ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ವೈವಿಧ್ಯ ಒಗ್ಗೂಡಿಸುವ ಹಿಂದಿ: ಅಮಿತ್‌ ಶಾ

Published 14 ಸೆಪ್ಟೆಂಬರ್ 2023, 7:37 IST
Last Updated 14 ಸೆಪ್ಟೆಂಬರ್ 2023, 7:37 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತವು ವೈವಿಧ್ಯಮಯ ಭಾಷೆಗಳ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ಈ ದೇಶದಲ್ಲಿ ಭಾಷೆಗಳ ವೈವಿಧ್ಯವನ್ನು ಹಿಂದಿ ಭಾಷೆಯು ಒಂದುಗೂಡಿಸುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿ‍ಪಾದಿಸಿದರು.   

‘ಹಿಂದಿ ದಿವಸ್’ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭ ಕೋರಿರುವ ಅವರು, ‘ಹಿಂದಿಯು ಭಾರತದ ಬೇರೆ ಯಾವುದೇ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ ಮತ್ತು ಎಂದಿಗೂ ಸ್ಪರ್ಧಿಸುವುದಿಲ್ಲ’ ಎಂದೂ ಹೇಳಿದರು. 

ಹಿಂದಿಯು ವಿವಿಧ ಭಾರತೀಯ ಭಾಷೆಗಳು, ಉಪಭಾಷೆಗಳು ಮತ್ತು ಅನೇಕ ಜಾಗತಿಕ ಭಾಷೆಗಳನ್ನು ಗೌರವಿಸಿದೆ. ಅವುಗಳ ಶಬ್ದಕೋಶಗಳು, ವಾಕ್ಯಗಳು ಮತ್ತು ವ್ಯಾಕರಣ ನಿಯಮಗಳನ್ನು ಅಳವಡಿಸಿಕೊಂಡಿದೆ. ಹಿಂದಿ ಎಲ್ಲ ಸ್ಥಳೀಯ ಭಾಷೆಗಳನ್ನು ಸಬಲೀಕರಣಗೊಳಿಸುವ ಮಾಧ್ಯಮವಾಗಲಿದೆ ಎಂಬ ಖಾತರಿ ನನಗಿದೆ ಎಂದು ಅವರು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ, ಭಾರತೀಯ ಭಾಷೆಗಳಿಗೆ ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಗಳಲ್ಲಿ ಸೂಕ್ತ ಮಾನ್ಯತೆ ಹಾಗೂ ಗೌರವ ದೊರೆತಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಯಾವುದೇ ದೇಶದ ಮೂಲ ಮತ್ತು ಸೃಜನಶೀಲ ಅಭಿವ್ಯಕ್ತಿಯು ಅದರ ಸ್ವಂತ ಭಾಷೆಯ ಮೂಲಕ ಮಾತ್ರ ಸಾಧ್ಯ. ಎಲ್ಲ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯಾಗಿವೆ. ಅವುಗಳನ್ನು ನಾವು ನಮ್ಮೊಂದಿಗೆ ಮುಂದುವರಿಸಬೇಕು ಎಂದು ಅವರು ಕಿವಿಮಾತು ಹೇಳಿದರು. 

ದೇಶದಲ್ಲಿ ಅಧಿಕೃತ ಭಾಷೆ ವಿಚಾರದಲ್ಲಿ ಆಗಿರುವ ಕೆಲಸವನ್ನು ನಿಯಮಿತವಾಗಿ ಪರಿಶೀಲಿಸಲು ಅಧಿಕೃತ ಭಾಷಾ ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ದೇಶದಾದ್ಯಂತ ಸರ್ಕಾರಿ ಕೆಲಸಗಳಲ್ಲಿ ಹಿಂದಿ ಬಳಕೆಯಲ್ಲಿ ಆಗಿರುವ ಪ್ರಗತಿ ಪರಿಶೀಲಿಸುವ ಮತ್ತು ಅದರ ವರದಿ ಸಿದ್ಧಪಡಿಸಿ ರಾಷ್ಟ್ರಪತಿಯವರಿಗೆ ಸಲ್ಲಿಸುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ. ಈ ವರದಿಯ 12ನೇ ಸಂಪುಟವನ್ನು ರಾಷ್ಟ್ರಪತಿ ಅವರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

2019ರಿಂದ ಎಲ್ಲ 59 ಸಚಿವಾಲಯಗಳಲ್ಲಿ ಹಿಂದಿ ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ಅಧಿಕೃತ ಭಾಷೆಯ ಬಳಕೆ ಹೆಚ್ಚಿಸುವ ದೃಷ್ಟಿಯಿಂದ, ಇಲ್ಲಿಯವರೆಗೆ ಒಟ್ಟು 528 ಪಟ್ಟಣಗಳಲ್ಲಿ ಅಧಿಕೃತ ಭಾಷಾ ಅನುಷ್ಠಾನ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು. 

ಸ್ವಾತಂತ್ರ್ಯ ಚಳವಳಿಗೂ ಕೊಡುಗೆ

ಸ್ವಾತಂತ್ರ್ಯ ಚಳವಳಿಯ ಕಷ್ಟದ ದಿನಗಳಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆ ಅಭೂತಪೂರ್ವ ಪಾತ್ರ ವಹಿಸಿದೆ. ಇದು ಅನೇಕ ಭಾಷೆಗಳು ಮತ್ತು ಉಪಭಾಷೆಗಳಾಗಿ ವಿಭಜನೆಗೊಂಡಿದ್ದ ದೇಶದಲ್ಲಿ ಏಕತೆಯ ಭಾವನೆಯನ್ನು ಹುಟ್ಟುಹಾಕಿದೆ. ಸಂವಹನ ಭಾಷೆಯಾಗಿ ಹಿಂದಿ, ದೇಶದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವರಾಜ್ಯ ಮತ್ತು ಸ್ವಭಾಷಾ ಸಾಧಿಸುವ ಆಂದೋಲನಗಳು ದೇಶದಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ ಎಂದು ಅಮಿತ್‌ ಶಾ ವಿಶ್ಲೇಷಿಸಿದರು. 

‘ಶಾ ಹೇಳಿಕೆ ಅಸಂಬದ್ಧ’

ಚೆನ್ನೈ (ಪಿಟಿಐ): ‘ಹಿಂದಿ ಭಾಷೆಯು ಭಾರತದ ಭಾಷಾ ವೈವಿಧ್ಯವನ್ನು ಒಂದುಗೂಡಿಸಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಅಸಂಬದ್ಧವಾದುದು’ ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ಟೀಕಿಸಿದ್ದಾರೆ.

‘ಹಿಂದಿಯನ್ನು ಕೇವಲ 4–5 ರಾಜ್ಯಗಳಲ್ಲಿ ಮಾತನಾಡಲಾಗುತ್ತದೆ. ಹಿಂದಿ ಜನರನ್ನು ಒಗ್ಗೂಡಿಸುತ್ತದೆ, ಪ್ರಾದೇಶಿಕ ಭಾಷೆಗಳಿಗೆ ಶಕ್ತಿ ತುಂಬಲಿದೆ ಎಂದು ಹೇಳುವ ಮೂಲಕ ಶಾ ಅವರು  ಎಂದಿನಂತೆ ಹಿಂದಿ ಭಾಷಾ ಪ್ರೇಮ ಮೆರೆದಿದ್ದಾರೆ’ ಎಂದು ಸ್ಟಾಲಿನ್‌ ವ್ಯಂಗ್ಯವಾಡಿದ್ದಾರೆ. 

ಎಕ್ಸ್ ವೇದಿಕೆಯಲ್ಲಿ ಸಂದೇಶ ಪೋಸ್ಟ್ ಮಾಡಿರುವ ಅವರು, ‘ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲಯಾಳ ಬಳಕೆಯಲ್ಲಿರುವ ಭಾಷೆ. ಹಿಂದಿ ಈ ಎರಡು ರಾಜ್ಯಗಳನ್ನು ಹೇಗೆ ಒಗ್ಗೂಡಿಸಲಿದೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT