ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದ ಮಾತಿಗೆ ಶಿಕ್ಷೆಯಾಗಲಿ, ಧರ್ಮ ಸಂಸತ್‌ಗೂ ವಿನಾಯಿತಿ ಬೇಡ : ಆರೆಸ್ಸೆಸ್ ನಾಯಕ

Last Updated 3 ಫೆಬ್ರುವರಿ 2022, 8:35 IST
ಅಕ್ಷರ ಗಾತ್ರ

ನವದೆಹಲಿ: ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸತ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ವ್ಯಕ್ತವಾದ ಹೇಳಿಕೆಗಳನ್ನು ಖಂಡಿಸಿರುವ ಆರ್‌ಎಸ್‌ಎಸ್‌ನ ನಾಯಕ ಇಂದ್ರೇಶ್ ಕುಮಾರ್, ‘ಪ್ರಚೋದನಕಾರಿ ಮತ್ತು ವಿಭಜಕ ಹೇಳಿಕೆಗಳನ್ನು ನೀಡುವ ಎಲ್ಲರಿಗೂ ಯಾವುದೇ ವಿನಾಯಿತಿ ಇಲ್ಲದೆ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು’ ಎಂದು ಹೇಳಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ದ್ವೇಷದ ರಾಜಕೀಯವನ್ನು ಭ್ರಷ್ಟಾಚಾರ’ ಎಂದು ಕರೆದರು. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ದ್ವೇಷ ಭಾಷಣ ಮಾಡುವುದನ್ನು, ಸಮಾಜದ ಒಂದು ವರ್ಗವನ್ನು ಇನ್ನೊಂದು ವರ್ಗದ ವಿರುದ್ಧ ಎತ್ತಿಕಟ್ಟುವುದನ್ನು ತಡೆಯಬೇಕು ಎಂದು ಕರೆ ನೀಡಿದರು.

‘ಯಾವುದೇ ಸಮುದಾಯ, ಜಾತಿ ಅಥವಾ ಗುಂಪಿನ ವಿರುದ್ಧ ಪ್ರಚೋದನಕಾರಿ ಮತ್ತು ವಿಭಜಕ ಹೇಳಿಕೆ ನೀಡುವ ಬದಲು, ದೇಶ ಮತ್ತು ಜನರ ಹಿತದೃಷ್ಟಿಯಿಂದ ಭ್ರಾತೃತ್ವ ಮತ್ತು ಅಭಿವೃದ್ಧಿಯ ರಾಜಕಾರಣದಲ್ಲಿ ತೊಡಗಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಇಂದ್ರೇಶ್‌ ತಿಳಿಸಿದರು.

ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಮತ್ತು ಇತ್ತೀಚೆಗೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದ ಅದೇ ಮಾದರಿಯ ಸಮಾರಂಭ, ಅದರಲ್ಲಿ ವ್ಯಕ್ತವಾದ ಹೇಳಿಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಯಾವುದೇ ರೀತಿಯ ದ್ವೇಷದ ಮಾತು ಖಂಡನೀಯ. ಎಲ್ಲಾ ದ್ವೇಷದ ಭಾಷಣಗಳನ್ನು ಖಂಡಿಸಬೇಕು. ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಯಾರಿಗೂ ವಿನಾಯಿತಿ ನೀಡಬಾರದು’ ಎಂದು ಹೇಳಿದರು.

‘ಕ್ರೂರ’ ದ್ವೇಷ ಭಾಷಣಗಳಿಗೆ ಹಲವಾರು ಉದಾಹರಣೆಗಳಿವೆ’ ಎಂದು ಕುಮಾರ್ ಹೇಳಿದರು. ದೇಶದ ವಾತಾವರಣವನ್ನು ಹಾಳುಮಾಡುವ ಎಲ್ಲಾ ವಿಭಜಕ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಈ ಹೊತ್ತಿನ ಅಗತ್ಯ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಆರ್‌ಎಸ್‌ಎಸ್ ಮತ್ತು ಅದರ ಸಿದ್ಧಾಂತವಿದೆ ಎಂಬ ಮಾತುಗಳನ್ನು ನಾವು 60 ವರ್ಷಗಳಿಗೂ ಹೆಚ್ಚು ಕಾಲದಿಂದ ಕೇಳುತ್ತಾ ಬಂದಿದ್ದೇವೆ. ಇದಕ್ಕಾಗಿ ಸಂಘದ ಮೇಲೆ ನಿಷೇಧವನ್ನೂ ಹೇರಲಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಅದನ್ನು (ಆರೋಪ) ಸಾಬೀತುಪಡಿಸಲು ಸಾಧ್ಯವಾಗಲಿಲ್ಲ’ ಎಂದು ಅವರು ಹೇಳಿದರು.

ಆರ್‌ಎಸ್‌ಎಸ್ ವಿರುದ್ಧದ ಅವರ ಆಧಾರರಹಿತ ಆರೋಪಗಳು ದ್ವೇಷ ಭಾಷಣಕ್ಕೆ ಸಮಾನವಾಗಿವೆ ಎಂದು ಅವರು ಆರೋಪಿಸಿದರು. ಇದುವರೆಗೆ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನೆ ಮಾಡಿದರು.

‘ಹಿಂದುತ್ವವಾದಿಗಳು ಗಾಂಧಿಯನ್ನು ಕೊಂದರು ಎಂದು ಅವರು ಹೇಳುತ್ತಾರೆ. ಇದು ಕೂಡ ದ್ವೇಷದ ಭಾಷಣವಾಗಿದೆ’ ಎಂದು ರಾಹುಲ್ ಗಾಂಧಿ ಹೆಸರನ್ನು ಹೇಳದೆ ಆರ್‌ಎಸ್‌ಎಸ್ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

‘ದ್ವೇಷ ಭಾಷಣ ಮಾಡುವವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ಎಷ್ಟೇ ದೊಡ್ಡವರಾಗಿರಲಿ, ಪ್ರಭಾವಿಗಳಾಗಿರಲಿ, ಯಾವ ಪಕ್ಷ ಅಥವಾ ಗುಂಪಿಗೆ ಸೇರಿದವರಾಗಿರಲಿ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ’ ಎಂದು ಅವರು ಹೇಳಿದರು.

ಇಂದ್ರೇಶ್‌ ಕುಮಾರ್ ಅವರು ಸಂಘದ ಅಂಗಸಂಸ್ಥೆಯಾದ ‘ಮುಸ್ಲಿಂ ರಾಷ್ಟ್ರೀಯ ಮಂಚ್‌’ನ ಸಂಸ್ಥಾಪಕರು. ಮುಸ್ಲಿಮರನ್ನು ಹಿಂದೂಗಳ ಹತ್ತಿರ ತರುವುದು ಇದರ ಉದ್ದೇಶವಾಗಿದೆ. ಕ್ರಿಶ್ಚಿಯನ್ ಸಮುದಾಯವನ್ನು ತಲುಪಲು ಅವರು ಆರ್‌ಎಸ್‌ಎಸ್‌ನ ಅಡಿಯಲ್ಲೇ ‘ಕ್ರಿಶ್ಚಿಯನ್ ರಾಷ್ಟ್ರೀಯ ಮಂಚ್’ ಎಂಬ ಮತ್ತೊಂದು ಸಂಘಟನೆಯನ್ನೂ ಸ್ಥಾಪಿಸಿದ್ದರು.

ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ನ ಈ ಎರಡೂ ಸಂಘಟನೆಗಳು ಬಿಜೆಪಿ ಪರ ಕೆಲಸ ಮಾಡಲಿವೆ.

ಹರಿದ್ವಾರದ ಧರ್ಮ ಸಂಸತ್‌ನಲ್ಲಿ ಸಂತರು ಏನು ಹೇಳಿದ್ದರು?

‘ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಶುದ್ಧೀಕರಣ ಮಾಡಿದಂತೆ ಇಲ್ಲಿಯೂ ಜನಾಂಗೀಯ ಶುದ್ಧೀಕರಣ ಮಾಡಬೇಕು. ಇದಕ್ಕಾಗಿ ಪ್ರತೀ ಹಿಂದೂ ಸಾಯಲು ಮತ್ತು ಸಾಯಿಸಲು ಸಿದ್ಧನಾಗಬೇಕು. ದೇಶದ ಪ್ರತೀ ಹಿಂದೂ, ಪೊಲೀಸರು, ಸೈನಿಕರು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಕು. ಈ ಮೂಲಕ ಈ ಶುದ್ಧೀಕರಣ ಅಭಿಯಾನದಲ್ಲಿ ಭಾಗಿಯಾಬೇಕು’ ಎಂದು ಸ್ವಾಮಿ ಪ್ರಬೋಧಾನಂದ ಅವರು ಧರ್ಮ ಸಂಸತ್‌ನಲ್ಲಿ ಕರೆ ನೀಡಿದ್ದರು.

‘ನೀವು ಈಗ ಕೇವಲ ಕತ್ತಿಯಿಂದ ಹೋರಾಡಲು ಸಾಧ್ಯವಿಲ್ಲ. ಶತ್ರುವಿನ ಬಳಿ ಇರುವ ಶಸ್ತ್ರಕ್ಕಿಂತಲೂ ಬಲಾಢ್ಯವಾದ ಆಯುಧ ನಿಮ್ಮ ಬಳಿ ಇರಬೇಕು. ನೀವು ಹೊರಗೆ ಹೋಗುವಾಗ ಆಯುಧ ತೆಗೆದುಕೊಂಡು ಹೋಗಿ. ಮನೆಯಲ್ಲೂ ಸದಾ ಒಂದು ಆಯುಧ ಇರಬೇಕು. ಮನೆಗೆ ಯಾರಾದರೂ ನುಗ್ಗಿದರೆ, ಅವರು ಜೀವಂತವಾಗಿ ಹೊರಗೆ ಹೋಗಬಾರದು. ನಿಮ್ಮ ಮೊಬೈಲ್ ಕೇವಲ ₹5,000 ಮೊತ್ತದ್ದಾಗಿರಲಿ, ಆದರೆ ಆಯುಧದ ಬೆಲೆ ಕನಿಷ್ಠ ₹1 ಲಕ್ಷವಾಗಿರಲಿ’ ಎಂದು ಸ್ವಾಮಿ ಸಾಗರ ಸಿಂಧು ಮಹಾರಾಜ್ ಕರೆ ನೀಡಿದ್ದಾರೆ.

‘ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ದೇಶದ ಸಂಪನ್ಮೂಲದ ಮೇಲೆ ಅಲ್ಪಸಂಖ್ಯಾತರಿಗೇ ಪ್ರಾಥಮಿಕ ಹಕ್ಕು ಇರುವುದು ಎಂದು ಹೇಳಿದ್ದರು. ಅದನ್ನು ನಾನು ಓದಿದ್ದೆ. ಆಗ ಸಂಸದನಾಗಿದ್ದು, ಸಂಸತ್ ಭವನದಲ್ಲಿ ಇದ್ದಿದ್ದರೆ ನಾನು ನಾಥೂರಾಮ್ ಗೋಡ್ಸೆಯಾಗುತ್ತಿದ್ದೆ. ಮನಮೋಹನ್ ಸಿಂಗ್ ಎದೆಗೆ ಆರು ಗುಂಡುಗಳನ್ನು ಹಾರಿಸಿ ಕೊಲ್ಲುತ್ತಿದ್ದೆ’ ಎಂದು ಧರಂದಾಸ್ ಮಹಾರಾಜ್‌ ಹೇಳಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT