ಗುವಾಹಟಿ: ಮಣಿಪುರದ ನಾಗಾ ಪ್ರಾಬಲ್ಯದ ಹಳ್ಳಿಯೊಂದರಲ್ಲಿ ಗಾಂಧಿ ಜಯಂತಿಯ ವೇಳೆ ಎರಡು ಗ್ರಾಮಗಳ ನಡುವಿನ ಭೂವಿವಾದವು ತಾರಕಕ್ಕೇರಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ವದಂತಿಗಳು ಹರಡುವುದನ್ನು ತಡೆಯಲಿಕ್ಕಾಗಿ ಉಖರುಲ್ ಜಿಲ್ಲಾಡಳಿತವು ಕರ್ಫ್ಯೂ ವಿಧಿಸಿದ್ದು, ಮೊಬೈಲ್ ಇಂಟರ್‌ನೆಟ್ ನಿರ್ಬಂಧಿಸಿದೆ.
ಉಖರುಲ್ ಜಿಲ್ಲೆಯ ಹುನ್‌ಪುನ್ ಗ್ರಾಮದಲ್ಲಿ ಗಾಂಧಿ ಜಯಂತಿ ಅಂಗವಾಗಿ ವಿದ್ಯಾರ್ಥಿ ಸಂಘಟನೆಯೊಂದು ಬುಧವಾರ ಸ್ವಚ್ಛತಾ ಅಭಿಯಾನ ಆಯೋಜಿಸಿತ್ತು. ಇದರಲ್ಲಿ ನೆರೆಯ ಹಂಗ್‌ಪುಂಗ್ ಗ್ರಾಮಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಹಂಗ್‌ಪುಂಗ್ ಗ್ರಾಮಸ್ಥರು ತಮ್ಮ ಹಳ್ಳಿಯ ಕೆಲವು ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದುದಕ್ಕೆ ಹುನ್‌ಪುನ್ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಉಖರುಲ್ ಪೊಲೀಸರು ತಿಳಿಸಿದ್ದಾರೆ.
ಈ ಎರಡೂ ಹಳ್ಳಿಗಳ ನಡುವೆ ದೀರ್ಘಕಾಲದಿಂದ ಭೂವಿವಾದವಿದೆ. ಕೆಲವು ದಿನಗಳ ಹಿಂದಷ್ಟೇ ನಡೆದ ಸಂಘರ್ಷದಲ್ಲಿ ಕೆಲವು ಮನೆಗಳು ಸುಟ್ಟುಹೋಗಿದ್ದವು. ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಬೂದಿ ಮುಚ್ಚಿದ್ದ ಕೆಂಡದಂತಿದ್ದ ಪರಿಸ್ಥಿತಿಯು ಉದ್ವಿಗ್ನಗೊಂಡು, ಗುಂಡಿನ ಚಕಮಕಿಗೆ ಕಾರಣವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಮೃತಪಟ್ಟವರಲ್ಲಿ ಮಣಿಪುರ ರೈಫಲ್ಸ್‌ನ ಸಿಬ್ಬಂದಿಯೊಬ್ಬರು ಇದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕೇಂದ್ರ ಭದ್ರತಾ ಪಡೆಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಹಿಂಸಾಚಾರವನ್ನು ನಿಯಂತ್ರಿಸಿವೆ.
ಉಖರುಲ್ ನಾಗಾ ಪ್ರಾಬಲ್ಯದ ಜಿಲ್ಲೆಯಾಗಿರುವುದರಿಂದ ಈ ಘಟನೆಗೂ, ಕುಕಿ–ಮೈತೇಯಿಗಳ ನಡುವಿನ ಸಂಘರ್ಷಕ್ಕೂ ಸಂಬಂಧವಿಲ್ಲ ಎನ್ನಲಾಗಿದೆ.
STORY | Gunfight in Manipur's Ukhrul town over cleaning land, prohibitory orders imposed
— Press Trust of India (@PTI_News) October 2, 2024
READ: https://t.co/2keIhunAOD
VIDEO:
(Video Source: Third Party) pic.twitter.com/9sp1p9XWE1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.