ಅಹಮದಬಾದ್: ಇಲ್ಲಿನ 10 ಅಂತಸ್ತಿನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 125 ರೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಸಾಹಿಬಾಗ್ ಪ್ರದೇಶದಲ್ಲಿರುವ 'ರಾಜಸ್ಥಾನ ಆಸ್ಪತ್ರೆ'ಯ ನೆಲಮಾಳಿಗೆಯಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ.
‘ಆಸ್ಪತ್ರೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದು, ನೆಲ ಮಾಳಿಗೆಯಲ್ಲಿ ಆಸ್ಪತ್ರೆಗೆ ಸಂಬಂಧಪಟ್ಟ ಹಲವಾರು ವಸ್ತುಗಳನ್ನು ಇಟ್ಟಿದ್ದರು. ಅವುಗಳಿಗೆ ಬೆಂಕಿ ತಗುಲಿದ ಪರಿಣಾಮ ಆಸ್ಪತ್ರೆಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ‘ ಎಂದು ಪೊಲೀಸ್ ಅಧಿಕಾರಿ ಎಂ. ಡಿ. ಚಾಂಪವತ್ ಹೇಳಿದರು.
‘ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಆಸ್ಪತ್ರೆಯ ನೆಲಮಾಳಿಗೆಯಿಂದ ದಟ್ಟ ಹೊಗೆ ಹೊರಹೊಮ್ಮುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ 125 ರೋಗಿಗಳನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿದೆ‘ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಜಯೇಶ್ ಖಾಡಿಯಾ ಹೇಳಿದರು.
ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನು ತಿಳಿದುಬಂದಿದೆ.