ಕೊಚ್ಚಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಬಿಹಾರ ಮೂಲದ ವಲಸೆ ಕಾರ್ಮಿಕನಾಗಿರುವ ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಇತ್ತ ಆರೋಪಿಗೆ ಮರಣದಂಡನೆ ನೀಡಬೇಕು ಎಂದು ಸಂತ್ರಸ್ತ ಬಾಲಕಿಯ ತಾಯಿ ಮತ್ತು ಪೋಷಕರು ಒತ್ತಾಯಿಸಿದ್ದಾರೆ.
ಬಾಲಕಿಯ ತಂದೆ ತಾಯಿ ಕೂಡ ಬಿಹಾರದ ವಲಸೆ ಕಾರ್ಮಿಕರು. ಇವರು ವಾಸಿಸುತ್ತಿದ್ದ ಕಟ್ಟಡದಲ್ಲೇ ಆರೋಪಿ ವಾಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ಶುಕ್ರವಾರ ನಾಪತ್ತೆಯಾಗಿದ್ದಳು. ಜ್ಯೂಸ್ ಕೊಡಿಸುವ ಆಮಿಷವೊಡ್ಡಿ ಬೇರೆಡೆಗೆ ಕರೆದೊಯ್ದು ಅತ್ಯಾಚಾರ ಎಸಗಿ, ಬಳಿಕ ಕ್ರೂರವಾಗಿ ಹತ್ಯೆ ಮಾಡಿದ್ದ.
ಇಲ್ಲಿನ ಅಳುವಾ ಪ್ರದೇಶದ ಸ್ಥಳೀಯ ಮಾರುಕಟ್ಟೆಯ ಬಳಿ ಶನಿವಾರ ಬಾಲಕಿಯ ಮೃತದೇಹವು ಕಟ್ಟಿದ್ದ ಗೋಣಿಚೀಲವೊಂದರಲ್ಲಿ ಪತ್ತೆಯಾಗಿತ್ತು. ಆರೋಪಿಯನ್ನು ಶನಿವಾರವೇ ಬಂಧಿಸಲಾಗಿತ್ತು. ಆದರೆ, ಆತ ಪಾನಮತ್ತನಾಗಿದ್ದರಿಂದ ಆತನಿಂದ ಯಾವುದೇ ವಿಷಯ ಬಾಯಿಬಿಡಿಸಲು ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.