ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ಕಿರುಕುಳ: ಮಲಯಾಳ ಚಿತ್ರರಂಗದ ಕರಾಳ ಮುಖ ಬಹಿರಂಗಪಡಿಸಿದ ವರದಿ

Published 19 ಆಗಸ್ಟ್ 2024, 16:12 IST
Last Updated 19 ಆಗಸ್ಟ್ 2024, 16:12 IST
ಅಕ್ಷರ ಗಾತ್ರ

ತಿರುವನಂತಪುರ: ನಟನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಟಿಯೊಬ್ಬರಿಗೆ ಮರುದಿನ ಅದೇ ನಟನೊಂದಿಗೆ ಪತಿ–ಪತ್ನಿಯಾಗಿ ನಟಿಸಬೇಕಾಯಿತು. ಕೋಪ ಮತ್ತು ದ್ವೇಷವು ಆಕೆಯ ಮುಖದಲ್ಲಿ ಪ್ರತಿಫಲಿಸುತ್ತಿದ್ದ ಕಾರಣ ಆ ದೃಶ್ಯಕ್ಕೆ ಒಪ್ಪುವ ರೀತಿಯಲ್ಲಿ ನಟಿಸಲು ಆಕೆಗೆ ಸಾಧ್ಯವಾಗಲಿಲ್ಲ. ಒಂದು ಶಾಟ್‌ಗಾಗಿ 17 ಸಲ ರಿಟೇಕ್‌ ಮಾಡಬೇಕಾಯಿತು. ಕೊನೆಗೆ ಆ ನಟಿ, ನಿರ್ದೇಶಕರ ಟೀಕೆಗೂ ಗುರಿಯಾದರು.

– ಮಲಯಾಳ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹೇಮಾ ಸಮಿತಿಯ ವರದಿಯಲ್ಲಿ ದಾಖಲಾಗಿರುವ ಅನೇಕ ಘೋರ ಅನುಭವಗಳಲ್ಲಿ ಇದೂ ಒಂದು.

ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ಕೇರಳ ಸರ್ಕಾರ 2019ರಲ್ಲಿ ನೇಮಿಸಿದ್ದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಸುಮಾರು ಐದು ವರ್ಷಗಳ ಬಳಿಕ ಆರ್‌ಟಿಐ ಕಾಯ್ದೆಯಡಿ ಮಾಧ್ಯಮಗಳಿಗೆ ಲಭ್ಯವಾಗಿದೆ.

ಸಮಸ್ಯೆಯ ವ್ಯಾಪಕ ಸ್ವರೂಪವನ್ನು ವರದಿಯು ಬಹಿರಂಗಪಡಿಸಿದ್ದು, ಚಿತ್ರೋದ್ಯಮದಲ್ಲಿ ಮಹಿಳಾ ವೃತ್ತಿಪರರ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ರಾಜಿ’ ಮತ್ತು ‘ಹೊಂದಾಣಿಕೆ’ ಎಂಬ ಎರಡು ಪದಗಳು ಮಲಯಾಳ ಚಿತ್ರರಂಗದಲ್ಲಿ ಮಹಿಳೆಯರಿಗೆ ಬಹಳ ಪರಿಚಿತವಾಗಿವೆ. ‌ಸಿನಿಮಾದಲ್ಲಿ ನಟಿಸುವ ಅಥವಾ ಬೇರೆ ಯಾವುದೇ ಕೆಲಸ ಮಾಡುವ ಪ್ರಸ್ತಾವವು ನಟಿಯರಿಗೆ ಲೈಂಗಿಕತೆಯ ಬೇಡಿಕೆಯೊಂದಿಗೆ ಬರುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಮಹಿಳೆಗೆ ಹೊಂದಾಣಿಕೆ ಮತ್ತು ರಾಜಿ ಮಾಡಿಕೊಳ್ಳಲು ಕೇಳಲಾಗುತ್ತದೆ, ಆ ಮೂಲಕ ಲೈಂಗಿಕ ಬೇಡಿಕೆಗಳಿಗೆ ಶರಣಾಗುವಂತೆ ಮಾಡಲಾಗುತ್ತದೆ. ಲೈಂಗಿಕವಾಗಿ ಸಹಕರಿಸಲು ಒಪ್ಪಿದ ನಟಿಯರಿಗೆ ‘ಕೋಡ್‌’ ನೀಡಲಾಗಿದ್ದು, ಒಪ್ಪದವರನ್ನು ಉದ್ಯಮದಿಂದಲೇ ಹೊರಹಾಕಲಾಗಿದೆ ಎಂದು ಅಂಶ ವರದಿಯಲ್ಲಿದೆ.

ಅನೇಕರು ಜೀವಭಯದಿಂದ ಮತ್ತು ಭವಿಷ್ಯದ ದೃಷ್ಟಿಯಿಂದ ದೂರು ದಾಖಲಿಸಲು ಮುಂದಾಗಿಲ್ಲ. ಪೊಲೀಸರು ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಅಪರಾಧಗಳ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯಲ್ಲಿರುವ ಕೆಲವು ಅಂಶಗಳು

  • ಮಲಯಾಳ ಚಿತ್ರೋದ್ಯಮವು ‘ಕ್ರಿಮಿನಲ್‌ ಗ್ಯಾಂಗ್‌’ನ ನಿಯಂತ್ರಣದಲ್ಲಿದೆ. ‌

  • ಮಹಿಳೆಯರು ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಸಮಯದಲ್ಲಿ ಅದೇ ಚಿತ್ರ ತಂಡದಲ್ಲಿ ಕೆಲಸ ಮಾಡುವ ಪುರುಷರು ಮದ್ಯದ ನಶೆಯಲ್ಲಿ ಕೊಠಡಿಯ ಬಾಗಿಲು ತಟ್ಟುವರು.

  • ಮುಟ್ಟಿನ ಅವಧಿಯಲ್ಲಿ ಮಹಿಳೆಯರಿಗೆ ಯಾವುದೇ ವಿಶೇಷ ಸೌಲಭ್ಯ ಒದಗಿಸುವುದಿಲ್ಲ. ನ್ಯಾಪ್‌ಕಿನ್‌ ಬದಲಿಸಲೂ ಅವಕಾಶ ಇರುವುದಿಲ್ಲ.

  • ಶೂಟಿಂಗ್‌ ತಾಣದಲ್ಲಿ ಮಹಿಳೆಯರು ಅನೇಕ ಸಲ ಮೂತ್ರವಿಸರ್ಜನೆಯನ್ನು ತುಂಬಾ ಸಮಯದವರೆಗೆ ತಡೆಹಿಡಿಯಬೇಕಾಗುತ್ತದೆ. ಈ ಸಂಕಟ ತಪ್ಪಿಸಲಿಕ್ಕಾಗಿ ನೀರನ್ನೇ ಕುಡಿಯುವುದಿಲ್ಲ. ‌‌

  • ಪುರುಷ ಕಲಾವಿದರಿಗೆ ಹೋಲಿಸಿದರೆ ಮಹಿಳಾ ಕಲಾವಿದರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT