ನವದೆಹಲಿ: ‘ಮಣಿಪುರ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಕೋರಿರುವ ಬೆನ್ನಲ್ಲೇ, ಮೋದಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳು ಭಾನುವಾರ ಅಸಮಾಧಾನ ವ್ಯಕ್ತಪಡಿಸಿವೆ.
‘ಪ್ರಧಾನಿ ಮೋದಿ ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯೋತ್ಸವದ ಶುಭ ಕೋರುತ್ತಿದ್ದಾರೆ. ಆದರೆ, ಕಳೆದ ವರ್ಷದ ಮೇ 3ರಿಂದ ತೀವ್ರ ನೋವು ಮತ್ತು ಕಳವಳದಲ್ಲಿರುವ ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿ ಅವರಿಗೆ ಸಮಯಾವಕಾಶವೇ ಸಿಗಲಿಲ್ಲ. ಜೊತೆಗೆ, ಅಲ್ಲಿಗೆ ಭೇಟಿ ನೀಡಬೇಕೆಂದು ಅವರಿಗೆ ಅನ್ನಿಸಲಿಲ್ಲ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸಾಮಾಜಿಕ ಸಾಮರಸ್ಯ ಹದಗೆಟ್ಟಿದ್ದಾಗ ಪ್ರಧಾನಿ ಮೋದಿ ಮೌನವಾಗಿದ್ದರು. ರಾಜ್ಯದ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಜೊತೆಗೆ ಸಭೆ ನಡೆಸಲು ನಿರಾಕರಿಸಿದ್ದಾರೆ. ಆದರೆ, ಇದೀಗ ರಾಜ್ಯೋತ್ಸವ ದಿನದಂದು ಟ್ವೀಟ್ ಮೂಲಕ ಶುಭ ಕೋರುತ್ತಿದ್ದಾರೆ’ ಎಂದು ಟೀಕಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಮಣಿಪುರ ವಿಚಾರ ಪ್ರಸ್ತಾಪಿಸಿ ತಾವು ಮಾತನಾಡಿದ್ದ ವಿಡಿಯೊವನ್ನು ‘ಎಕ್ಸ್’ ವೇದಿಕೆಯಲ್ಲಿ ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಯಾನ್, ‘ಜನವರಿ 21 ಮಣಿಪುರ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳ ರಾಜ್ಯೋತ್ಸವವಾಗಿದೆ. ಮಣಿಪುರ ರಾಜ್ಯವು ಕಳೆದ 8 ತಿಂಗಳುಗಳಿಂದ ಕಣ್ಣೀರು ಸುರಿಸುತ್ತಿದೆ. ಈ ರಾಜ್ಯಕ್ಕೆ ಭೇಟಿ ನೀಡಲು ಪ್ರಧಾನಿ ಅವರು ಇಂದಿಗೂ ಕೃಪೆ ತೋರುತ್ತಿಲ್ಲ’ ಎಂದಿದ್ದಾರೆ.