲು ವಿನಿಯೋಗಿಸಿದರೆ ಕೇಂದ್ರದ ಮೇಲೆ ಯಾವ ಹೊರೆಯೂ ಉಂಟಾಗುವುದಿಲ್ಲ ಎಂದು ಡಲ್ಲೆವಾಲ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT