ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜುನಾಗಢ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಒಬ್ಬ ಸಾವು

ದರ್ಗಾ ತೆರವಿಗೆ ಮಹಾನಗರ ಪಾಲಿಕೆ ನೋಟಿಸ್
Published 17 ಜೂನ್ 2023, 16:00 IST
Last Updated 17 ಜೂನ್ 2023, 16:00 IST
ಅಕ್ಷರ ಗಾತ್ರ

ಜುನಾಗಢ: ಒತ್ತುವರಿ ಆರೋಪದ ಮೇಲೆ ದರ್ಗಾವೊಂದನ್ನು ತೆರವುಗೊಳಿಸುವ ಸಂಬಂಧ ಮಹಾನಗರ ಪಾಲಿಕೆ ನೋಟಿಸ್ ನೀಡಿದ್ದನ್ನು ಖಂಡಿಸಿ ಶುಕ್ರವಾರ ರಾತ್ರಿ ಇಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ. ಕಲ್ಲುತೂರಾಟದಲ್ಲಿ ಜುನಾಗಢದ ಡಿವೈಎಸ್ಪಿ, ಮೂವರು ಸಬ್‌ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಐವರು ಪೊಲಿಸರು ಗಾಯಗೊಂಡಿದ್ದಾರೆ ಎಂದೂ ವಿವರಿಸಿದ್ದಾರೆ.

ಕಲ್ಲು ತೂರಾಟದಿಂದಾಗಿಯೇ ವ್ಯಕ್ತಿಯು ಮೃತಪಟ್ಟಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಜುನಾಗಢದ ಮಜೆವಾಡಿ ದರ್ವಾಜಾ ಬಳಿಯ ದರ್ಗಾದ ಜಾಗದ ಒಡೆತನಕ್ಕೆ ಸಂಬಂಧಿಸಿರುವ ದಾಖಲೆಗಳನ್ನು ಹಾಜರುಪಡಿಸುವಂತೆ ಮಹಾನಗರ ಪಾಲಿಕೆಯು ಜೂನ್‌ 14ರಂದು ನೋಟಿಸ್ ಜಾರಿ ಮಾಡಿತ್ತು. ಇದನ್ನು ಖಂಡಿಸಿ 500ರಿಂದ 600 ಮಂದಿ ದರ್ಗಾದ ಬಳಿ ಪ್ರತಿಭಟಿಸಿ, ರಸ್ತೆ ತಡೆದಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿತೇಜ ವಸಂಸೆಟ್ಟಿ ಶನಿವಾರ ತಿಳಿಸಿದ್ದಾರೆ.

ಪೊಲೀಸ್‌ ಅಧಿಕಾರಿಗಳು ಪ್ರತಿಭಟನಕಾರರ ಜೊತೆ ಸುದೀರ್ಘ ಚರ್ಚೆ ನಡೆಸಿ ರಸ್ತೆ ತಡೆ ಕೈಬಿಡುವಂತೆ ಮನವೊಲಿಸಿದರು. ಗುಂಪೊಂದು ವಾಹನವೊಂದಕ್ಕೆ ಬೆಂಕಿ ಹಚ್ಚಿದೆ ಎಂದೂ ಅವರು ವಿವರಿಸಿದ್ದಾರೆ.

ದರ್ಗಾ ಪ್ರದೇಶದಲ್ಲಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT