ಅಹಮದಾಬಾದ್: ಅಲ್ಪಸಂಖ್ಯಾತ ಸಮುದಾಯದ ಕೆಲ ಸದಸ್ಯರನ್ನು ಸಾರ್ವಜನಿಕವಾಗಿ ಥಳಿಸಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಪೊಲೀಸರ ವಿರುದ್ಧ ಗುಜರಾತ್ ಹೈಕೋರ್ಟ್ ನ್ಯಾಯಾಂಗ ನಿಂದನೆ ಕಾಯ್ದೆ ಅಡಿ ದೋಷಾರೋಪ ಹೊರಿಸಿದೆ.
ಇನ್‌ಸ್ಪೆಕ್ಟರ್ ಎ.ವಿ. ಪಾರ್ಮಾರ್, ಸಬ್‌ಇನ್‌ಸ್ಪೆಕ್ಟರ್ ಡಿ.ಬಿ. ಕುಮಾವತ್, ಇಬ್ಬರು ಕಾನ್‌ಸ್ಟೆಬಲ್‌ಗಳಾದ ಕೆ.ಎಲ್. ದಾಭಿ ಮತ್ತು ಆರ್.ಆರ್. ದಾಭಿ ವಿರುದ್ಧ ನ್ಯಾಯಧೀಶರಾದ ಎ.ಎಸ್. ಸುಪೆಹಿಯ ಮತ್ತು ಎಂ.ಆರ್ ಮೆಂಗ್ಡೆ ಅವರಿದ್ದ ವಿಭಾಗೀಯ ಪೀಠವು ಆರೋಪ ಹೊರಿಸಿದೆ.
ಗುಜರಾತ್‌ನ ಖೇಡಾ ಜಿಲ್ಲೆಯ ಉಂಡೇಲಾ ಗ್ರಾಮದಲ್ಲಿ 2022ರ ಅಕ್ಟೋಬರ್ 4ರಂದು ಮೂವರು ಮುಸ್ಲಿಂ ವ್ಯಕ್ತಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಕೃತ್ಯದಲ್ಲಿ ಈ ನಾಲ್ವರು ಪೊಲೀಸರು ಭಾಗಿಯಾಗಿದ್ದರು ಎಂದು ಪೀಠ ಹೇಳಿದೆ.
ನಾಲ್ವರು ಆರೋಪಿ ಪೊಲೀಸರಲ್ಲಿ ಒಬ್ಬರು ಕುರ್ಚಿ ಮೇಲೆ ಕುಳಿತು ಈ ಕಾನೂನು ಬಾಹಿರ ಮತ್ತು ಅಮಾನವೀಯ ಕೃತ್ಯ ನಡೆಸಲು ಮೌನ ಸಮ್ಮತಿ ನೀಡಿದ್ದರು. ಹೀಗಾಗಿ ಮೊಕದ್ದಮೆ ದಾಖಲಿಸುವುದರಿಂದ ಅವರಿಗೆ ವಿನಾಯತಿ ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಈ ರೀತಿ ಅಮಾನವೀಯವಾಗಿ ನಡೆದುಕೊಳ್ಳುವ ಮೂಲಕ ‘ಡಿ.ಕೆ. ಬಸು ವರ್ಸಸ್ ಪಶ್ಚಿಮ ಬಂಗಾಳ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿಗಳನ್ನು ಪೊಲೀಸರು ಉಲ್ಲಂಘಿಸಿದ್ದಾರೆ. ಅವರ ಈ ನಡೆಯು ಸೆಕ್ಷನ್ 12 ನ್ಯಾಯಾಂಗ ನಿಂದನೆ ಕಾಯ್ದೆ– 1971 ಅಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಈ ಕಾಯ್ದೆ ಅಡಿ ಆರು ತಿಂಗಳ ಸಜೆ ಅಥವಾ ₹2,000 ವರೆಗಿನ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಪೊಲೀಸರ ವಿರುದ್ಧ ದಾಖಲಿಸಲಾದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ ಅಫಡವಿಟ್ಟುಗಳನ್ನು ಸಲ್ಲಿಸಲು ಪ್ರತಿವಾದಿಗಳ ಪರ ವಕೀಲರಿಗೆ ಹೈಕೋರ್ಟ್ ಅವಕಾಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ನಿಗದಿಪಡಿಸಿದೆ.
ಪ್ರಕರಣವೇನು?: ಕಳೆದ ವರ್ಷ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರೂ ಇದ್ದ ಗುಂಪೊಂದು ಉಂಡೇಲಾ ಗ್ರಾಮದಲ್ಲಿ ಗಾಬ್ರ ನೃತ್ಯ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಕೆಲವು ಗ್ರಾಮಸ್ಥರು ಮತ್ತು ಪೊಲೀಸರು ಗಾಯಗೊಂಡಿದ್ದರು. ಕಲ್ಲು ತೂರಾಟ ನಡೆಸಿದ್ದ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ ಮೂವರನ್ನು ಪೊಲೀಸರು ಕಂಬಕ್ಕೆ ಕಟ್ಟಿ ಥಳಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಆ ನಂತರ ಕೆಲವು ಆರೋಪಿಗಳು ಪೊಲೀಸರ ಕ್ರಮವನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಒಟ್ಟು 13 ಪೊಲೀಸರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಒಂಬತ್ತು ಸಿಬ್ಬಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದಿಲ್ಲ. ಹಾಗಾಗಿ ಅವರನ್ನು ಪ್ರಕರಣದ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ ಖೇಡಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ನೀಡಿರುವ ವರದಿಯಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.