ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ | ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಆಕ್ರೋಶ

ಬೀದಿಗಿಳಿದು ಪ್ರತಿಭಟಿಸಿದ ಸಾರ್ವಜನಿಕರು, ಪೊಲೀಸರಿಂದ ಬಿಗಿ ಬಂದೋಬಸ್ತ್
Published 23 ಆಗಸ್ಟ್ 2024, 13:40 IST
Last Updated 23 ಆಗಸ್ಟ್ 2024, 13:40 IST
ಅಕ್ಷರ ಗಾತ್ರ

ಗುವಾಹಟಿ : ಅಸ್ಸಾಂನ ನಗಾಂವ್‌ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ದುಷ್ಕೃತ್ಯವನ್ನು ಖಂಡಿಸಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದರು.

ಧೀಂಗ್‌ ಪ್ರದೇಶಕ್ಕೆ ಮನೆಪಾಠಕ್ಕೆ ತೆರಳಿದ್ದ ಬಾಲಕಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಸೈಕಲ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಮೂವರು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದರು. 

ಬೈಕ್‌ನಲ್ಲಿ ಬಂದ ಮೂವರು ಬಾಲಕಿಯ ಸೈಕಲ್‌ ಅಡ್ಡಗಟ್ಟಿ, ನಂತರ ಅತ್ಯಾಚಾರ ನಡೆಸಿದ್ದಾರೆ. ಗಾಯಗೊಂಡ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಕೆರೆಯ ಬಳಿ ಎಸೆದು ಹೋಗಿದ್ದರು. ಸ್ಥಳೀಯರು ಬಾಲಕಿಯನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಹೇಳಿದರು.

10ನೇ ತರಗತಿ ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಮೊದಲಿಗೆ ಧೀಂಗ್‌ ಆರೋಗ್ಯ ಕೇಂದ್ರಕ್ಕೆ, ನಂತರ ನಗಾಂವ್‌ನ ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಇತರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ತೀವ್ರ ಪ್ರತಿಭಟನೆ

ವಿಷಯ ತಿಳಿಯುತ್ತಿದ್ದಂತೆಯೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜನರು ಬೀದಿಗಿಳಿದು ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಿದರು. ಅಂಗಡಿಗಳ ಮಾಲೀಕರು ತಮ್ಮ ಮಳಿಗೆಗಳಿಗೆ ಬೀಗ ಹಾಕಿದ್ದರು. ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮತ್ತು ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದವು.

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಪೊಲೀಸರು ನಿಗಾವಹಿಸಿದ್ದಾರೆ.

ಕಠಿಣ ಕ್ರಮದ ಭರವಸೆ

ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ ಅವರು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಭರವಸೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ನಂತರ ಸಮುದಾಯವೊಂದರ ಕೆಲ ವರ್ಗದವರು ಇಂಥ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಯಾರನ್ನೂ ಬಿಡುವುದಿಲ್ಲ. ಎರಡು ತಿಂಗಳಿನಲ್ಲಿ ಮಹಿಳೆಯರ ವಿರುದ್ಧದ 23 ಪ್ರಕರಣಗಳು ನಡೆದಿವೆ. 
ಹಿಮಂತ್‌ ಬಿಸ್ವಾ ಶರ್ಮ, ಅಸ್ಸಾಂ ಮುಖ್ಯಮಂತ್ರಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾಲಕಿ ಮೇಲೆ ಹೀನ ಕೃತ್ಯ ಎಸಗಿದ ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ. ಧೀಂಗ್‌ ಪ್ರದೇಶಕ್ಕೆ ತೆರಳಿ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಜಲಸಂಪನ್ಮೂಲ ಸಚಿವರಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಹೇಳಿದರು.

ಜೈಪುರ: ನಾಲ್ಕು ವರ್ಷದ ಮಗು ಮೇಲೆ ಅತ್ಯಾಚಾರ

ಜೈಪುರ: ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವಿನ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.

ಮಗುವಿನ ತಾಯಿ ಬುಧವಾರ ಸಂಜೆ ಕೆಲಸದ ಪ್ರಯುಕ್ತ ಹೊರಗೆ ಹೋಗಿದ್ದಾಗ ಕೃತ್ಯ ಎಸಗಲಾಗಿದೆ. ತಾಯಿ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಮಗು ಗಾಯಗೊಂಡು ಅಳುತ್ತಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

‘ಆರೋಪಿಯು ಸಂಬಂಧಿ ಎಂದು ಮಗುವಿನ ತಾಯಿ ಹೇಳಿದ್ದಾರೆ. 35 ವರ್ಷದ ಆರೋಪಿಯನ್ನು ಗುರುವಾರ ರಾತ್ರಿ ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ಚಂಡೀಗಢ: ಶಾಲೆಯ ಬಸ್ ಚಾಲಕನ ಬಂಧನ

ಚಂಡೀಗಢ: 12ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಾಲೆಯೊಂದರ ಬಸ್‌ ಚಾಲಕನನ್ನು ಬಂಧಿಸಲಾಗಿದೆ ಎಂದು ಪಂಜಾಬ್‌ನ ಜೀರಕ್‌ಪುರ ಪೊಲೀಸರು ಶುಕ್ರವಾರ ತಿಳಿಸಿದರು.

‘ಮಹಮ್ಮದ್‌ ರಜಾಕ್ ಬಂಧಿತ ಆರೋಪಿ. ಸಂತ್ರಸ್ತೆ ಜೊತೆ ಸ್ನೇಹ ಗಳಿಸಲು ರಜಾಕ್‌ ಪ್ರಯತ್ನಿಸಿದ್ದ. ಬಾಲಕಿ ಸ್ನೇಹಕ್ಕೆ ನಿರಾಕರಿಸಿದಾಗ ಆಕೆಯ ತಿರುಚಿದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ನಂತರ ಪೋಷಕರು ಇರದ ಸಮಯದಲ್ಲಿ ಬಾಲಕಿಯ ಮನೆಗೆ ತೆರಳಿ ಮೇನಿಂದ ಜುಲೈವರೆಗೆ ಮೂರು ಬಾರಿ ಅತ್ಯಾಚಾರ ಎಸಗಿದ್ದ’ ಎಂದು ಹೇಳಿದರು.

‘ಕೆಲವು ದಿನಗಳಿಂದ ಮಂಕಾಗಿದ್ದ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ವಿಷಯ ಬಹಿರಂಗಗೊಂಡಿದೆ. ಪೋಷಕರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ’ ಎಂದು ಉಪ ಪೊಲೀಸ್‌ ವರಿಷ್ಠಾಧಿಕಾರಿ ಜಸ್ಪಿಂದರ್‌ ಸಿಂಗ್‌ ತಿಳಿಸಿದರು.

ಅಕೋಲಾ: ಸಂಬಂಧಿಯಿಂದಲೇ ಲೈಂಗಿಕ ದೌರ್ಜನ್ಯ

ಅಕೋಲಾ: ಮಹಾರಾಷ್ಟ್ರ ಅಕೋಲಾ ಜಿಲ್ಲೆಯಲ್ಲಿ 10 ವರ್ಷ ವಯಸ್ಸಿನ ಬಾಲಕಿ ಮೇಲೆ ಸಂಬಂಧಿಯೇ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ದೂರಿನ ಆಧಾರದ ಮೇಲೆ 24 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಬಾಲಕಿಯು ಸಂಬಂಧಿಕರ ಮನೆಯಲ್ಲಿದ್ದು ಓದುತ್ತಿದ್ದಳು. ಸಂತ್ರಸ್ತೆ ಒಬ್ಬಳೇ ಇದ್ದ ಸಂದರ್ಭದಲ್ಲಿ ಆರೋಪಿಯು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ’ ಎಂದು ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ಸತೀಶ್‌ ಕುಲಕರ್ಣಿ ತಿಳಿಸಿದರು.

‘ಆರೋಪಿಯು ಕಳೆದ ವರ್ಷ ಆಗಸ್ಟ್‌ನಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದು, ಸಂತ್ರಸ್ತೆಯ ಕುಟುಂಬಸ್ಥರು ಗುರುವಾರ ರಾತ್ರಿ ದೂರು ದಾಖಲಿಸಿದ್ದರು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

ಅಸ್ಸಾಂನ ನಗಾಂವ್‌ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು   –ಪಿಟಿಐ ಚಿತ್ರ
ಅಸ್ಸಾಂನ ನಗಾಂವ್‌ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು   –ಪಿಟಿಐ ಚಿತ್ರ
ಅಸ್ಸಾಂನ ನಗಾಂವ್‌ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು   –ಪಿಟಿಐ ಚಿತ್ರ
ಅಸ್ಸಾಂನ ನಗಾಂವ್‌ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು   –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT