ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ರಾಮ ಮಂದಿರ: 5.5 ಟನ್ ತೂಕದ ಏಳು ಧ್ವಜಸ್ತಂಭಗಳ ಸಿದ್ಧತೆ

Published 5 ಡಿಸೆಂಬರ್ 2023, 13:00 IST
Last Updated 5 ಡಿಸೆಂಬರ್ 2023, 13:00 IST
ಅಕ್ಷರ ಗಾತ್ರ

ಅಹಮದಾಬಾದ್: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಉದ್ಘಾಟನೆ ಹಾಗೂ ರಾಮ ಮೂರ್ತಿಯ ಪ್ರತಿಷ್ಠಾಪನೆಗೆ ಜ. 22 ದಿನಾಂಕ ನಿಗದಿಯಾಗಿದೆ. ಇದಕ್ಕೆ 5,500 ಕೆ.ಜಿ.ಯ ಹಿತ್ತಾಳೆಯ ಏಳು ಬೃಹತ್ ಧ್ವಜಸ್ತಂಭ ಸಿದ್ಧತೆ ಭರದಿಂದ ಸಾಗಿದೆ.

ಗುಜರಾತ್‌ನ ಅಹದಾಬಾದ್‌ನಲ್ಲಿರುವ ಶ್ರೀಅಂಬಿಕಾ ಎಂಜಿನಿಯರಿಂಗ್ ವರ್ಕ್ಸ್‌ ಕಂಪನಿಯ ಸಿಬ್ಬಂದಿ ಈ ಕಾರ್ಯದಲ್ಲಿ ಈಗ ನಿರತರಾಗಿದ್ದಾರೆ. 

ರಾಮನ ಮೂರ್ತಿಯ ಪ್ರತಿಷ್ಠಾಪನೆಯ ಆರು ದಿನಗಳ ಬೃಹತ್‌ ಉತ್ಸವಕ್ಕೆ ಅಯೋಧ್ಯೆ ಸಜ್ಜಾಗುತ್ತಿದೆ. ಸುಮಾರು ಆರು ಸಾವಿರ ಅತಿಥಿಗಳು ಈ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ದೇವಾಲಯದಲ್ಲಿ ಒಟ್ಟು ಏಳು ಧ್ವಜಸ್ತಂಭಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಸಂಸ್ಥೆಯ ನುರಿತ ಕೆಲಸಗಾರರು ತಲ್ಲೀನರಾಗಿದ್ದಾರೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಭರತ್ ಮೇವರಾ ತಿಳಿಸಿದರು.

‘ನಮ್ಮ ಕಂಪನಿ ಕಳೆದ 81 ವರ್ಷಗಳಿಂದ ದೇವಾಲಯಗಳಿಗೆ ಧ್ವಜಸ್ತಂಭ ಸಿದ್ಧಪಡಿಸುತ್ತಿದೆ. ಪ್ರತಿಷ್ಠಾಪನೆಗೊಂಡ ಮೂರ್ತಿ ಇರುವ ಗರ್ಭಗುಡಿ ಎದುರು ಇರುವ ಈ ಸ್ತಂಭ ಇಡೀ ಜಗತ್ತಿನ ಶಕ್ತಿಯನ್ನು ಆಕರ್ಷಿಸಲಿದೆ. 44 ಅಡಿ ಎತ್ತರ ಹಾಗೂ 9 ಇಂಚುಗಳ ಅಗಲ ಇರುವ ಈ ಸ್ಥಂಭವನ್ನು 1 ಇಂಚು ದಪ್ಪ ಇರುವ ಹಿತ್ತಾಳೆಯ ತಗಡಿನಿಂದ ಸಿದ್ಧಪಡಿಸಲಾಗಿದೆ’ ಎಂದು ವಿವರಿಸಿದರು.

‘ಕಳೆದ 81 ವರ್ಷಗಳಲ್ಲಿ 25 ಅಡಿ ಎತ್ತರದ 450 ಕೆ.ಜಿ. ತೂಕದ ಸ್ತಂಭ ಮಾಡಿದ ಅನುಭವ ಇತ್ತು. ಆದರೆ ಈ ಬಾರಿ ದೊಡ್ಡ ಜವಾಬ್ದಾರಿ ಮತ್ತು ಅವಕಾಶ ನಮಗೆ ಸಿಕ್ಕಿದೆ. ಧ್ವಜಸ್ತಂಭ ಮಾತ್ರವಲ್ಲದೇ, ದೇವಾಲಯದ ಮುಖ್ಯ ದ್ವಾರ ಹಾಗೂ ಅದರ ಪರಿಕರಗಳೂ ನಮ್ಮ ಸಂಸ್ಥೆಯಲ್ಲೇ ಸಿದ್ಧಗೊಳ್ಳುತ್ತಿವೆ. ಸುಮಾರು 20 ಜನ ಕುಶಲಕರ್ಮಿಗಳು ಈ ಕಾಯಕದಲ್ಲಿ ತೊಡಗಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT