ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ್ ರೈಸ್‌’ ಬ್ರಾಂಡ್: ಆಹಾರ ನಿಗಮದ ಅಕ್ಕಿ ಮಾರಾಟಕ್ಕೆ ಸರ್ಕಾರದ ಚಿಂತನೆ

Published 27 ಡಿಸೆಂಬರ್ 2023, 16:24 IST
Last Updated 27 ಡಿಸೆಂಬರ್ 2023, 16:24 IST
ಅಕ್ಷರ ಗಾತ್ರ

ನವದೆಹಲಿ: ‘ಏರುತ್ತಿರುವ ಅಕ್ಕಿ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ಆಹಾರ ನಿಗಮದ ಅಕ್ಕಿಯನ್ನು ‘ಭಾರತ್‌’ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಆದರೆ ರಿಯಾಯಿತಿ ದರದ ಕುರಿತು ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‘ದೇಶೀಯವಾಗಿ ಅಕ್ಕಿ ಲಭ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ಆಹಾರ ನಿಗಮ (ಎಫ್‌ಸಿಐ) ದಲ್ಲಿರುವ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಯೋಜನೆಯಡಿ (ಒಎಂಎಸ್‌ಎಸ್‌)ಯಲ್ಲಿ ಇ–ಹರಾಜು ಮೂಲಕ ಮಾರಾಟ ಮಾಡುವ ಪ್ರಸ್ತಾವನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಭಾರತ್‌ ರೈಸ್’ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುವ ಈ ಅಕ್ಕಿಯ ಬೆಲೆಯನ್ನು ಇನ್ನಷ್ಟೇ ನಿಗದಿಪಡಿಸಬೇಕಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸದ್ಯ ಎಫ್‌ಸಿಐನಲ್ಲಿರುವ ಗುಣಮಟ್ಟದ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ₹29 ರಂತೆ ಮಾರಾಟ ಮಾಡಲಾಗುತ್ತಿದೆ. ಆದರೆ ಭಾರತ್ ರೈಸ್ ಬ್ರಾಂಡ್‌ನಲ್ಲಿ ಇದೇ ಬೆಲೆಗೆ ಮಾರಾಟ ಮಾಡಬೇಕೇ ಅಥವಾ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕೆ ಎಂಬುದನ್ನು ವಿವಿಧ ಸಚಿವರು ಚರ್ಚಿಸಿ ನಿರ್ಧರಿಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಭಾರತ್ ಬ್ರಾಂಡ್ ಅಡಿಯಲ್ಲಿ ಸರ್ಕಾರ ಈಗಾಗಲೇ ಗೋಧಿ ಹಿಟ್ಟು ಮಾರಾಟ ಮಾಡುತ್ತಿದೆ. ಒಎಂಎಸ್‌ಎಸ್‌ ಯೋಜನೆಯಡಿ ಕೇವಲ 3.04 ಲಕ್ಷ ಟನ್‌ನಷ್ಟು ಅಕ್ಕಿಯನ್ನು ಮಾತ್ರ ಎಫ್‌ಸಿಐ ಮಾರಾಟ ಮಾಡಲು ಸಾಧ್ಯ. ನೋಡಲ್ ಸಂಸ್ಥೆ ಅಡಿಯಲ್ಲಿ 82.89 ಲಕ್ಷ ಟನ್‌ನಷ್ಟು ಗೋಧಿಯನ್ನು ಮಾರಾಟ ಮಾಡಿದೆ. ಹಿಂದಿನ ಕೆಲ ವರ್ಷಗಳಿಗೆ ಹೋಲಿಸಿದರೆ ಅಕ್ಕಿ ಬೆಲೆಯು ವರ್ಷದಿಂದ ವರ್ಷಕ್ಕೆ ಶೇ 13ರ ದರದಲ್ಲಿ ಏರಿಕೆಯಾಗುತ್ತಿದೆ. 2024ರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಧಾನ್ಯಗಳ ಬೆಲೆ ಏರಿಕೆ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT