ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಭಿವೃದ್ಧಿಭಾರತ@2047’ ಗುರಿಸಾಧನೆ: ಯುವಜನರ ಮಾತು ಆಲಿಸಲಿರುವ ಕೇಂದ್ರ

Published 10 ಡಿಸೆಂಬರ್ 2023, 16:05 IST
Last Updated 10 ಡಿಸೆಂಬರ್ 2023, 16:05 IST
ಅಕ್ಷರ ಗಾತ್ರ

ನವದೆಹಲಿ (): ‘2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿಸುವ ಗುರಿ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಯುವಜನರ ಅಭಿಪ್ರಾಯಗಳನ್ನು ಪರಿಗಣಿಸಲಿದೆ’ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್.ಸುಬ್ರಹ್ಮಣ್ಯಂ ಹೇಳಿದ್ದಾರೆ.

ಸುದ್ದಿಗಾರರ ಜೊತೆಗೆ ಭಾನುವಾರ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಗಳು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮೂಲಕ ಯುವಜನರ ಅಭಿಪ್ರಾಯಗಳನ್ನು ಪಡೆಯುವ ಕೆಲಸ ನಡೆಯಲಿದೆ’ ಎಂದು ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಈ ನಿಮಿತ್ತ ಸೋಮವಾರ ರಾಜಭವನಗಳ ಮೂಲಕ ಸುಮಾರು 700 ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಯುವಜನರ ಅಭಿಪ್ರಾಯ ಪಡೆಯುವ ಬಗ್ಗೆ ಚರ್ಚಿಸುವರು’ ಎಂದರು.

ಅವರ ಪ್ರಕಾರ, ‘2047ರ ವೇಳೆಗೆ ದೇಶವನ್ನು ಅಭಿವೃದ್ಧಿ ರಾಷ್ಟ್ರವಾಗಿಸಲು ಆರ್ಥಿಕತೆಯ ಗಾತ್ರವನ್ನು 30 ಟ್ರಿಲಿಯನ್ ಡಾಲರ್‌ ಮೊತ್ತಕ್ಕೆ ಏರಿಸುವ ಸಂಬಂಧ ದೂರದರ್ಶಿ ಕೈಪಿಡಿ ರಚಿಸಲಾಗುತ್ತಿದೆ. ಇದನ್ನು ಜನವರಿಯಲ್ಲಿ ಪ್ರಧಾನಿ ಬಿಡುಗಡೆ ಮಾಡುವರು’.

‘ದೇಶವೀಗ ಇತಿಹಾಸ ಸೃಷ್ಟಿಸುವ ಹಾದಿಯಲ್ಲಿದೆ. 21ನೇ ಶತಮಾನ ಭಾರತದ ಶತಮಾನವಾಗಿದೆ. ಶಿಕ್ಷಣ, ಆರೋಗ್ಯ, ಗ್ರಾಮೀಣ ಆರ್ಥಿಕತೆ, ಮೂಲಸೌಕರ್ಯ, ಡಿಜಿಟಲ್‌ ಮೂಲಸೌಲಭ್ಯ ಕ್ಷೇತ್ರದ ಪ್ರಗತಿ ಇದನ್ನು ಸಾಧಿಸಲು ಚಿಮ್ಮುಹಲಗೆಯಾಗಲಿವೆ’ ಎಂದರು.

‘ಗುರಿ ಸಾಧನೆಗೆ ಸಾಮಾನ್ಯ ದೃಷ್ಟಿಕೋನಕ್ಕಿಂತಲೂ ಹೊಸ ಚಿಂತನೆಗಳು ಅಗತ್ಯ. ಹೊಸ ಚಿಂತನೆಗಳುಳ್ಳ ಯುವಜನರನ್ನು ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ‘ಅಭಿವೃದ್ಧಿ ಭಾರತ’ ನಿರ್ಮಿಸುವ ಕಾರ್ಯಕ್ಕಾಗಿ ಒಗ್ಗೂಡಿಸುವ ಅಗತ್ಯವಿದೆ’ ಎಂದು ಹೇಳಿದರು.

‘2047ರಲ್ಲಿನ ವೇಳೆಗೆ ಅಭಿವೃದ್ಧಿ ಭಾರತದ ಸ್ವರೂಪವು ಹೇಗಿರಬೇಕು ಎಂಬ ಬಗ್ಗೆ ಯುವಜನರು ಹಾಗೂ ಸಾರ್ವಜನಿಕರು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಅನುವಾಗುವಂತೆ ವೆಬ್‌ಸೈಟ್‌ ರೂಪಿಸಲಿದ್ದು, ತಿಂಗಳಲ್ಲಿ ಆರಂಭವಾಗಲಿದೆ. ಭಿನ್ನ ಆಯಾಮಗಳಲ್ಲಿ ಗುರಿ ಸಾಧಿಸಲು ಏನನ್ನು ಮಾಡಬೇಕು ಎಂಬುದರ ಕುರಿತ ಅನಿಸಿಕೆಗಳನ್ನು ತಿಳಿಸಬಹುದಾಗಿದೆ ಎಂದರು.

‘ಅಭಿವೃದ್ಧಿ ಭಾರತ@2047’ ಕುರಿತು 10 ವಲಯಗಳಿಗೆ ಅನ್ವಯಿಸಿ ದೂರದರ್ಶಿ ಕ್ರಿಯಾಯೋಜನೆಯನ್ನು ರೂಪಿಸುವ ಹೊಣೆಯನ್ನು ಕೇಂದ್ರ ಸರ್ಕಾರವು ಇದೇ ವರ್ಷ ನೀತಿ ಆಯೋಗಕ್ಕೆ ವಹಿಸಿತ್ತು. ದೇಶದ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವದ ವರ್ಷಾಚರಣೆ ವೇಳೆಗೆ ಆಭಿವೃದ್ಧಿ ಭಾರತದ ಗುರಿಯನ್ನು ಸಾಧಿಸುವುದು ಇದರ ಉದ್ದೇಶವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT