ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾಗಳಿಗೆ ಫ್ಲ್ಯಾಟ್: ಮತ್ತೆ ವಿವಾದದಲ್ಲಿ ಕೇಂದ್ರ ಸರ್ಕಾರ

ಬಿಜೆಪಿ ಬೆಂಬಲಿಗರಿಂದಲೇ ವಿರೋಧ; ಅಕ್ರಮ ವಿದೇಶಿಗರಿಗೆ ಪುನರ್ವಸತಿ ಇಲ್ಲ– ಗೃಹ ಸಚಿವಾಲಯ ಸ್ಪಷ್ಟನೆ
Last Updated 17 ಆಗಸ್ಟ್ 2022, 15:38 IST
ಅಕ್ಷರ ಗಾತ್ರ

ನವದೆಹಲಿ:ದೆಹಲಿಯ ಬಕ್ಕಾರ್‌ವಾಲಾದಲ್ಲಿರುವ ಇಡಬ್ಲ್ಯುಎಸ್ (ಆರ್ಥಿಕವಾಗಿ ದುರ್ಬಲ ವರ್ಗದವರು) ಫ್ಲ್ಯಾಟ್‌ಗಳಲ್ಲಿರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಗೆಪುನರ್ವಸತಿ ಕಲ್ಪಿಸುವುದಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್‌ ಪುರಿ ಘೋಷಿಸಿರುವುದು ಬಿಜೆಪಿಯ ಹಲವು ಬೆಂಬಲಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಬುಲ್ಲಿ ಬಾಯ್‌ ಆ್ಯಪ್‌ ಮತ್ತು ನೂಪುರ್‌ ಶರ್ಮಾ ವಿವಾದಗಳು ಮಾಸುವ ಮೊದಲೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಕೇಂದ್ರ ಸಚಿವರ ಈ ಹೇಳಿಕೆ ಮತ್ತೊಂದು ವಿವಾದ ಮೆತ್ತಿಕೊಳ್ಳುವಂತೆ ಮಾಡಿದೆ.ಕೆಲವೇ ತಿಂಗಳ ಅಂತರದಲ್ಲಿ ಸರ್ಕಾರದ ಈ ನಿರ್ಧಾರದ ವಿರುದ್ಧಬಿಜೆಪಿಯ ಪ್ರಮುಖ ಮತದಾರರುಕಿಡಿಕಾರುತ್ತಿರುವ ಮೂರನೇ ಘಟನೆ ಇದು.

ಪಾಕಿಸ್ತಾನದಿಂದ ವಲಸೆ ಬಂದ ಹಿಂದೂ ನಿರಾಶ್ರಿತರುಉತ್ತರ ದೆಹಲಿಯ ಮಜ್ನು-ಕಾ-ತಿಲಾದಲ್ಲಿ ಅಮಾನವೀಯ ಪರಿಸ್ಥಿತಿಗಳಲ್ಲಿ ಬದುಕುತ್ತಿರುವಾಗ, ಕೇಂದ್ರ ಸಚಿವರ ಇಂತಹ ಘೋಷಣೆಯು ಶೋಚನೀಯವಾದುದು ಎಂದು ವಿಶ್ವ ಹಿಂದೂ ಪರಿಷತ್‌ ಕಿಡಿಕಾರಿದೆ.

ಹರ್ದೀಪ್ ಸಿಂಗ್‌ ಪುರಿ ಅವರ ಟ್ವಿಟರ್‌ ಹೇಳಿಕೆಗೆ ಆಮ್‌ ಆದ್ಮಿ ಪಕ್ಷವೂ ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ‘ರೋಹಿಂಗ್ಯಾ ವಲಸಿಗರಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಿದೆ. ಈ ವಿಚಾರದಲ್ಲಿ ಮೋದಿ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಬೆಂಬಲಿಗರಿಂದ ಆಕ್ರೋಶ ಹೆಚ್ಚುತ್ತಿದ್ದಂತೆ ಸಷ್ಟನೆ ನೀಡಿರುವ ಕೇಂದ್ರ ಸರ್ಕಾರ, ‘ಅಕ್ರಮ ವಿದೇಶಿಗರಾದ ರೋಹಿಂಗ್ಯಾ ಸಮುದಾಯದವರಿಗೆ ಇಡಬ್ಲ್ಯುಎಸ್‌ ಫ್ಲ್ಯಾಟ್‌ಗಳಲ್ಲಿ ಪುನರ್ವಸತಿ ಕಲ್ಪಿಸುತ್ತಿಲ್ಲ. ಆದರೆ, ದೆಹಲಿ ಸರ್ಕಾರ ರೋಹಿಂಗ್ಯಾ ಸಮುದಾಯದವರನ್ನು ಬೇರೆಡೆ ಸ್ಥಳಾಂತರಿಸುವ ಪ್ರಸ್ತಾವ ಇಟ್ಟಿದೆ’ ಎಂದು ಹೇಳಿದೆ.

ಫ್ಲ್ಯಾಟ್‌ ನೀಡಲು ಸೂಚಿಸಿಲ್ಲ:ಗೃಹ ಸಚಿವಾಲಯ

ಅಕ್ರಮ ವಲಸಿಗ ರೋಹಿಂಗ್ಯಾ ಸಮುದಾಯದವರಿಗೆ ದೆಹಲಿಯಲ್ಲಿ ನೆಲೆಸಲು ಫ್ಲ್ಯಾಟ್‌ಗಳನ್ನು ಒದಗಿಸುವಂತೆ ಯಾವುದೇ ನಿರ್ದೇಶನ ನೀಡಿಲ್ಲ ಎಂದುಕೇಂದ್ರ ಗೃಹ ಸಚಿವಾಲಯವೂ ಸ್ಪಷ್ಟಪಡಿಸಿದೆ.

ರೋಹಿಂಗ್ಯಾ ಅಕ್ರಮ ವಿದೇಶಿಯರ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೆ ಸಂಬಂಧಿಸಿ ಸಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರರು, ದೆಹಲಿಯ ಬಕ್ಕಾರ್‌ವಾಲಾದಲ್ಲಿ ರೋಹಿಂಗ್ಯಾ ವಲಸಿಗರಿಗೆ ಇಡಬ್ಲ್ಯುಎಸ್ ಫ್ಲ್ಯಾಟ್ ಒದಗಿಸಲು ಯಾವುದೇ ನಿರ್ದೇಶನ ನೀಡಿಲ್ಲ.ರೋಹಿಂಗ್ಯಾ ವಲಸಿಗರನ್ನು ಕಾನೂನು ಪ್ರಕಾರ ಗಡೀಪಾರು ಮಾಡುವವರೆಗೆ ಅವರು ಈಗ ಇರುವ ಸ್ಥಳವನ್ನೇ ಬಂಧನ ಕೇಂದ್ರವಾಗಿ ಘೋಷಿಸಲು ದೆಹಲಿ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಗೃಹ ಸಚಿವಾಲಯದ ಸ್ಪಷ್ಟನೆಗೂ ಮೊದಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ, ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕಾರ್‌ವಾಲಾದಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಸೌಕರ್ಯಗಳು ಮತ್ತು ಪೊಲೀಸ್ ರಕ್ಷಣೆ ಒದಗಿಸಲಾಗುವುದು ಎಂದು ಹೇಳಿದ್ದರು.

ಮ್ಯಾನ್ಮಾರ್‌ನಿಂದ ಬಂದಿರುವ ರೋಹಿಂಗ್ಯಾ ನಿರಾಶ್ರಿತರು ಸೇರಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಗಡೀಪಾರು ಮಾಡುವ ಪ್ರಕ್ರಿಯೆ ನಿರಂತರ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT