ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಯುವಕರಿಗೆ ಛಡಿಯೇಟು: 32 ಪೊಲೀಸರಿಗೆ ಗುಜರಾತ್‌ ಹೈಕೋರ್ಟ್ ನೋಟಿಸ್

Published 24 ಜುಲೈ 2023, 13:55 IST
Last Updated 24 ಜುಲೈ 2023, 13:55 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಜುನಾಗಢದಲ್ಲಿ ಮುಸಲ್ಮಾನ ಸಮುದಾಯದ ಕೆಲವು ಯುವಕರಿಗೆ ಸಾರ್ವಜನಿಕವಾಗಿ ಛಡಿಯೇಟು ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ ಸೋಮವಾರ 32 ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಪೊಲೀಸರಿಂದ ದೌರ್ಜನ್ಯ, ಹಿಂಸೆ ಕುರಿತ ದೂರು ಹಿಂಪಡೆಯಲು ವಕೀಲರ ಮೇಲೆ ಒತ್ತಡ ಹೇರಲು ಅವರ ಅಳಿಯನನ್ನು ವಶಕ್ಕೆ ಪಡೆದು ಕಿರುಕುಳ ನೀಡಲಾಗಿದೆ ಎಂಬ ದೂರಿಗೆ ಸಂಬಂಧಿಸಿ ಎರಡು ವಾರದಲ್ಲಿ ಪ್ರತಿಕ್ರಿಯೆ ದಾಖಲಿಸಬೇಕು ಎಂದೂ ಆದೇಶಿಸಿತು.

ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದ ಇಬ್ಬರು ಸಂತ್ರಸ್ತರು ಈ ಸಂಬಂಧ ಸಲ್ಲಿಸಿದ್ದ ಅರ್ಜಿ ಆಧರಿಸಿ ನ್ಯಾಯಮೂರ್ತಿಗಳಾದ ಎ.ಎಸ್‌.ಸುಪೇಹಿಯ ಮತ್ತು ಎಂ.ಆರ್.ಮೆಂಗ್ಡೆ ಅವರಿದ್ದ ವಿಭಾಗೀಯ ಪೀಠವು ನೋಟಿಸ್‌ ಜಾರಿಗೆ ಆದೇಶಿಸಿತು.

ಜುನಾಗಡದ ನಿವಾಸಿಗಳು ಹಾಗೂ ಜೂನ್‌ 16 ನಡೆದಿದ್ದ ಹಿಂಸಾಚಾರ ಪ್ರಕರಣದ ಸಹ ಆರೋಪಿಗಳಾದ ಜಾಕೀರ್‌ ಮಖ್ವಾನಾ ಮತ್ತು ಸಾಜಿದ್‌ ಕಲಾಮುದಿನ್‌ ಅನ್ಸಾರಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.

ಜೂನ್‌ 16 ರಿಂದ 21ರ ಅವಧಿಯಲ್ಲಿ ಜುನಾಗಡದ ವಿವಿಧೆಡೆ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳು, ತಮ್ಮ ವಶದಲ್ಲಿದ್ದ ಆರೋಪಿಗಳ ಮೇಲೆ ದೌರ್ಜನ್ಯ, ಕಿರುಕುಳ ಎಸಗಿದ್ದಾರೆ. ಅಲ್ಲದೆ ತೀವ್ರವಾಗಿ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ಜುನಾಗಡದಲ್ಲಿ ಜೂ.16ರಂದು ದರ್ಗಾ ತೆರವು ಸಂಬಂಧ ಪೊಲೀಸರು ಮತ್ತು ಮುಸ್ಲಿಮರ ನಡುವೆ ಘರ್ಷಣೆ ನಡೆದಿತ್ತು. ಹಿಂಸೆ ವೀಕ್ಷಿಸುತ್ತಿದ್ದವರು ಅಂದು ಕಲ್ಲೇಟಿನಿಂದ ಮೃತಪಟ್ಟಿದ್ದರು. ಅರ್ಜಿದಾರರು ಸೇರಿದಂತೆ 12 ಜನರನ್ನು ಆಗ ಪೊಲೀಸರು ಬಂಧಿಸಿದ್ದರು. 

ಹಿಂಸಾಚಾರ ಘಟನೆ ಕುರಿತು ಪೊಲೀಸರು, ಬಾಲಕರು ಒಳಗೊಂಡಂತೆ ಸುಮಾರು 170 ಜನರನ್ನು ಅಂದು ವಶಕ್ಕೆ ಪಡೆದಿದ್ದರು. ಹಿಂಸೆಯಲ್ಲಿ ಭಾಗಿಯಾಗಿದ್ದ, ಕಲ್ಲು ತೂರಾಟ ನಡೆಸಿದ್ದ ಆರೋಪದಡಿ ಕೆಲವರಿಗೆ ಸಾರ್ವಜನಿಕವಾಗಿ ಛಡಿ ಏಟು ನೀಡಲಾಗಿತ್ತು. ಅಲ್ಲದೆ  ಬಂಧಿತರ ಮೇಲೆ ಪೊಲೀಸರು ಕೊಲೆ, ಕೊಲೆಯತ್ನ, ದೊಂಬಿ ಮತ್ತಿತರ ಆರೋಪಗಳಡಿ ಪ್ರಕರಣವನ್ನು ದಾಖಲಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT