ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ಮಳೆ; ಧಗೆಯಿಂದ ವಿರಾಮ

ದೇಶದ ಹಲವೆಡೆ ಮುಂದುವರಿದ ಮಳೆ
Published 27 ಜೂನ್ 2024, 14:52 IST
Last Updated 27 ಜೂನ್ 2024, 14:52 IST
ಅಕ್ಷರ ಗಾತ್ರ

ನವದೆಹಲಿ: ಅಧಿಕ ತಾಪಮಾನದಿಂದ ಕಂಗೆಟ್ಟಿದ್ದ ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ ಸುರಿದ ಮಳೆಯು ತಂಪೆರಚಿದೆ. ಆ ವೇಳೆ ಕನಿಷ್ಠ ಉಷ್ಣಾಂಶವು 28.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಜೂನ್‌ 29 ಅಥವಾ 30ರಂದು ಮುಂಗಾರು ದೆಹಲಿಯನ್ನು ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್‌ ವೆದರ್‌ ಸರ್ವೀಸಸ್‌ ಅಂದಾಜಿಸಿತ್ತು. ಅದರೆ ಎರಡು ದಿನಗಳ ಮೊದಲೇ ಇಲ್ಲಿ ಮಳೆಯಾಗಿದೆ.

ಜೂನ್‌ನಲ್ಲಿ ಒಂಬತ್ತು ದಿನಗಳು ದೆಹಲಿಯಲ್ಲಿ ಬಿಸಿಗಾಳಿ ಬೀಸಿದೆ. 2022 ಮತ್ತು 2023ರ ಜೂನ್‌ನಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಈ ಮಳೆಯಿಂದ ಜನರಿಗೆ ಧಗೆಯಿಂದ ವಿರಾಮ ದೊರೆತಂತಾಗಿದೆ.

ಕೇರಳ: ಹಲವೆಡೆ ಆರೆಂಜ್‌ ಅಲರ್ಟ್‌

ತಿರುವನಂತಪುರ: ಕೇರಳದ ಹಲವು ಭಾಗಗಳಲ್ಲಿ ಭಾರಿ ಮಳೆ ಮುಂದುವರಿದಿರುವ ಕಾರಣ ಇಲ್ಲಿಯ ಉತ್ತರ ಭಾಗದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ (ಅತ್ಯಧಿಕ ಮಳೆಯ ಮುನ್ಸೂಚನೆ) ಮತ್ತು ಇತರ ಒಂಬತ್ತು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಪರ್ವತ ಪ್ರದೇಶ ಮತ್ತು ಪ್ರವಾಹ ಪರಿಸ್ಥಿತಿ ಇರುವ ಪ್ರದೇಶಗಳಿಗೆ ತೆರಳುವವರಿಗೆ ಎಚ್ಚರಿಕೆ ಇಲಾಖೆಯು ಎಚ್ಚರಿಕೆಯನ್ನೂ ನೀಡಿದೆ. ಇದಕ್ಕೂ ಮೊದಲು ಏಳು ಜಿಲ್ಲೆಗಳಲ್ಲಿ ಇಲಾಖೆಯು ‘ಆರೆಂಜ್‌ ಅಲರ್ಟ್‌’ ನೀಡಿತ್ತು. ಬಳಿಕ ಅದನ್ನು ಹಿಂಪಡೆಯಿತು. ಈಗ ಕಾಸರಗೋಡು ಕಣ್ಣೂರು ಮತ್ತು ವಯನಾಡ್‌ನಲ್ಲಿ ಆರೆಂಜ್‌ ಅಲರ್ಟ್‌ ಮುಂದುವರಿದೆ.

ಈ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಮಳೆ ಸುರಿಯಲಿದೆ ಎಂದು ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಪತ್ತನಂತಿಟ್ಟ ಮತ್ತು ಅಳಪ್ಪುಳ ಜಿಲ್ಲೆಗಳಲ್ಲಿ ಆಶ್ರಯ ಶಿಬಿರಗಳನ್ನು ತೆರೆಯಲಾಗಿದೆ. ಪತ್ತನಂತಿಟ್ಟ ಇಡುಕ್ಕಿ ವಯನಾಡ್‌ ಎರ್ನಾಕುಳಂ ಕೋಟಯಂ ಮತ್ತು ಅಲಪ್ಪುಳ ಜಿಲ್ಲೆಗಳು ಮತ್ತು ಕಣ್ಣೂರು ಜಿಲ್ಲೆಯ ಇರಿಟಿ ತಾಲೂಕಿನಲ್ಲಿ ಶಾಲೆ ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.

ಪ್ರವಾಹದ ನಡುವೆಯೇ ಸೇತುವೆ ಮೇಲೆ ಇಬ್ಬರು ಯುವಕರು ಕಾರು ಚಾಲನೆ ಮಾಡಿದ್ದರು. ಕಾರು ಕೊಚ್ಚಿಹೋಗಿದ್ದು ಯುವಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರೆ. ಕಾಸರಗೋಡಿನ ಮಧುರ್ ಗ್ರಾಮದ ಐದು ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದೆ. ಪೆರಿಯ ಗ್ರಾಮದಲ್ಲಿ ಬೆಳೆಹಾನಿ ಆಗಿದೆ.

ಅಸ್ಸಾಂ: ಪ್ರಮುಖ ರಸ್ತೆಗಳು ಜಲಾವೃತ

ದಿಬ್ರುಗಢ (ಅಸ್ಸಾಂ): ನಗರದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ರಸ್ತೆಗಳು ಜಲಾವೃತ್ತಗೊಂಡಿದ್ದವು. ಜನನಿಬಿಡ ರಸ್ತೆಯಾದ ಮ್ಯಾನ್‌ಕೋಟ ರಸ್ತೆಯಲ್ಲಿ ಮೊಣಕಾಲವರೆಗೂ ನೀರು ನಿಂತಿತ್ತು. ದಿಬ್ರುಗಢವು ಬ್ರಹ್ಮಪುತ್ರ ನದಿ ತಟದಲ್ಲಿದೆ ಮತ್ತು ಪ್ರತಿವರ್ಷವೂ ಇಲ್ಲಿ ಪ್ರವಾಹ ಸಂಭವಿಸುತ್ತದೆ. ಉತ್ತಮ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದೇ ವೇಳೆ ಅಸ್ಸಾಂನಲ್ಲಿ ಪ್ರವಾಹ ತಗ್ಗುವ ಮೂಲಕ ಪರಿಸ್ಥಿತಿ ಸುಧಾರಿಸುತ್ತಿದೆ. ಏಳು ಜಿಲ್ಲೆಗಳ ಸುಮಾರು 1.4 ಲಕ್ಷ ಜನರು ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹದಿಂದ ಅಸ್ಸಾಂನಲ್ಲಿ ಈ ವರ್ಷ 41 ಜನರು ಈ ವರ್ಷ ಮೃತಪಟ್ಟಿದ್ದಾರೆ. 

ರಾಜಸ್ಥಾನಕ್ಕೆ ಮುಂಗಾರು ಪ್ರವೇಶ

ಜೈಪುರ: ಒಣಹವೆಯ ರಾಜ್ಯವಾದ ರಾಜಸ್ಥಾನಕ್ಕೆ ಮುಂಗಾರು ಪ್ರವೇಶಿಸಿದೆ. ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ 12 ದಿನಗಳಲ್ಲಿ ರಾಜ್ಯವು ಉತ್ತಮ ಮಳೆ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜಸ್ಥಾನವನ್ನು ಮುಂಗಾರು ಜೂನ್‌ 26ರಂದು ಪ್ರವೇಶಿಸಿದೆ. ಕಳೆದ 24 ಗಂಟೆಗಳಲ್ಲಿ ಭರತ್‌ಪುರ ಅಜ್ಮೇರ್‌ ಮತ್ತು ಕೋಟಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಜೋಧ್ಪುರ ಬಿಕಾನೇರ್‌ ಉದಯಪುರ ಮತ್ತು ಜೈಪುರ ಜಿಲ್ಲೆಗಳಲ್ಲಿ ಗುರುವಾರ ಹಗುರದಿಂದ ಸಾಧಾರಣ ಮಳೆಯಾಗಿದೆ. ಪಾಲಿ ಜಿಲ್ಲೆಯ ದೇಸುರಾಯ್‌ (54 ಮಿಲಿ ಮೀಟರ್‌ ) ಮತ್ತು ಧೋಲ್ಪುರದಲ್ಲಿ (131 ಮಿ.ಮೀ) ದಾಖಲೆಯ ಮಟ್ಟದಲ್ಲಿ ಮಳೆಯಾಗಿದೆ.

ರಾಜಧಾನಿ ಜೈಪುರದಲ್ಲಿ ಬುಧವಾರ ಸಂಜೆಯಿಂದಲೇ ಮೋಡಕವಿದ ವಾತಾವರಣವಿದ್ದು ಸದ್ಯದಲ್ಲೇ ಮಳೆಯಾಗುವ ನಿರೀಕ್ಷೆಯಿದೆ. ಮೇ ಮತ್ತು ಜೂನ್‌ನಲ್ಲಿ ರಾಜಸ್ಥಾನವು ಬಿಸಿಗಾಳಿಯಿಂದ ತತ್ತರಿಸಿತ್ತು. ರಾಜ್ಯದ ಹಲವು ಭಾಗಗಳಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT