ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿರು ಖರೀದಿ: ಇ–ಹರಾಜು ಪ್ರಕ್ರಿಯೆ ಕೈಬಿಡಿ; ಸುಪ್ರೀಂ ಕೋರ್ಟ್‌ಗೆ ಫಿಮಿ ಮೇಲ್ಮನವಿ

ಸುಪ್ರೀಂ ಕೋರ್ಟ್‌ಗೆ ಫಿಮಿ ಮೇಲ್ಮನವಿ
Last Updated 19 ಮಾರ್ಚ್ 2021, 21:59 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ಮಾರಾಟ ಮತ್ತು ಖರೀದಿಗೆ ಕಡ್ಡಾಯಗೊಳಿಸಿರುವ ಇ–ಹರಾಜು ಪ್ರಕ್ರಿಯೆ ಕೈಬಿಡುವಂತೆ ಕೋರಿ ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ)ದ ದಕ್ಷಿಣ ವಲಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಧಾರವಾಡದ ಸಮಾಜ ಪರಿವರ್ತನ ಸಮುದಾಯದ ಪ್ರಕರಣದ ವಿಚಾರಣೆ ನಡೆಸಿ ನೀಡಲಾದ 2013ರ ಆದೇಶದಂತೆ, ಕರ್ನಾಟಕದಲ್ಲಿ ಇ–ಹರಾಜಿನ ಮೂಲಕವೇ ಅದಿರಿನ ಖರೀದಿ ಮತ್ತು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ದೇಶದ ಇತರೆಡೆ ಈ ಪದ್ಧತಿ ಇಲ್ಲದ್ದರಿಂದ ಈ ಪ್ರಕ್ರಿಯೆ ಅಗತ್ಯವಿಲ್ಲ ಎಂದು ಫಿಮಿ ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ ರಚಿಸಲಾದ ಮೇಲ್ವಿಚಾರಣಾ ಸಮಿತಿ ಹಾಗೂ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಗಳು ಇ–ಹರಾಜು ಪ್ರಕ್ರಿಯೆ ಕೈಬಿಡಲು ಈಗಾಗಲೇ ಸಮ್ಮತಿ ಸೂಚಿಸಿವೆ ಎಂದು ಅರ್ಜಿದಾರರ ಪರ ವಕೀಲ ಕೃಷ್ಣನ್ ವೇಣುಗೋಪಾಲ್‌ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠಕ್ಕೆ ಶುಕ್ರವಾರ ಕೋರಿದರು.

ಅಲ್ಲದೆ, ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ನ್ಯಾಯಾಲಯದಲ್ಲಿ ಎಂದಿನಂತೆ ಭೌತಿಕ ಕಲಾಪ ಆರಂಭಿಸಿದಾಗ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಮೊದಲು ತಿಳಿಸಿದ್ದ ಪೀಠ, ಅರ್ಜಿದಾರರ ಕೋರಿಕೆಯ ಮೇರೆಗೆ ತುರ್ತು ವಿಚಾರಣೆ ನಡೆಸಲು ಸಮಯ ನಿಗದಿಗೊಳಿಸಲು ಒಪ್ಪಿಗೆ ನೀಡಿತು.

ಇ–ಹರಾಜಿನ ಮೂಲಕ ಅದಿರನ್ನು ಮಾರಾಟ ಮಾಡುವುದಕ್ಕೂ ಪರಿಸರಕ್ಕೆ ಹಾನಿ ಉಂಟಾಗುವುದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಿಇಸಿ 2019ರಲ್ಲಿ ಸಲ್ಲಿಸಲಾದ ವರದಿಯಲ್ಲಿ ಸ್ಪಷ್ಟಪಡಿಸಿದೆ. ಅಲ್ಲದೆ, ಸುಪ್ರೀಂ ಕೋರ್ಟ್‌ ವಿಧಿಸಿದ್ದ ಎರಡು ವರ್ಷಗಳ ಅವಧಿಯೂ ಮುಗಿದಿದ್ದು, ಅಕ್ರಮ ಗಣಿಗಾರಿಕೆ ತಡೆಗೆ ಆರಂಭಿಸಲಾಗಿದ್ದ ಇ–ಹರಾಜು ಪ್ರಕ್ರಿಯೆಯ ಉದ್ದೇಶವೂ ಈಡೇರಿದೆ. ಹಾಗಾಗಿ, ಕರ್ನಾಟಕದಲ್ಲಿ ಜಾರಿಯಲ್ಲಿರುವ ಇ–ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಗಣಿ ಗುತ್ತಿಗೆದಾರರೊಂದಿಗೆ ಒಪ್ಪಂದದ ಮೂಲಕ ಖರೀದಿ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಇ–ಹರಾಜು ಪ್ರಕ್ರಿಯೆಯು ಕಬ್ಬಿಣದ ಅದಿರಿನ ವಹಿವಾಟಿನ ಮೇಲೆ ಸಾಕಷ್ಟು ಹೊಡೆತ ನೀಡಿದ್ದಲ್ಲದೆ, ಸರ್ಕಾರದ ಆದಾಯದ ಮೇಲೂ ಪರಿಣಾಮ ಬೀರಿದೆ. ಮೇಲಾಗಿ, ಗಣಿಗಾರಿಕೆಗೆ ಸಂಬಂಧಿಸಿದಂತೆ 2013ರಲ್ಲಿ ಪರಿಚಯಿಸಲಾದ ಉಪಗ್ರಹ ಆಧರಿತ ಕಣ್ಗಾವಲು ವ್ಯವಸ್ಥೆಯಿಂದ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ ಎಂದೂ ಫಿಮಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT