ಪಟ್ನಾ:ಆ ಊರಿನಲ್ಲಿ ಮುಸ್ಲಿಮರೇ ಇಲ್ಲ, ಆದರೂ ಅಲ್ಲಿರುವ 200 ವರ್ಷ ಹಳೆಯ ಮಸೀದಿಯಲ್ಲಿ ನಿತ್ಯ ಆಜಾನ್ (ಬೆಳಗ್ಗಿನ ನಮಾಜ್‌ಗೆ ಮಸೀದಿಯಿಂದ ಕೂಗುವ ಕರೆ) ಕೇಳಿಬರುತ್ತದೆ. ಪ್ರತಿ ದಿನ ಐದು ಹೊತ್ತು ನಮಾಜ್ ನಡೆಯುತ್ತದೆ. ಇದನ್ನೆಲ್ಲ ಹಿಂದೂಗಳೇ ನಡೆಸಿಕೊಂಡು ಬರುತ್ತಿದ್ದಾರೆ!
ಹೌದು, ಇದು ಬಿಹಾರದ ನಲಂದಾ ಜಿಲ್ಲೆಯ ಮಾಧಿ ಗ್ರಾಮದ ನೈಜ ಕಥೆ. ಈ ಗ್ರಾಮ ಹಿಂದೆ ಮುಸ್ಲಿಮ್ ಬಾಹುಳ್ಯದಿಂದ ಕೂಡಿತ್ತು. ಕ್ರಮೇಣ ಅವರೆಲ್ಲ ಇತರೆಡೆಗಳಿಗೆ ವಲಸೆ ತೆರಳಿದ್ದರಿಂದ ಸದ್ಯ ಹಿಂದೂಗಳು ಮಾತ್ರ ಇಲ್ಲಿ ನೆಲೆಸಿದ್ದಾರೆ. ಹೀಗಾಗಿ ಎರಡು ಶತಮಾನಗಳಷ್ಟು ಹಳೆಯದಾದ ಮಸೀದಿನ್ನು ಹಿಂದೂಗಳೇ ನಿರ್ವಹಿಸುತ್ತಿದ್ದಾರೆ ಎಂದು ಸ್ಥಳೀಯರ ಹೇಳಿಕೆ ಉಲ್ಲೇಖಿಸಿ ಇಂಡಿಯಾ ಟುಡೆವರದಿ ಮಾಡಿದೆ.
‘ಆಜಾನ್ ಎಂದರೇನೆಂದು ನಮಗೆ ಗೊತ್ತಿಲ್ಲ. ಆದರೆ, ಧ್ವನಿಮುದ್ರಿಸಿ ಇಟ್ಟುಕೊಂಡಿರುವ ಆಜಾನ್ ಅನ್ನು ಪ್ರತಿದಿನ ಪ್ರಾರ್ಥನೆ ವೇಳೆ ಮೊಳಗಿಸಲಾಗುತ್ತದೆ’ ಎಂದು ಗ್ರಾಮದ ನಿವಾಸಿ ಹನ್ಸ್ ಕುಮಾರ್ ಹೇಳಿದ್ದಾರೆ.
ಮಸೀದಿಯ ಬಗ್ಗೆ ಕಾಳಜಿ ವಹಿಸುವವರು ಗ್ರಾಮದಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಹಿಂದೂಗಳೇ ಮುಂದೆ ಬರಬೇಕಾಯಿತು ಎಂದು ಸದ್ಯ ಮಸೀದಿಯ ನಿರ್ವಹಣೆ ಮಾಡುತ್ತಿರುವ ಗೌತಮ್ ಎಂಬುವವರು ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.
‘ಮಸೀದಿಯನ್ನು ಕಟ್ಟಿಸಿದ್ದು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಯಾವುದೇ ಶುಭ ಕಾರ್ಯ ನಡೆಸುವುದಕ್ಕೂ ಮೊದಲು ಹಿಂದೂಗಳು ಈ ಮಸೀದಿಗೆ ಭೇಟಿ ನೀಡುತ್ತಾರೆ’ಎಂದೂ ಗೌತಮ್ ತಿಳಿಸಿದ್ದಾರೆ.
‘ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆಯ ಪ್ರಾರ್ಥನೆ ಬಳಿಕ ಮಸೀದಿಯನ್ನು ಸ್ವಚ್ಛಗೊಳಿಸಲಾಗುತ್ತದೆ. ಯಾವುದಾದರೂ ಸಮಸ್ಯೆಗಳಲ್ಲಿ ಸಿಲುಕಿಕೊಂಡವರು ಅದರಿಂದ ಪಾರಾಗುವ ಸಲುವಾಗಿ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ’ ಎಂದು ಗ್ರಾಮದ ಅರ್ಚಕರೊಬ್ಬರು ಹೇಳಿದ್ದಾರೆ.