ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲ್ಫ್ ದೇಶಗಳ ಜೊತೆ ಉತ್ತಮ ಸಂಬಂಧ ಮುಂದುವರಿಯಲಿದೆ: ಪೀಯೂಷ್ ಗೋಯಲ್

Last Updated 7 ಜೂನ್ 2022, 12:40 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ, ಪ್ರವಾದಿ ಮೊಹಮ್ಮದ್ ಕುರಿತು ನೀಡಿದ್ದ ಅವಹೇಳನಕಾರಿ ಹೇಳಿಕೆ ವಿವಾದವು ಕೇಂದ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ, ಹೇಳಿಕೆ ನೀಡಿದವರು ಸರ್ಕಾರದಭಾಗವಾಗಿರಲಿಲ್ಲ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಗಲ್ಫ್ ದೇಶಗಳ ಜೊತೆಗಿನ ಉತ್ತಮ ಬಾಂಧವ್ಯ ಮುಂದುವರಿಯಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪ್ರವಾದಿ ಮಹಮ್ಮದ್ ಕುರಿತಂತೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ವಕ್ತಾರೆ ಹುದ್ದೆಯಿಂದ ಭಾನುವಾರ ಅಮಾನತು ಮಾಡಲಾಗಿದೆ. ದೆಹಲಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನೂ ಉಚ್ಚಾಟನೆ ಮಾಡಲಾಗಿದೆ.

ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಕುವೈತ್, ಕತಾರ್ ಮತ್ತು ಇರಾನ್ ಮುಂತಾದ ಮುಸ್ಲಿಂ ರಾಷ್ಟ್ರಗಳು ಹಾಗೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿದ್ದ ಬಿಜೆಪಿ, 'ಯಾವುದೇ ವರ್ಗ ಅಥವಾ ಧರ್ಮವನ್ನು ಅವಹೇಳನ ಮಾಡುವ ಅಥವಾ ಕೀಳಾಗಿ ಕಾಣುವ ಯಾವುದೇ ಸಿದ್ಧಾಂತಗಳಿಗೆ ಬಿಜೆಪಿಯ ಕಠಿಣ ವಿರೋಧವಿದೆ. ಬಿಜೆಪಿಯು ಅಂಥ ವ್ಯಕ್ತಿಗಳನ್ನು ಅಥವಾ ಚಿಂತನೆಗಳನ್ನು ಪ್ರಚುರಪಡಿಸುವುದಿಲ್ಲ' ಎಂದು ತಿಳಿಸಿತ್ತು.

‘ಸರ್ಕಾರದ ಭಾಗವಾಗಿ ಕೆಲಸ ನಿರ್ವಹಿಸುತ್ತಿರುವವರು ಈ ಹೇಳಿಕೆ ನೀಡಿಲ್ಲ. ಹಾಗಾಗಿ, ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಕ್ಷವು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ’ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ವಿವಾದದ ಕುರಿತಂತೆ ವಿದೇಶಾಂಗ ಇಲಾಖೆಯು ಸ್ಪಷ್ಟನೆ ನೀಡಿದೆ ಮತ್ತು ಈ ಬಗ್ಗೆ ಬಿಜೆಪಿ ಅಗತ್ಯ ಕ್ರಮ ಕೈಗೊಂಡಿದೆ. ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಈ ಎಲ್ಲ ದೇಶಗಳ ಜೊತೆ ನಮಗೆ ಉತ್ತಮ ಸಂಬಂಧವಿದೆ ಮತ್ತು ಅದು ಮುಂದುವರಿಯಲಿದೆ’ಎಂದು ಗೋಯಲ್ ಹೇಳಿದ್ದಾರೆ.

ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ನಡೆಸುತ್ತಿರುವ ಸೋಶಿಯಲ್ ಮೀಡಿಯಾ ಕ್ಯಾಂಪೇನ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದಾರೆ.

‘ಅವರು (ಗಲ್ಫ್ ದೇಶಗಳು) ಆ ರೀತಿಯ ಹೇಳಿಕೆ ನೀಡಬಾರದು ಎಂದಷ್ಟೇ ಹೇಳಿದ್ದಾರೆ. ಅದರಂತೆ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗಲ್ಫ್ ದೇಶಗಳಲ್ಲಿ ವಾಸವಿರುವ ಎಲ್ಲ ಭಾರತೀಯರು ಸುರಕ್ಷಿತ. ಅವರು ಆತಂಕಪಡುವ ಅಗತ್ಯವಿಲ್ಲ’ಎಂದು ಗೋಯಲ್ ಹೇಳಿದ್ದಾರೆ.

10 ದಿನಗಳ ಹಿಂದೆ ಟೆಲಿವಿಜನ್ ಒಂದರ ಚರ್ಚೆಯಲ್ಲಿ ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ಮತ್ತು ಈಗ ಡಿಲೀಟ್ ಮಾಡಲಾಗಿರುವ ನವೀನ್ ಕುಮಾರ್ ಜಿಂದಾಲ್ ಅವರ ಟ್ವೀಟ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗುವ ಜೊತೆಗೆ ಭಾರೀ ವಿವಾದಕ್ಕೆ ಎಡೆಮಾಡಿದ್ದವು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT