ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಗೋವಾ ಕ್ಷೇತ್ರ: ಅಭ್ಯರ್ಥಿ ನಿರ್ಧಾರ ಆಗಿಲ್ಲ– ಕಾಂಗ್ರೆಸ್ 

Published 14 ಫೆಬ್ರುವರಿ 2024, 14:22 IST
Last Updated 14 ಫೆಬ್ರುವರಿ 2024, 14:22 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ‘ಇಂಡಿಯಾ’ ಮೈತ್ರಿಕೂಟದ ಸಭೆಯ ಬಳಿಕ ನಿರ್ಧರಿಸಲಾಗುವುದು ಎಂದು ಕಾಂಗ್ರೆಸ್‌ ಬುಧವಾರ ಹೇಳಿದೆ. 

ಸೀಟು ಹಂಚಿಕೆ ವಿಷಯದಲ್ಲಿ ಎಎಪಿ ಮತ್ತು ಕಾಂಗ್ರೆಸ್‌ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿಯು ಬೆನೌಲಿಮ್‌ ಕ್ಷೇತ್ರದ ಶಾಸಕ ವೆಂಜಿ ವಿಗಾಸ್ ಅವರನ್ನು ದಕ್ಷಿಣ ಗೋವಾ ಕ್ಷೇತ್ರಕ್ಕೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಂಗಳವಾರ ಘೋಷಿಸಿತ್ತು. 

ಕಾಂಗ್ರೆಸ್‌ನ ಫ್ರಾನ್ಸಿಸ್ಕೊ ಸಾರ್ಡಿನಾ ಈ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಎಎಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋವಾ ಕಾಂಗ್ರೆಸ್‌ ಅಧ್ಯಕ್ಷ ಅಮಿತ್‌ ಪಾಟ್ಕರ್‌, ‘ಇಂಡಿಯಾ’ ಮೈತ್ರಿಕೂಟ ಈ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ನಿರ್ಧರಿಸಿಲ್ಲ ಎಂದರು.

‘ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಪಕ್ಷದಿಂದ ತಲಾ ಎಂಟು ಆಕಾಂಕ್ಷಿಗಳು ಇದ್ದಾರೆ. ಎಎಪಿಯು ವೆಂಜಿ ವಿಗಾಸ್‌ ಅವರ ಹೆಸರನ್ನು ಅಂತಿಮಗೊಳಿಸಿದೆ. ಇಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ನಿರ್ಧಾರವನ್ನು ದೆಹಲಿಯಲ್ಲಿ ನಡೆಯಲಿರುವ ಮೈತ್ರಿಕೂಟದ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ಗೋವಾದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ (ದಕ್ಷಿಣ ಮತ್ತು ಉತ್ತರ ಗೋವಾ) ಕಾಂಗ್ರೆಸ್‌ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT